ಮುಂಬಯಿ: ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಅವರು ಪ್ರಧಾನಿ ವಿರುದ್ಧ ಧಮಕಿಯ ಮಾತಾಡಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ''ಮೋದಿಯನ್ನು ನಾನು ಹೊಡೆಯಬಲ್ಲೆ. ಅಂತಹ ಸಂದರ್ಭ ಎದುರಾದರೆ ಬೈದು ಬುದ್ಧಿ ಕಲಿಸಬಲ್ಲೆ,'' ಎಂದು ಪಟೋಲೆ ಗುಡುಗಿದ್ದಾರೆ. ಜಿಲ್ಲಾ ಪಂಚಾಯಿತಿ ಚುನಾವಣಾ ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡ ಬಳಿಕ ಪಕ್ಷದ ಕಾರ್ಯಕರ್ತರ ಜತೆ ಮಾತನಾಡುವ ವೇಳೆ ನಾನಾ ಪಟೋಲೆ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ''ನಾನು ಕಳೆದ 30 ವರ್ಷದಿಂದ ರಾಜಕೀಯದಲ್ಲಿ ಇದ್ದೇನೆ. ನನ್ನ ಹೆಸರಿನಲ್ಲಿ ಒಂದೇ ಒಂದು ಶಾಲೆ ಇಲ್ಲ. ನಾನು ಎಲ್ಲರಿಗೂ ಸಹಾಯ ಮಾಡುತ್ತೇನೆ. ಮೋದಿ ಮಹಾ ನಾಯಕ ಏನೂ ಅಲ್ಲ. ಆತನಿಗೆ ನಾನು ಹೊಡೆಯಬಲ್ಲೆ. ಅಗತ್ಯ ಬಿದ್ದರೆ ಬೈದು ಬುದ್ಧಿ ಕಲಿಸಲೂಬಲ್ಲೆ,'' ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ''ನಾನು ನೇರ ನಡೆನುಡಿಯ ದಿಟ್ಟ ಮನುಷ್ಯ ಅನ್ನುವ ಕಾರಣಕ್ಕೆ ಮೋದಿ ನನ್ನ ವಿರುದ್ಧ ಪ್ರಚಾರಕ್ಕೆ ಬಂದಿದ್ದರು. ಅದೇನೇ ಇರಲಿ, ಪ್ರಾಮಾಣಿಕ ನಾಯಕತ್ವ ಸದಾ ನಿಮ್ಮ ಮುಂದೆ ಇರುತ್ತದೆ, ಚಿಂತಿಸಬೇಡಿ,'' ಎಂದು ಕಾರ್ಯಕರ್ತರಿಗೆ ಧೈರ್ಯ ತುಂಬಿದರು. ಫಡ್ನವಿಸ್ ಖಂಡನೆ ಪಟೋಲೆ ಹೇಳಿಕೆಗೆ ಪ್ರತಿಪಕ್ಷ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 'ಪಾಕಿಸ್ತಾನದ ಗಡಿ ಸಮೀಪ ಪಂಜಾಬಿನಲ್ಲಿ ಪ್ರಧಾನಿ ಮೋದಿ ಅವರ ಬೆಂಗಾವಲು ಪಡೆಯನ್ನು 20 ನಿಮಿಷಗಳ ಕಾಲ ತಡೆಯಲಾಯಿತು. ಅಷ್ಟಾಗಿದ್ದರೂ ಅದು ಅಲ್ಲಿನ ಮುಖ್ಯಮಂತ್ರಿ ಗಮನಕ್ಕೆ ಬಂದಿರಲೇ ಇಲ್ಲ. ಈಗ ಇಲ್ಲಿ ಮಹಾರಾಷ್ಟ್ರದ ಕಾಂಗ್ರೆಸ್ ಅಧ್ಯಕ್ಷ ಪಟೋಲೆ, ಪ್ರಧಾನಿ ವಿರುದ್ಧ ಬಾಯಿಗೆ ಬಂದದ್ದನ್ನು ಮಾತಾಡಿ ತಮ್ಮ ಯೋಗ್ಯತೆ ಪ್ರದರ್ಶಿಸುತ್ತಿದ್ದಾರೆ,'' ಎಂದು ಟೀಕಿಸಿದ್ದಾರೆ. ಕಾಂಗ್ರೆಸ್ ಸ್ಪಷ್ಟೀಕರಣ ನಾನಾ ಪಟೋಲೆ ಅವರ ಹೇಳಿಕೆ ವಿವಾದ ಸೃಷ್ಟಿಸುತ್ತಿದ್ದಂತೆಯೇ ಕಾಂಗ್ರೆಸ್ ಸಮಜಾಯಿಷಿ ನೀಡುವ ಮೂಲಕ ಅದನ್ನು ತಣ್ಣಗಾಗಿಸಲು ಪ್ರಯತ್ನಿಸಿದೆ. ಪಕ್ಷದ ಅಧ್ಯಕ್ಷ ಪಟೋಲೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಉಲ್ಲೇಖಿಸಿ ನೀಡಿರುವ ಹೇಳಿಕೆಯಲ್ಲ. ಅವರ ಸರ್‌ನೇಮ್ ಇರುವ ಒಬ್ಬ ಗೂಂಡಾನ ಹೆಸರನ್ನು ಅವರು ಪ್ರಸ್ತಾಪಿಸಿದ್ದಾರೆ. ಮೋದಿ ಎಂದೇ ಹೆಸರಾಗಿರುವ ಸ್ಥಳೀಯ ಗೂಂಡಾ ಬಗ್ಗೆ ಪಟೋಲೆ ಅವರ ಕ್ಷೇತ್ರದ ಜನರು ದೂರು ನೀಡುತ್ತಿದ್ದಾರೆ. ಪಟೋಲೆ ಅವರು ಮಾತನಾಡಿರುವುದು ಆ ವ್ಯಕ್ತಿಯ ವಿರುದ್ಧವೇ ಹೊರತು ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅಲ್ಲ ಎಂದು ಪ್ರಧಾನ ಕಾರ್ಯದರ್ಶಿ ಅತುಲ್ ಲೊಂಡೆ ಸ್ಪಷ್ಟನೆ ನೀಡಿದ್ದಾರೆ. ಅದು ಗೋಪನ್ರವ್ ಮೋದಿ ಕುರಿತು ನೀಡಿರುವ ಹೇಳಿಕೆ. ನರೇಂದ್ರ ಮೋದಿ ಅವರಲ್ಲ ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ. ಆದರೆ ಬಿಜೆಪಿ ನಾಯಕರು ಪಟೋಲೆ ಹೇಳಿಕೆ ನರೇಂದ್ರ ಮೋದಿ ಅವರ ಕುರಿತಾಗಿಯೇ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ವಿವಾದದ ಬಳಿಕ ಸಮರ್ಥಿಸಿಕೊಳ್ಳಲು ಕಾಂಗ್ರೆಸ್ ನಾಯಕರು ಈ ಸಮಜಾಯಿಷಿ ನೀಡಿ ಜಾರಿಗೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
from India & World News in Kannada | VK Polls https://ift.tt/34ZPyDY