ಬೆಂಗಳೂರು: ಒಮಾನ್ ಆತಿಥ್ಯದಲ್ಲಿ ನಡೆಯುತ್ತಿರುವ ನಿವೃತ್ತ ಕ್ರಿಕೆಟಿಗರನ್ನು ಒಳಗೊಂಡ ಚೊಚ್ಚಲ ಆವೃತ್ತಿಯ ಲೆಜೆಂಡ್ಸ್ ಕ್ರಿಕೆಟ್ ಲೀಗ್ ಟೂರ್ನಿಯಲ್ಲಿ ತಂಡ ಬ್ಯಾಕ್ ಟು ಬ್ಯಾಕ್ ಸೋಲಿನ ಆಘಾತಕ್ಕೊಳಗಾಗಿದೆ. ಮೂರು ತಂಡಗಳನ್ನು ಒಳಗೊಂಡ ಟೂರ್ನಿಯ ರೌಂಡ್ ರಾಬಿನ್ ಹಂತದಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಎದುರು ಗೆದ್ದು ಬೀಗಿದ್ದ ಇಂಡಿಯಾ ಮಹಾರಾಜಾಸ್ ತಂಡ, ಇದೀಗ ಏಷ್ಯಾ ವಿರುದ್ಧದ ಎರಡನೇ ಪಂದ್ಯದಲ್ಲಿ 36 ರನ್‌ಗಳಿಂದ ಸೋತು ಸುಣ್ಣವಾಗಿದೆ. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಏಷ್ಯಾ ಲಯನ್ಸ್ 29 ರನ್ ಗಳಿಸುವ ಹೊತ್ತಿಗೆ 2 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತ್ತು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಶ್ರೀಲಂಕಾದ ಎಡಗೈ ಬ್ಯಾಟ್ಸ್‌ಮನ್ ಉಪುಲ್ ತರಂಗ (45 ಎಸೆತಗಳಲ್ಲಿ 72 ರನ್) ಮತ್ತು ಅಫಘಾನಿಸ್ತಾನದ ಮಾಜಿ ನಾಯಕ (28 ಎಸೆತಗಳಲ್ಲಿ ಅಜೇಯ 69 ರನ್) ಅವರ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನದ ಫಲವಾಗಿ ಲಯನ್ಸ್ ಬೃಹತ್ ಮೊತ್ತ ಪೇರಿಸಿತು. ಇನಿಂಗ್ಸ್ ಮಧ್ಯದಲ್ಲಿ ಪಾಕಿಸ್ತಾನದ ಬ್ಯಾಟಿಂಗ್ ದಿಗ್ಗಜ ಮೊಹಮ್ಮದ್ ಯೂಸುಫ್ 26 ರನ್‌ಗಳ ಕೊಡುಗೆ ಕೊಟ್ಟರು. ಏಷ್ಯಾ ಲಯನ್ಸ್ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 193 ರನ್‌ಗಳ ಶಿಖರ ನಿರ್ಮಿಸಿತು. ಕಳೆದ ಪಂದ್ಯದಲ್ಲಿ 210 ರನ್ ಗಳಿಸಿಯೂ ವರ್ಲ್ಡ್ ಜಯಂಟ್ಸ್ ಎದುರು ಸೋತಿದ್ದ ಇಂಡಿಯಾ ಮಹಾರಾಜಾಸ್ 194 ರನ್ ಗುರಿ ಮೆಟ್ಟಿ ನಿಲ್ಲುವಲ್ಲಿ ವಿಫಲವಾಯಿತು. ಕಳೆದ ಪಂದ್ಯದಲ್ಲಿ 140 ರನ್ ಸಿಡಿಸಿ ಅಬ್ಬರಿಸಿದ್ದ ನಮನ್ ಓಜಾ, ಲಯನ್ಸ್ ಎದುರು ಕೇವಲ 4 ರನ್‌ಗಳಿಗೆ ಪೆವಿಲಿಯನ್ ಸೇರಿದರು. ವಸೀಮ್ ಜಾಫರ್ 25 ಎಸೆತಗಳಲ್ಲಿ 35 ರನ್‌ಗಳ ಕೊಡುಗೆ ಸಲ್ಲಿಸಿದರು. ಯೂಸುಫ್ ಪಠಾಣ್ (21), ಸ್ಟುವರ್ಟ್ ಬಿನ್ನಿ (25) ಮತ್ತು ಮನ್‌ಪ್ರೀತ್ ಗೂನಿ (35*) ಹೋರಾಡಿದರೂ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 157 ರನ್ ಗಳಿಸಲಷ್ಟೇ ಶಕ್ತವಾದ ಇಂಡಿಯಾ ಸತತ ಸೋಲಿಗೆ ಶರಣಾಯಿತು. ಏಷ್ಯಾ ಲಯನ್ಸ್ ಪರ ಮಿಂಚಿದ ನುವಾನ್ ಕುಲಶೇಖರ (14ಕ್ಕೆ 2), ಮೊಹಮ್ಮದ್ ರಫೀಕ್ (32ಕ್ಕೆ 2) ಮತ್ತು ಅಸ್ಗರ್ ಅಫ್ಘಾನ್ (23ಕ್ಕೆ 2) ಭರ್ಜರಿ ಬೌಲಿಂಗ್ ದಾಳಿ ಸಂಘಟಿಸಿ ಲಯನ್ಸ್‌ಗೆ ಜಯ ತಂದರು. ಆಲ್‌ರೌಂಡ್ ಆಟವಾಡಿದ ಅಸ್ಗರ್ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು. ಸಂಕ್ಷಿಪ್ತ ಸ್ಕೋರ್‌ಏಷ್ಯಾ ಲಯನ್ಸ್: 20 ಓವರ್‌ಗಳಲ್ಲಿ 4 ವಿಕೆಟ್‌ಗೆ 193 ರನ್ (ಉಪುಲ್ ತರಂಗ 72, ಅಸ್ಗರ್ ಅಫ್ಘಾನ್ 69*; ಅಮಿತ್ ಭಂಡಾರಿ 41ಕ್ಕೆ 2). ಇಂಡಿಯಾ ಮಹಾರಾಜಾಸ್: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 157 ರನ್ (ವಸೀಮ್ ಜಾಫರ್ 35, ಸ್ಟುವರ್ಟ್ ಬಿನ್ನಿ 25, ಮನ್‌ಪ್ರೀತ್ ಗೂನಿ 35*; ನುವಾನ್ ಕುಲಶೇಖರ 14ಕ್ಕೆ 2, ಮೊಹಮ್ಮದ್ ರಫೀಕ್ 32ಕ್ಕೆ 2, ಅಸ್ಗರ್ ಅಫ್ಘಾನ್ 23ಕ್ಕೆ 2).
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3rP5dOb