ಬೆಂಗಳೂರು: ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗಾಗಿ ಬಾಡಿವೋರ್ನ್ ಕ್ಯಾಮೆರಾ ಖರೀದಿಗೆ ಹೊರಡಿಸಿರುವ ಕಾರ್ಯಾದೇಶ ಹಾಗೂ ಅದಕ್ಕೆ ಸಂಬಂಧಿಸಿದ ದಾಖಲೆಯನ್ನು ಸಲ್ಲಿಸುವಂತೆ ಸರಕಾರಕ್ಕೆ ಹೈಕೋರ್ಟ್ ಸೂಚಿಸಿದೆ. ಅಲ್ಲದೇ ಒಂದು ವಾರ ಗಡುವು ನೀಡಿದೆ. ವಕೀಲೆ ಗೀತಾ ಮಿಶ್ರಾ ಸಲ್ಲಿಸಿರುವ ಪಿಐಎಲ್ ಹೈಕೋರ್ಟ್ ಸಿಜೆ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠದ ಮುಂದೆ ಗುರುವಾರ ವಿಚಾರಣೆಗೆ ಬಂದಿತ್ತು. ಸರಕಾರಿ ವಕೀಲರು, ‘ಬಾಡಿವೋರ್ನ್ ಕ್ಯಾಮೆರಾ ಖರೀದಿಗಾಗಿ ಹೊರಡಿಸಿರುವ ಕಾರ್ಯಾದೇಶ ಮತ್ತು ಇತರ ದಾಖಲೆಗಳು ಸಿದ್ಧ ಇವೆ. ಆದರೆ, ತಾಂತ್ರಿಕ ಸಮಸ್ಯೆಯಿಂದ ಇ-ಫೈಲಿಂಗ್ ಮಾಡಲಾಗಲಿಲ್ಲ. ಒಂದು ವಾರ ಕಾಲಾವಕಾಶ ನೀಡಿದರೆ ಎಲ್ಲಾ ಅಗತ್ಯ ಮಾಹಿತಿ ಸಲ್ಲಿಸಲಾಗುವುದು’ ಎಂದರು. ಈ ಮನವಿ ಪುರಸ್ಕರಿಸಿದ ನ್ಯಾಯಪೀಠ, ವಿಚಾರಣೆಯನ್ನು ಫೆ.7ಕ್ಕೆ ಮುಂದೂಡಿ, ‘ಇದೇ ಕೊನೆಯ ಅವಕಾಶ. ಮತ್ತೆ ಸಮಯ ನೀಡುವುದಿಲ್ಲ’ ಎಂದು ಹೇಳಿತು. ಏನಿದು ಪ್ರಕರಣ?: ‘ ನಗರ ಪೊಲೀಸರಿಗಾಗಿ ಖರೀದಿಸಿರುವ 50 ಬಾಡಿ ವೋರ್ನ್ ಕ್ಯಾಮೆರಾಗಳನ್ನು ಬಳಸುವಂತೆ ಸರಕಾರಕ್ಕೆ ನಿರ್ದೇಶಿಸಬೇಕು. ಪೊಲೀಸರ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಅನುಕೂಲವಾಗುವಂತೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬಾಡಿವೋರ್ನ್ ಕ್ಯಾಮೆರಾ ಖರೀದಿಸಲು ಸರಕಾರಕ್ಕೆ ನಿರ್ದೇಶಿಸಬೇಕು’ ಎಂದು ವಕೀಲೆ ಗೀತಾ ಮಿಶ್ರಾ ಅವರು ಪಿಐಎಲ್‌ನಲ್ಲಿ ನ್ಯಾಯಾಲಯವನ್ನು ಕೋರಿದ್ದರು.
from India & World News in Kannada | VK Polls https://ift.tt/3G22FBi