ಜೊಹಾನ್ಸ್‌ಬರ್ಗ್: ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲಿ ಕಳಪೆ ಬ್ಯಾಟಿಂಗ್ ಫಲವಾಗಿ ಮೊದಲ ಇನಿಂಗ್ಸ್‌ನಲ್ಲಿ 202 ರನ್‌ಗಳಿಗೆ ಆಲ್‌ಔಟ್ ಆಗಿದೆ. ಗಾಯದ ಮೇಲೆ ಬರೆ ಎಂಬಂತೆ ಬೌಲಿಂಗ್ ವೇಳೆ ಮೊದಲ ದಿನದಾಟದಲ್ಲೇ ವೇಗಿ ಮೊಹಮ್ಮದ್ ಸಿರಾಜ್ ಅವರ ಸೇವೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ತಂಡದ ಪ್ರಮುಖ ವೇಗಿ ಆಗಿರುವ ಸಿರಾಜ್, ತಮ್ಮ ನಾಲ್ಕನೇ ಓವರ್‌ನ 5ನೇ ಎಸೆತ ಎಸೆಯುವಾಗ ತೊಡೆಯ ಸ್ನಾಯು ಸೆಳೆತ ಸಮಸ್ಯೆಗೆ ತುತ್ತಾಗಿ ಕುಂಟುತ್ತಲೇ ಅಂಗಣದಿಂದ ಹೊರನಡೆದರು. ಹೀಗಾಗಿ ಎರಡನೇ ದಿನ ಸಿರಾಜ್ ಬೌಲಿಂಗ್‌ಗೆ ಮರಳುತ್ತಾರೆಯೇ? ಅಥವಾ ಇಲ್ಲವೇ ಎಂಬುದು ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಕಾಡುತ್ತಿರುವ ಬಹುದೊಡ್ಡ ಪ್ರಶ್ನೆಯಾಗಿದೆ. ಈ ಬಗ್ಗೆ ಭಾರತ ತಂಡದ ಅನುಭವಿ ಆಫ್ ಸ್ಪಿನ್ನರ್ ಮಾಹಿತಿ ನೀಡಿದ್ದಾರೆ. ಮೊದಲ ದಿನದಾಟದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಆರ್ ಅಶ್ವಿನ್, ವೇಗಿ ಸಿರಾಜ್ ಅವರೊಟ್ಟಿಗೆ ಫಿಸಿಯೋಗಳು ಕೆಲಸ ಮಾಡುತ್ತಿದ್ದು, ಶೀಘ್ರವೇ ಚೇತರಿಸುವ ಸಾಧ್ಯತೆ ಇದೆ ಎಂದಿದ್ದಾರೆ. "ಪತ್ರಿಕಾಗೋಷ್ಠಿಗೆ ಬರುವ ಮೊದಲೇ ನಾನು ಸಿರಾಜ್ ಬಗ್ಗೆ ಕೇಳಿದರೆ ಏನು ಹೇಳಬೇಕು ಎಂದು ಫಿಸಿಯೋ ಆನಂದ್ ಅವರಲ್ಲಿ ಕೇಳಿದ್ದೆ. ಅದಕ್ಕವರು ಸದ್ಯಕ್ಕೆ ವೈದ್ಯಕೀಯ ಸಿಬ್ಬಂದಿ ರಾತ್ರಿ ಪೂರ ಅವರಿಗೆ ಆರೈಕೆ ಮಾಡಲಿದೆ. ಸದ್ಯಕ್ಕೆ ಏನನ್ನೂ ಹೇಳಲಾಗದು. ಈ ರೀತಿಯ ಸಮಸ್ಯೆಗಳಿಗೆ ಮೊದಲು ಕೆಲ ಗಂಟೆಗಳ ಕಾಲ ಐಸ್ ಥೆರಪಿ ಕೊಡಬೇಕಾಗುತ್ತದೆ. ನಂತರ ಅದರ ಫಲಿತಾಂಶ ಹೇಗಿದೆ ಎಂಬುದನ್ನು ಪರಿಶೀಲಿಸಬೇಕು ಎಂದಿದ್ದರು. ಇನ್ನು ಸಿರಾಜ್ ಬಗ್ಗೆ ನಮಗೆಲ್ಲರಿಗೂ ಗೊತ್ತಿದೆ. ಖಂಡಿತಾ ಆತ ಚೇತರಿಸಿ ಬೌಲಿಂಗ್ ಮಾಡಲು ಬರುತ್ತಾನೆ ಎಂಬ ವಿಶ್ವಾಸ ನನಗಿದೆ," ಎಂದು ಅಶ್ವಿನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಮೊದಲ ಟೆಸ್ಟ್‌ನಲ್ಲಿ ಸಿರಾಜ್ ತಮ್ಮ ಭರ್ಜರಿ ಬೌಲಿಂಗ್ ಮೂಲಕ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್‌ಗಳಿಗೆ ಕಾಟಕೊಟ್ಟು ಗಮನ ಸೆಳೆದಿದ್ದರು. ಈಗ ಎರಡನೇ ಟೆಸ್ಟ್‌ನಲ್ಲಿ ಇನ್ನು ನಾಲ್ಕು ದಿನಗಳ ಆಟ ಬಾಕಿ ಇದ್ದು ಸಿರಾಜ್ ಸೇವೆ ಭಾರತ ತಂಡಕ್ಕೆ ಇಲ್ಲದೇ ಹೋದರೆ ಭಾರಿ ಹಿನ್ನಡೆ ಎದುರಾಗುವುದು ನಿಶ್ಚಿತ. ಸಿರಾಜ್ ಅನುಪಸ್ಥಿತಿಯಲ್ಲಿ ಜಸ್‌ಪ್ರೀತ್ ಬುಮ್ರಾ, ಶಾರ್ದುಲ್ ಶಾಕೂರ್ ಮತ್ತು ಮೊಹಮ್ಮದ್ ಶಮಿ ಮೇಲೆ ಹೊರೆ ಹೆಚ್ಚಾಗಲಿದೆ. ಜೊತೆಗೆ ಆಫ್‌ಸ್ಪಿನ್ನರ್ ಆರ್ ಅಶ್ವಿನ್ ಮತ್ತು ಪಾರ್ಟ್‌ಟೈಮ್ ಸ್ಪಿನ್ನರ್ ಹನುಮ ವಿಹಾರಿ ಕೂಡ ಹೆಚ್ಚು ಓವರ್‌ಗಳನ್ನು ಎಸೆಯುವಂತ್ತಾಗುತ್ತದೆ. ಜೊಹಾನ್ಸ್‌ಬರ್ಗ್ ಟೆಸ್ಟ್ ಪಂದ್ಯದ ಭಾರತ: ಮೊದಲ ಇನಿಂಗ್ಸ್ 63.1 ಓವರ್‌ಗಳಲ್ಲಿ 202 ರನ್‌ಗಳಿಗೆ ಆಲ್‌ಔಟ್ (ಕೆಎಲ್ ರಾಹುಲ್ 50, ಮಯಾಂಕ್ ಅಗರ್ವಾಲ್ 26, ಹನುಮ ವಿಹಾರಿ 20, ಆರ್ ಅಶ್ವಿನ್ 46; ಮಾರ್ಕೊ ಯೆನ್ಸನ್ 31ಕ್ಕೆ 4, ಕಗಿಸೊ ರಬಾಡ 64ಕ್ಕೆ 3, ಓಲಿವರ್ 64ಕ್ಕೆ 3).
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3ETnizd