: ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆಯ ಸೋಂಕು ಇನ್ನಷ್ಟು ಏರಿಕೆಯಾಗಲಿದ್ದು, ಸೋಂಕು ಉತ್ತುಂಗಕ್ಕೆ ತಲುಪಿದಾಗ ಪ್ರತಿ ದಿನ ಸರಾಸರಿ 80 ಸಾವಿರದಿಂದ 1.20 ಲಕ್ಷ ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳಬಹುದು ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ. 'ತಜ್ಞರ ವರದಿ ಉಲ್ಲೇಖಿಸಿರುವಂತೆಯೇ ಪ್ರಸ್ತುತ 40 ಸಾವಿರ ಪ್ರಕರಣಗಳು ವರದಿಯಾಗುತ್ತಿವೆ. ಎರಡನೇ ಅಲೆಗೆ ಹೋಲಿಕೆ ಮಾಡಿದರೆ ಮೂರನೇ ಅಲೆಯಲ್ಲಿ ಸೋಂಕು 4 ರಿಂದ 5 ಪಟ್ಟು ವೇಗವಾಗಿ ಹರಡುತ್ತಿದೆ. ಇದೇ ವೇಗದಲ್ಲಿ ಸೋಂಕಿತ ಪ್ರಕರಣಗಳು ಇಳಿಯಬಹುದು. ಫೆಬ್ರುವರಿ 2 ಅಥವಾ 3ನೇ ವಾರದಲ್ಲಿ ಸೋಂಕು ಪ್ರಕರಣಗಳು ಕಡಿಮೆಯಾಗುವ ಸಾಧ್ಯತೆಯಿದೆ' ಎಂದು ಅವರು ತಿಳಿಸಿದ್ದಾರೆ. 'ಕೋವಿಡ್ ಕೇರ್ ಸೆಂಟರ್ ಸ್ಥಾಪನೆ ಹಾಗೂ ನಿರ್ವಹಣೆ ಕುರಿತು 18 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚರ್ಚಿಸಿದ್ದಾರೆ. ಒಂದೆರಡು ವಾರಗಳಲ್ಲಿ ಪ್ರಕರಣಗಳು ಹೆಚ್ಚಾದರೂ ಅದನ್ನು ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕೆಂದು ಸಿಎಂ ಸೂಚಿಸಿದ್ದಾರೆ' ಎಂದು ಸಚಿವ ತಿಳಿಸಿದರು. 'ರಾಜ್ಯದಲ್ಲಿ 15 ರಿಂದ 17 ವರ್ಷದ ಶೇ 60ರಷ್ಟು ಮಕ್ಕಳಿಗೆ ಲಸಿಕೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಲಸಿಕಾಕರಣವನ್ನು ಪೂರ್ಣಗೊಳಿಸಲಾಗುವುದು. ಶೇ. 39ರಷ್ಟು ಮುನ್ನೆಚ್ಚರಿಕೆ ಲಸಿಕೆ ನೀಡಲಾಗಿದೆ. ಇದು ತೃಪ್ತಿ ತಂದಿಲ್ಲ. ಮುಂದಿನ ವಾರದಿಂದ ಮೂರನೇ ಡೋಸ್ ಹೆಚ್ಚಿಸುವ ಸಂಬಂಧ ಲಸಿಕಾ ಅಭಿಯಾನ ಮಾಡುತ್ತೇವೆ' ಎಂದು ಸಚಿವರು ತಿಳಿಸಿದ್ದಾರೆ. 'ದೇಶದಲ್ಲಿಯೇ ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಕೊರೊನಾ ಪರೀಕ್ಷೆ ಮಾಡಲಾಗುತ್ತಿದೆ. ಪ್ರತಿ ದಿನ 2 ರಿಂದ 2.50 ಲಕ್ಷ ಪರೀಕ್ಷೆ ನಡೆಸಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ಕೇಸ್ ಹೆಚ್ಚಾಗುತ್ತಿದೆ. ಮಂಗಳವಾರವೂ ಪಾಸಿಟಿವಿಟಿ ಪ್ರಮಾಣ ಹೆಚ್ಚಾಗಿದ್ದು, ಸಾವಿನ ಪ್ರಮಾಣ ಕಡಿಮೆಯಾಗಿದೆ. ವೀಕೆಂಡ್ ಕರ್ಫ್ಯೂ ಬಗ್ಗೆ ಶುಕ್ರವಾರದ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು. ತಾಂತ್ರಿಕ ಸಲಹಾ ಸಮಿತಿ ಸಲಹೆ ಪಡೆದು ಮುಂದಿನ ಕ್ರಮಗಳ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ' ಎಂದು ಅವರು ವಿವರಿಸಿದರು. ವೈದ್ಯರ ನಡಿಗೆ, ಹಳ್ಳಿ ಕಡೆಗೆ: 'ವೈದ್ಯರ ನಡಿಗೆ, ಹಳ್ಳಿ ಕಡೆಗೆ ಕಾರ್ಯಕ್ರಮವನ್ನು ಮತ್ತೆ ಆರಂಭಿಸಲಾಗುವುದು. ವೈದ್ಯರು ಹಳ್ಳಿಗೆ ತೆರಳಿ, ಅಲ್ಲಿನ ಮನೆಗಳಲ್ಲಿ ಹಿರಿಯರ ಆರೋಗ್ಯದ ಮೇಲೆ ನಿಗಾ ಇರಿಸಲಿದ್ದಾರೆ. ರಾಜ್ಯದಲ್ಲಿ ಆಕ್ಸಿಜನ್‌ಗೂ ಉತ್ತಮ ವ್ಯವಸ್ಥೆ ಮಾಡಲಾಗಿದೆ. ಸದ್ಯ 264 ಆಕ್ಸಿಜನ್ ಘಟಕಗಳಿದ್ದು, ಈ ಪೈಕಿ 222 ಘಟಕ ಕಾರ್ಯಾರಂಭವಾಗಿವೆ. ಇನ್ನೂ 17 ಸಿಎಸ್‌ಆರ್ ಅನುದಾನದಡಿ ಅಳವಡಿಸುವ ಪ್ರಸ್ತಾಪವಿದೆ' ಎಂದು ಸಚಿವ ಡಾ. ಕೆ. ಸುಧಾಕರ್ ಮಾಹಿತಿ ನೀಡಿದರು.
from India & World News in Kannada | VK Polls https://ift.tt/3tAZ0YH