ಪಾರ್ಲ್(): ದಕ್ಷಿಣ ಆಫ್ರಿಕಾ ವಿರುದ್ದ ಮೊದಲನೇ ಓಡಿಐ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ವೆಂಕಟೇಶ್ ಅಯ್ಯರ್‌ಗೆ ಬೌಲಿಂಗ್ ನೀಡದೆ ಇರಲು ಕಾರಣವೇನೆಂದು ಆರಂಭಿಕ ಬ್ಯಾಟ್ಸ್‌ಮನ್ ಬಹಿರಂಗಪಡಿಸಿದ್ದಾರೆ. ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ತಂಡಕ್ಕೆ ನೆರವಾಗಲಿದ್ದಾರೆಂಬ ಕಾರಣಕ್ಕೆ ವೆಂಕಟೇಶ್ ಅಯ್ಯರ್‌ಗೆ ಮೊದಲನೇ ಓಡಿಐ ಪಂದ್ಯದಲ್ಲಿ ಅವಕಾಶ ನೀಡಲಾಗಿತ್ತು. ಆದರೆ ಅವರಿಗೆ ಒಂದೇ ಒಂದು ಓವರ್ ಬೌಲ್ ಮಾಡಲು ಅವಕಾಶ ನೀಡಲಾಗಿರಲಿಲ್ಲ. ಪಂದ್ಯದಲ್ಲಿ 31 ರನ್‌ಗಳ ಸೋಲು ಅನುಭವಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಶಿಖರ್ ಧವನ್‌ಗೆ ಇದೇ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಧವನ್ ಪಿಚ್ ತಿರುವಿನಿಂದ ಕೂಡಿತ್ತು ಹಾಗೂ ಸ್ಪಿನ್ನರ್‌ಗಳು ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ್ದರು. ಈ ಕಾರಣದಿಂದ ಬೌಲ್ ಮಾಡಬೇಕಾದ ಅಗತ್ಯವಿರಲಿಲ್ಲ ಎಂದರು. "ವಿಕೆಟ್‌ನಲ್ಲಿ ಸ್ವಲ್ಪ ಟರ್ನ್ ಇತ್ತು ಹಾಗೂ ಸ್ಪಿನ್ನರ್‌ಗಳು ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ್ದರು. ಈ ಕಾರಣದಿಂದ ವೆಂಕಟೇಶ್ ಅಯ್ಯರ್ ಅವರಿಂದ ಬೌಲ್ ಮಾಡಿಸಬೇಕೆಂದು ನಮಗೆ ಅನಿಸಲಿಲ್ಲ. ಡೆತ್ ಓವರ್‌ಗಳಲ್ಲಿ ಫಾಸ್ಟ್ ಬೌಲರ್‌ಗಳನ್ನು ಜಾಸ್ತಿ ಬಳಿಸಿಕೊಂಡಿದ್ದೆವು. ಆದರೆ ಮಧ್ಯಮ ಓವರ್‌ಗಳಲ್ಲಿ ನಾವು ವಿಕೆಟ್ ಕಬಳಿಸಲು ಸಾಧ್ಯವಾಗಿರಲಿಲ್ಲ. ಈ ಕಾರಣದಿಂದ ಮುಖ್ಯ ಬೌಲರ್‌ಗಳಿಗೆ ಮೊರೆ ಹೋಗಬೇಕಾಗಿತ್ತು. ಹಾಗಾಗಿ ಅವರಿಗೆ(ಅಯ್ಯರ್) ಚೆಂಡು ನೀಡಿರಲಿಲ್ಲ," ಎಂದು ತಿಳಿಸಿದರು. ಧವನ್ ಹೇಳಿದಂತೆ ಮೊದಲನೇ ಓಡಿಐ ಪಂದ್ಯದ ಮಧ್ಯಮ ಓವರ್‌ಗಳಲ್ಲಿ ನಾಯಕ ತೆಂಬಾ ಬವೂಮ ಹಾಗೂ ರಾಸಿ ವ್ಯಾನ್ ಡೆರ್ ಡುಸೆನ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಈ ಜೋಡಿ ಮುರಿಯದ ನಾಲ್ಕನೇ ವಿಕೆಟ್‌ಗೆ 200 ರನ್ ಜೊತೆಯಾಟವಾಡಿತ್ತು. ಈ ಜೊತೆಯಾಟ ಮುರಿಯುವ ಸಲುವಾಗಿ ಭಾರತ ತಂಡ ತಮ್ಮ ಮುಖ್ಯ ಬೌಲರ್‌ಗಳನ್ನೇ ಬಳಿಸಿಕೊಂಡಿತ್ತು. ದಕ್ಷಿಣ ಆಫ್ರಿಕಾ ನೀಡಿದ್ದ 297 ರನ್ ಗುರಿ ಹಿಂಬಾಲಿಸಿದ್ದ ಭಾರತ ತಂಡ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯದಿಂದ 31 ರನ್‌ಗಳಿಂದ ಸೋಲು ಅನುಭವಿಸಿತು. ಈ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ತಂಡ ಮೂರು ಪಂದ್ಯಗಳ ಓಡಿಐ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವೈಫಲ್ಯತೆ ಅನುಭವಿಸಿದಾಗ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಹೇಗೆ ಪುಟಿದೇಳಬೇಕೆಂಬ ಬಗ್ಗೆ ಯುವ ಆಟಗಾರರಿಗೆ ಇದೇ ವೇಳೆ ಶಿಖರ್ ಧವನ್ ಮಾರ್ಗದರ್ಶನ ನೀಡಿದರು. ತಂಡಕ್ಕೆ ಅಗತ್ಯವಾಗಿರುವ ಹಾಗೂ ಸನ್ನಿವೇಶಕ್ಕೆ ತಕ್ಕಂತೆ ಯುವ ಆಟಗಾರರು ಆಡಬೇಕಾಗುತ್ತದೆ ಎಂದು ಹೇಳಿದರು. "ಸನ್ನಿವೇಶದ ಬೇಡಿಕೆಗೆ ತಕ್ಕಂತೆ ನೀವು ಆಡಬೇಕಾದ ಅಗತ್ಯವಿದೆ. ನೀವು ಯಾವಾಗಲೂ ತಂಡವನ್ನು ಮುಂಚೂಣಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ಈ ಹಾದಿಯಲ್ಲಿ ನಿಮ್ಮ ವೈಯಕ್ತಿಕ ಪ್ರದರ್ಶನ ತುಂಬಾ ಮುಖ್ಯವಾಗಿರುತ್ತದೆ. ಇದೇ ವೇಳೆ ನೀವು ತಂಡಕ್ಕೋಸ್ಕರ ನಿಮ್ಮ ಆಟದ ಮೇಲೆ ಎಷ್ಟು ನಿಯಂತ್ರಣ ಸಾಧಿಸಿದ್ದೀರಿ ಎಂಬುದು ಕೂಡ ಇಲ್ಲಿ ಮುಖ್ಯವಾಗುತ್ತದೆ. ತಂಡಕ್ಕೆ ಜೊತೆಯಾಟ ಅಗತ್ಯವಿದ್ದಾಗ ನೀವು ಅದನ್ನು ಬೆಳೆಸಬೇಕು. ಈ ರೀತಿ ನೀವು ಪರಿಪಕ್ವತೆ ಸಾಧಿಸಲು ನಿಮಗೆ ಹೆಚ್ಚಿನ ಅನುಭವವಾಗಬೇಕು," ಎಂದು ಶಿಖರ್ ಧವನ್ ತಿಳಿಸಿದರು. 79 ರನ್ ಗಳಿಸಿದ್ದ ಶಿಖರ್ ಧವನ್ ಭಾರತ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದಾರೆ. ಅಂದಹಾಗೆ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಎರಡನೇ ಓಡಿಐ ಪಂದ್ಯ ಇದೇ ಮೈದಾನದಲ್ಲಿ ಶುಕ್ರವಾರ ನಡೆಯಲಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3GOGcsO