ರಾಜು ನದಾಫ : ರೈತರ ಜೀವ ಎನಿಸಿರುವ ವರದೆ ಹಂತ ಹಂತವಾಗಿ ಕಪ್ಪಾಗುತ್ತಿದ್ದಾಳೆ. ಇವಳನ್ನೇ ನೆಚ್ಚಿಕೊಂಡಿರುವ ಸುತ್ತಮುತ್ತಲಿನ 70 ರಿಂದ 80 ಎಕರೆ ಜಮೀನು ಈ ನೀರಿನಿಂದಾಗಿ ಬರಡಾಗಿ ಬಂಜರಾಗುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ, ಸಕ್ಕರೆ ಕಾರ್ಖಾನೆ ಹಾಗೂ ಜಿಲ್ಲಾಡಳಿತಕ್ಕೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಕ್ರಮ ಕೈಗೊಳ್ಳದಿರುವುದು ರೈತರನ್ನು ಆಕ್ರೋಶಗೊಳ್ಳುವಂತೆ ಮಾಡಿದೆ. ಕಾರ್ಖಾನೆ : ಹಾವೇರಿ ತಾಲೂಕು ಸಂಗೂರ ಗ್ರಾಮದ ಸಕ್ಕರೆ ಕಾರ್ಖಾನೆ ಕೂಗಳತೆಯಲ್ಲಿರುವ ನದಿ ದಡದಲ್ಲಿರುವ ಚೆಕ್‌ಡ್ಯಾಮ್ ಬಳಿ ಕಾರ್ಖಾನೆ ತ್ಯಾಜ್ಯ ನಿರಂತರವಾಗಿ ಬಿಡಲಾಗುತ್ತಿದ್ದು, ಈ ಮಲಿನ ದುರ್ನಾತ ಬೀರುತ್ತಿದೆ. ಈ ತ್ಯಾಜ್ಯವೇ ನದಿ ನೀರನ್ನು ಹಂತ ಹಂತವಾಗಿ ಕಪ್ಪಾಗುವಂತೆ ಮಾಡುತ್ತಿದೆ. ಈ ನೀರಿನ ಬಳಕೆಯಿಂದಾಗಿ ಬೆಳೆ ಸಮೃದ್ಧವಾಗುವ ಬದಲು ಕೊಳೆತು ಫಸಲು ನಾಶವಾಗುತ್ತಿದೆ. ಜಮೀನುಗಳು ಸಹ ಬರಡಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುವುದು ರೈತರ ಆರೋಪವಾಗಿದೆ. ಸಕ್ಕರೆ ಕಾರ್ಖಾನೆ ತ್ಯಾಜ್ಯವನ್ನು ನದಿಗೆ ಬಿಡದಂತೆ ಹಾಗೂ ಹೊಗೆ ಕೊಳವೆಯನ್ನು ಎತ್ತರಗೊಳಿಸಲು ಸೂಚಿಸುವಂತೆ ಸಂಗೂರ ಗ್ರಾಮ ಪಂಚಾಯಿತಿ ಸರ್ವಾನುಮತದ ಠರಾವು ಪಾಸ್ ಮಾಡಿ ಜಿಲ್ಲಾ ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿ, ಸಕ್ಕರೆ ಕಾರ್ಖಾನೆ ಮತ್ತು ಜಿಲ್ಲಾಡಳಿತಕ್ಕೂ 2014 ರಲ್ಲೇ ಮನವಿ ಸಲ್ಲಿಸಿದರೂ ಈವರೆಗೆ ಕ್ರಮ ಕೈಗೊಳ್ಳದಿರುವುದು ನದಿ ನೀರು ಕಪ್ಪಾಗುತ್ತಿರುವುದಕ್ಕೆ ಕಾರಣ ಎನ್ನಲಾಗುತ್ತಿದೆ. ಕಾರ್ಖಾನೆ ದುಂಡಾವರ್ತನೆ ಈ ಕುರಿತು ಕಾರ್ಖಾನೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ನಿಮ್ಮ ಕಬ್ಬು ಕ್ರಷ್ ಮಾಡಲು ಈ ಸಕ್ಕರೆ ಕಾರ್ಖಾನೆ ಬೇಕು. ಆದರೆ ದುರ್ನಾತ ಬೇಡ ಮತ್ತು ಹೊಳೆಗೆ ತ್ಯಾಜ್ಯ ಬಿಡಬೇಡಿ ಎಂದರೆ ಏನು ಮಾಡಬೇಕು? ಎನ್ನುವ ದುಂಡಾವರ್ತನೆ. ಕಬ್ಬು ಬೆಳೆಗಾರರಿಗೆ ಇದು ಬಿಸಿ ತುಪ್ಪವಾಗಿದ್ದರೂ ವರದೆ ನೀರು ಕಪ್ಪಾಗುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ಡಿಸೆಂಬರ್ 2021 ರಲ್ಲೇ ಮನವಿ ಸಲ್ಲಿಸಿ ಜಿಲ್ಲಾಧಿಕಾರಿಗಳ ಗಮನ ಸೆಳೆದರೂ ಕ್ರಮ ಕೈಗೊಳ್ಳದಿರುವುದು ಜಿಲ್ಲಾಡಳಿತದ ದಿವ್ಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎನ್ನುವುದು ರೈತರ ದೂರು. ಗಣೇಶೋತ್ಸವ ಬಂದಾಗ ಮಾತ್ರ ಸಾರ್ವಜನಿಕರಿಗೆ ಸಂದೇಶ ನೀಡಲು ಸೀಮಿತವಾಗಿರುವ ಜಿಲ್ಲಾ ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು 2014 ರಲ್ಲೇ ಸಂಗೂರ ಗ್ರಾಮ ಪಂಚಾಯಿತಿ ಮನವಿ ಸಲ್ಲಿಸಿದರೂ ಸೌಜನ್ಯಕ್ಕಾದರೂ ಉತ್ತರಿಸದಿರುವುದು ಮಂಡಳಿ ಕಾರ್ಯಕ್ಷಮತೆಗೆ ತಾಜಾ ಉದಾಹರಣೆಯಾಗಿದೆ. ಸಿ. ಎಂ. ತವರು ಜಿಲ್ಲೆಯಲ್ಲೇ ಜೀವ ನದಿ ವರದೆ ಸಕ್ಕರೆ ಕಾರ್ಖಾನೆ ತ್ಯಾಜ್ಯದಿಂದಾಗಿ ಕಪ್ಪಾಗುತ್ತಿದ್ದರೂ ಜಿಲ್ಲಾಡಳಿತ ಕ್ರಮ ಕೈಗೊಳ್ಳದಿರುವುದು ಅಚ್ಚರಿ ಮತ್ತು ಅನುಮಾನಕ್ಕೆ ಎಡೆ ಮಾಡಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಕ್ರಮ ಏನು? ಕಾದು ನೋಡಬೇಕಿದೆ. 'ನಮ್ಮೂರಿನ ವರದಾ ಹೊಳೆ ಕಪ್ಪಾಗುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಡಿಸೆಂಬರ್ ತಿಂಗಳಲ್ಲೇ ಮನವಿ ಸಲ್ಲಿಸಿದ್ದರೂ ಕ್ರಮ ಕೈಗೊಂಡಿಲ್ಲ. ನಮ್ಮೂರಿನ ಗ್ರಾಪಂನಿಂದ 2014 ರಲ್ಲೇ ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಗೆ ಮನವಿ ಸಲ್ಲಿಸಿದ್ದರೂ ಈವರೆಗೂ ಉತ್ತರಿಸಿಲ್ಲ. ಕಾರ್ಖಾನೆಯವರಿಗೆ ಹೇಳಿದ್ರೂ ಪ್ರಯೋಜನ ಇಲ್ರಿ. ಡಿಸಿ ಸಾಹೇಬ್ರ ಮನಸ ಮಾಡಿದ್ರ ಜಮೀನು ಉಳಿತಾವರಿ' ಎನ್ನುತ್ತಾರೆ, ರಾಜ್ಯ ರೈತ ಸಂಘ, ಹಸಿರು ಸೇನೆ ಜಿಲ್ಲಾ ಘಟಕ, ಸಂಗೂರದ ಜಿಲ್ಲಾಉಪಾಧ್ಯಕ್ಷ ಭುವನೇಶ್ವರ ಶಿಡ್ಲಾಪೂರ.
from India & World News in Kannada | VK Polls https://ift.tt/3AmJDnZ