ಐತಿಚಂಡ ರಮೇಶ್ ಉತ್ತಪ್ಪ ಮೈಸೂರು: ಮೈಸೂರು ಪಾಲಿಕೆಗೆ ನೀರೇ ಭಾರವಾಗಿದೆ. ಕುಡಿಯುವ ಪೂರೈಸುವುದು ಮೂಲಭೂತ ಅಗತ್ಯಗಳಲ್ಲಿ ಒಂದಾಗಿದ್ದರೂ ಅದನ್ನು ನಿರ್ವಹಿಸಲಾಗದೆ ಹೈರಣಾಗಿದೆ. ದಿನದಿಂದ ದಿನಕ್ಕೆ ನೀರಿನ ಬೇಡಿಕೆ ಹೆಚ್ಚಾಗುತ್ತಿದೆ. ಆದರೆ, ಶುಲ್ಕ ಪಾವತಿಸುವುದು ನಮ್ಮ ಕರ್ತವ್ಯವಲ್ಲ ಎನ್ನುವ ಮನೋಭಾವ ಹಲವು ಗ್ರಾಹಕರಲ್ಲಿರುವುದೇ ಸಮಸ್ಯೆಗೆ ಕಾರಣ. 'ನೀರು ಬರುವುದು ತಡವಾದರೆ ನೇರವಾಗಿ ಕರೆ ಮಾಡುತ್ತಾರೆ. ವಿದ್ಯುತ್ ಸಮಸ್ಯೆಯಿಂದಾಗಿ ಸ್ವಲ್ಪ ಏರುಪೇರಾದರೂ ಪಾಲಿಕೆಯನ್ನು ಟೀಕಿಸುತ್ತಾರೆ. ಸದಸ್ಯರಿಗೆ ವಾರ್ಡ್‌ಗಳಲ್ಲಿ ಹಿಡಿಶಾಪ ಹಾಕುತ್ತಾರೆ. ಇಲ್ಲದ ನೀರನ್ನು ದೂರದ ಕಬಿನಿ ಹಾಗೂ ಕಾವೇರಿಯಿಂದ ತರಲಾಗುತ್ತಿದೆ. ನೀರು ಪೂರೈಕೆ ಸವಾಲನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವ ಪಾಲಿಕೆಗಳಲ್ಲಿ ಮೈಸೂರು ಒಂದು. ಆದರೆ, ದೂರದಿಂದ ನೀರು ತಂದು ಪೂರೈಸುವ ಭಗೀರಥ ಪ್ರಯತ್ನಕ್ಕೆ ಗ್ರಾಹಕರಿಂದ ಪೂರಕ ಸ್ಪಂದನೆ ದೊರೆಯುತ್ತಿಲ್ಲ,'' ಎಂದು ಪಾಲಿಕೆಯ ಹಿರಿಯ ಅಧಿಕಾರಿಯೊಬ್ಬರು ವಿಷಾದ ವ್ಯಕ್ತಪಡಿಸುತ್ತಾರೆ. ನೀರಿಗೇಕೆ ಶುಲ್ಕ? ಕುಡಿಯುವ ನೀರು ಪೂರೈಕೆಗೆ ಶುಲ್ಕ ನೀಡಬೇಕೇ ಎನ್ನುವ ಮನೋಭಾವ ಹಲವರಲ್ಲಿ ಇದೆ. ಇದರಿಂದಾಗಿ ಪಾಲಿಕೆ ದಿನದಿಂದ ದಿನಕ್ಕೆ ಹೊರೆಯನ್ನು ಎಳೆದುಕೊಳ್ಳುತ್ತಿದೆ. ನೀರಿನ ಕೊರತೆ ನಡುವೆಯೂ ಶಕ್ತಿ ಮೀರಿ ಪೂರೈಕೆಗೆ ಪ್ರಯತ್ನಿಸುತ್ತಿದೆ. ಕೆಲವು ಯೋಜನೆ ಪೂರ್ಣಗೊಂಡಲ್ಲಿ ನೀರಿನ ಸಮಸ್ಯೆ ಬಹುತೇಕ ಕೊನೆಯಾಗಬಹುದು. ಆದರೆ, ನೀರು ಬಂದರೂ ಅದನ್ನು ಗ್ರಾಹಕರ ಮನೆ ಬಾಗಿಲಿಗೆ ಹಾಗೂ ವಾಣಿಜ್ಯ ಬಳಕೆಗೆ ತಲುಪಿಸಲು ತಗಲುವ ವೆಚ್ಚವನ್ನು ವಸೂಲಿ ಮಾಡುವುದೇ ಪಾಲಿಕೆಗೆ ತಲೆ ಬಿಸಿಯಾಗಿದೆ. 219 ಕೋಟಿ ರೂ. ಬಾಕಿಇಲ್ಲಿಯವರೆಗೆ ಸುಮಾರು 219 ಕೋಟಿ ರೂ. ನೀರಿನ ಸಂಗ್ರಹ ಬಾಕಿ ಇದೆ. ಇದರಲ್ಲಿ ವಾಣಿಜ್ಯ ಬಳಕೆ ಸೇರಿವೆ. ಮನೆ ಬಾಗಿಲಿಗೆ ಪೂರೈಕೆ ಮಾಡುತ್ತಿರುವ ನೀರಿನ ಕರ ವಸೂಲಿ ಕೂಡ ಸಮಸ್ಯೆಯಾಗಿ ಕಾಡುತ್ತಿದೆ. ಎಚ್ಚರಿಕೆ ನೀಡದ ಹೊರತು ಹಲವು ಮಂದಿ ಶುಲ್ಕ ಕಟ್ಟುತ್ತಿಲ್ಲ. ಕಚೇರಿಗೆ ಬಂದು ಪಾವತಿಸಲು ಸಮಸ್ಯೆಯಾಗುತ್ತಿರಬಹುದು ಎನ್ನುವ ಕಾರಣಕ್ಕೆ ಆನ್‌ಲೈನ್ ಪಾವತಿ ಕೂಡ ಮಾಡಲಾಗಿದೆ. ಆದರೂ ಸಾಕಷ್ಟು ಮಂದಿ ಇನ್ನೂ ಶುಲ್ಕ ಪಾವತಿ ವಿಷಯದಲ್ಲಿ ನಿರಾಸಕ್ತಿ ತೋರಿಸುತ್ತಿದ್ದಾರೆ ಎನ್ನುತ್ತಿದ್ದಾರೆ. ಮೀಟರ್ ಇಲ್ಲದಿದ್ದರೆ ದುಪ್ಪಟ್ಟುಸುಮಾರು 50 ಸಾವಿರಕ್ಕೂ ಹೆಚ್ಚು ಮಂದಿ ಮೀಟರ್ ಇಟ್ಟುಕೊಂಡಿಲ್ಲ. ಪಾಲಿಕೆ ಕಣ್ಣಿಗೆ ಮಣ್ಣೆರಚಲು ಕೆಟ್ಟಿರುವ ಮೀಟರ್ ಹಾಕಿಕೊಂಡಿದ್ದಾರೆ. ಮೀಟರ್ ರೀಡಿಂಗ್ ಸಂದರ್ಭ ಸರಾಸರಿ ಅಥವಾ ಕನಿಷ್ಠ ಮೊತ್ತವನ್ನು ಮಾತ್ರ ನಮೂದಿಸಲಾಗುತ್ತಿದೆ. ಬಳಕೆ ಪ್ರಮಾಣ ಮಾತ್ರ ವಿಪರೀತವಾಗಿರುತ್ತದೆ. ಕೆಲವು ವಾಣಿಜ್ಯ ಬಳಕೆಯಲ್ಲಿಯೂ ದುರ್ಬಳಕೆ ನಡೆಯುತ್ತಿದೆ. ಕುಡಿಯಲು ಪೂರೈಕೆಯಾಗುವ ನೀರು ಅನ್ಯ ಉದ್ದೇಶಕ್ಕೆ ಬಳಕೆಯಾಗುತ್ತಿದೆ ಎಂದು ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸುತ್ತಾರೆ. ಈ ಹಿನ್ನೆಲೆಯಲ್ಲಿ ಪರಿಶೀಲನೆ ವೇಳೆ ಮೀಟರ್ ಕೆಟ್ಟಿರುವುದು ಹಾಗೂ ಮೀಟರ್ ಇಲ್ಲದಿದ್ದರೆ ದುಪ್ಪಟ್ಟು ಶುಲ್ಕ ವಸೂಲಿ ಮಾಡಲು ಪಾಲಿಕೆ ಈಗಾಗಲೇ ನಿರ್ಧರಿಸಿದೆ. ಸರಕಾರಿ ಸಂಸ್ಥೆ ಪಾಲು ಅಧಿಕ ಕೇವಲ ಸಾರ್ವಜನಿಕರು ಮಾತ್ರವಲ್ಲ. ಬಾಕಿಯಲ್ಲಿ ಸರಕಾರಿ ಸಂಸ್ಥೆಗಳ ಪಾಲೂ ದೊಡ್ಡದ್ದು. ಸರಕಾರಿ ಕಚೇರಿಗಳಲ್ಲಿ ಪಾಲಿಕೆಯಿಂದ ಪೂರೈಕೆಯಾಗುತ್ತಿರುವ ನೀರು ಭಾರಿ ಪ್ರಮಾಣದಲ್ಲಿ ಬಳಕೆಯಾಗುತ್ತಿದೆ. ಆದರೆ, ಬಹುತೇಕ ಸರಕಾರಿ ಸಂಸ್ಥೆಗಳು ಅದರ ಶುಲ್ಕ ಪಾವತಿಸುತ್ತಿಲ್ಲ. ಮನೆಗಳಿಗೆ ಪೂರೈಕೆಯಾಗುತ್ತಿರುವ ಪಾವತಿಸದಿದ್ದರೆ ಕಡಿತಗೊಳಿಸುತ್ತಾರೆ. ಆದರೆ, ವಾಣಿಜ್ಯ ಬಳಕೆ ಹಾಗೂ ಸರಕಾರಿ ಸಂಸ್ಥೆಗಳಿಂದ ಶುಲ್ಕ ವಸೂಲಿ ಮಾಡುವ ತಾಕತ್ತು ಪಾಲಿಕೆಗೆ ಇಲ್ಲ ಎಂದು ಸಾಕಷ್ಟು ಸಾರ್ವಜನಿಕರು ಟೀಕಿಸುತ್ತಾರೆ. ಮತ್ತೆ ಶುಲ್ಕ ಏರಿಕೆ ಚಿಂತನೆ ಸಲ್ಲದು ಪ್ರಾಮಾಣಿಕರ ಮೇಲೆಯೇ ಪಾಲಿಕೆ ಮತ್ತೆ ಮತ್ತೆ ಬರೆ ಹಾಕುತ್ತಿದೆ. 'ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ' ಎನ್ನುವಂತೆ ವಾಣಿಜ್ಯ ಬಳಕೆ, ಸರಕಾರಿ ಸಂಸ್ಥೆಗಳು ಹಾಗೂ ಹಲವರು ನಿರ್ಲಕ್ಷ್ಯದಿಂದ ತೆರಿಗೆ ಪಾವತಿಸದಿದ್ದರೆ, ಪ್ರಾಮಾಣಿಕವಾಗಿ ಕಟ್ಟುತ್ತಿರುವವರಿಂದ ಇನ್ನಷ್ಟು ವಸೂಲಿ ಮಾಡಲು ಪಾಲಿಕೆ ಮುಂದಾಗಿದೆ. ಅಂದರೆ, ಶುಲ್ಕ ಏರಿಕೆ ಚಿಂತನೆ ನಡೆಯುತ್ತಿದೆ. ಇದರಿಂದ ಕಟ್ಟುತ್ತಿರುವವರ ಮೇಲೆ ಇನ್ನಷ್ಟು ಹೊರೆ ಹಾಕಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಶುಲ್ಕ ಏರಿಸದೆ ಬಾಕಿ ವಸೂಲಿಗೆ ಮುಂದಾಗಲಿ ಎಂದು ಸಂಸದ ಸೇರಿದಂತೆ ಹಲವರು ಒತ್ತಾಯಿಸಿದ್ದಾರೆ. ಇಲ್ಲಿದೆ ಅಂಕಿ ಅಂಶ
- ನೀರಿನ ಸಂಪರ್ಕ ಸಂಖ್ಯೆ : 1,62,815
- ಕೆಟ್ಟಿರುವ ಮೀಟರ್‌ಗಳು : 49,922
- ಲೆಕ್ಕಕ್ಕೆ ಸಿಗದ ಸಂಪರ್ಕಗಳು: 29,800
- ಬಳಕೆಯಾಗುತ್ತಿರುವ ನೀರು : 270 ಎಂಎಲ್‌ಡಿ
- ಮೀಟರ್ ರೀಡಿಂಗ್ : 160 ಎಂಎಲ್‌ಡಿ
- ಶುಲ್ಕಕ್ಕೆ ಸಿಗದ ನೀರು : 110 ಎಂಎಲ್‌ಡಿ
from India & World News in Kannada | VK Polls https://ift.tt/3GKSi5W