ಬೆಂಗಳೂರು: ಜಾರಕಿಹೊಳಿ ಸಹೋದರರನ್ನು ಹೊರಗಿಟ್ಟು ಬೆಳಗಾವಿಯಲ್ಲಿ ಸಚಿವ ಉಮೇಶ್ ಕತ್ತಿ ನಿವಾಸದಲ್ಲಿ ಸಭೆ ನಡೆದ ಬೆಳವಣಿಗೆ ಬೆನ್ನಿಗೇ ಬೆಂಗಳೂರಿನಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಿವಾಸದಲ್ಲಿಯೂ ರಹಸ್ಯ ಸಭೆಯಾಗಿದೆ. ಈ ಸಭೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಭಾಗಿಯಾಗಿದ್ದು, ಸಂಪುಟ ಪುನರ್‌ರಚನೆಗೆ ಒತ್ತಡ ಹೇರುವ ಬಗ್ಗೆ ಚರ್ಚೆಯಾಗಿದೆ. ಸಚಿವ ಉಮೇಶ್ ಕತ್ತಿ ನಿವಾಸದಲ್ಲಿ ಬೆಳಗಾವಿಯ ಮುಖಂಡರು ಭಾನುವಾರ ಸಭೆ ನಡೆಸಿದ್ದರು. ಜಾರಕಿಹೊಳಿ ಕುಟುಂಬದವರನ್ನು ಈ ಸಭೆಯಿಂದ ಹೊರಗಿಡಲಾಗಿತ್ತು ಎಂಬ ಮಾತು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಇತ್ತ ಮಾಜಿ ಸಚಿವ ರಮೇಶ್ ಜಾರಕಿಹೊಳಿಯ ಬೆಂಗಳೂರಿನ ನಿವಾಸದಲ್ಲಿ ಸೋಮವಾರ ಸಭೆ ನಡೆಯಿತು. ಈ ಸಭೆಗೆ ಯತ್ನಾಳ್ ಹೋಗಿರುವುದು ಕುತೂಹಲ ಕೆರಳಿಸಿದೆ. ಮತ್ತೊಂದೆಡೆ ಶಾಸಕ ಎಂ.ಪಿ ರೇಣುಕಾಚಾರ್ಯ ಸೇರಿದಂತೆ ಹಲವರು ಸಂಪುಟ ಪುನರ್‌ರಚನೆಗೆ ಒತ್ತಾಯಿಸಿ ಹೇಳಿಕೆ ನೀಡಿದ್ದಾರೆ. ಜಾರಕಿಹೊಳಿ ಮನೆಯಲ್ಲಿ ನಡೆದ ಸಭೆಯಲ್ಲೂ ಇದೇ ವಿಚಾರವಾಗಿ ಚರ್ಚೆ ನಡೆಯಿತು ಎನ್ನಲಾಗಿದೆ. ಹಳಬರಿಗೆ ಕೊಕ್ ನೀಡಿ ಸತತವಾಗಿ ಸಚಿವರಾದವರಿಗೆ ಕೊಕ್ ನೀಡಿ ಹೊಸಬರಿಗೆ ಅವಕಾಶ ನೀಡಬೇಕು. ಈ ಹಿಂದಿನ ಸಮ್ಮಿಶ್ರ ಸರಕಾರ ಮತ್ತು ಬಿಜೆಪಿ ಸರಕಾರದಲ್ಲಿ ಸಚಿವ ಸ್ಥಾನ ಪಡೆದಿರುವ ಹಿರಿಯರಿಗೆ ಈಗ ಪಕ್ಷದ ಸಂಘಟನೆಯ ಕೆಲಸ ನೀಡಬೇಕು. ಶಾಸಕರ ವಲಯದಲ್ಲಿ ಇದೇ ಬೇಡಿಕೆಯಿದೆ. ಈ ಬಗ್ಗೆ ಈಗಾಗಲೇ ಸಿಎಂ ಗಮನಕ್ಕೆ ತರಲಾಗಿದೆ. ಹೈಕಮಾಂಡ್‌ಗೂ ಮನವಿ ಮಾಡಿಕೊಳ್ಳಲಾಗಿದೆ ಎಂದು ಜತೆಗಿನ ಮಾತುಕತೆ ವೇಳೆ ಯತ್ನಾಳ್ ಪ್ರಸ್ತಾಪಿಸಿದರು ಎನ್ನಲಾಗಿದೆ. ಊಟ ಮಾಡೀವಿ ‘ಊಟಕ್ಕಾಗಿ ಸೇರಲಾಗಿತ್ತು. ನಾವೇನೂ ಸಭೆ ನಡೆಸಿಲ್ಲ. ನಾನು ಯಾವ ಸಭೆಗೂ ಹೋಗುವುದಿಲ್ಲ. ಪ್ರೀತಿಯಿದ್ದಲ್ಲಿ ಮಾತ್ರ ಹೋಗುತ್ತೇನೆ’ ಎಂದು ತಮ್ಮ ನಿವಾಸದಲ್ಲಿ ಶಾಸಕರು ಸೇರಿದ್ದರ ಬಗ್ಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ. ಬೆಳಗಾವಿ ಸಭೆ ಬಗ್ಗೆ ನನಗೆ ಗೊತ್ತಿಲ್ಲ ಬೆಳಗಾವಿಯಲ್ಲಿ ಸಚಿವ ಉಮೇಶ್ ಕತ್ತಿ ನಿವಾಸದಲ್ಲಿ ನಡೆದ ಸಭೆ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ‘ಈ ಬಗ್ಗೆ ತಿಳಿದಿಲ್ಲ. ಪಕ್ಷದ ಮುಖಂಡರು ಬೇರೆ ಬೇರೆ ಸಂದರ್ಭದಲ್ಲಿ ಸಭೆ ಸೇರುತ್ತಾರೆ. ಕಾಂಗ್ರೆಸ್ ನಾಯಕರೂ ಸಭೆ ಮಾಡಿಕೊಳ್ಳುತ್ತಾರೆ. ಅದಕ್ಕೆ ಬೇರೆ ರೀತಿಯ ವ್ಯಾಖ್ಯಾನ ಮಾಡಬೇಕಾಗಿಲ್ಲ’ ಎಂದರು.
from India & World News in Kannada | VK Polls https://ift.tt/3H1uxqr