ಬ್ಯಾಂಕ್ ಸಾಲ ಭಿಕ್ಷೆಯಲ್ಲ.. ಹಕ್ಕು..! ಮೈಸೂರಿನಲ್ಲಿ ಧರಣಿ ನಡೆಸಿ ಸಾಲ ಪಡೆದ ದಿಟ್ಟ ಮಹಿಳೆ..!

: ಸ್ವಯಂ ಉದ್ದಿಮೆ ಆರಂಭಿಸುವ ಕನಸಿನೊಂದಿಗೆ ಮಹಿಳೆಯೊಬ್ಬರು ಸಾಲಕ್ಕಾಗಿ ಬ್ಯಾಂಕಿಗೆ ಅರ್ಜಿ ಹಾಕಿದ್ದರು. ಎಲ್ಲಾ ದಾಖಲೆ ಸರಿ ಇದ್ದು, ಮೂರು ತಿಂಗಳು ಅಲೆದರೂ ಮಾತ್ರ ಮಂಜೂರಾಗಲಿಲ್ಲ. ಇದರಿಂದ ಬೇಸತ್ತು ಆ ಬ್ಯಾಂಕ್‌ ಮುಂದೆಯೇ ಕುಳಿತ ಪರಿಣಾಮ ಎಚ್ಚೆತ್ತುಕೊಂಡ ಬ್ಯಾಂಕ್‌ ಹಿರಿಯ ಅಧಿಕಾರಿಗಳು ಇದೀಗ ಸಾಲ ಮಂಜೂರು ಮಾಡುವ ಭರವಸೆ ನೀಡಿದ್ದಾರೆ. ನಗರದ ಸರಸ್ವತಿ ಪುರಂನ ನಿವಾಸಿಯಾದ ನೀಲಿ ಲೋಹಿತ್‌ ಅವರು ಮಣ್ಣಿನ ಆಭರಣಗಳ ವಿನ್ಯಾಸಕಿ ಹಾಗೂ ಶಿಕ್ಷಕಿ. ಇವರ ಪತಿ ಲೋಹಿತ್‌, ರಾಯಚೂರು ರಿಮ್ಸ್‌ನಲ್ಲಿ ಹಿರಿಯ ಸಂಶೋಧನಾ ವಿಜ್ಞಾನಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕೊರೊನಾ ಎರಡನೇ ಅಲೆ ವೇಳೆ ಫ್ರಂಟ್‌ ಲೈನ್‌ ವಾರಿಯರ್‌ ಆಗಿ ಕೆಲಸ ಮಾಡಿದ ಲೋಹಿತ್‌, ಕೋವಿಡ್‌ಗೆ ಬಲಿಯಾದರು. ಹೀಗಾಗಿ ಸ್ವತಃ ಉದ್ದಿಮೆ ಆರಂಭಿಸುವ ಅಭಿಲಾಷೆಯಿಂದ ನೀಲಿ ಅವರು ಮೂರು ತಿಂಗಳ ಹಿಂದೆ 14 ಲಕ್ಷಕ್ಕಾಗಿ ಬ್ಯಾಂಕ್‌ವೊಂದಕ್ಕೆ ಪಿಎಂಇಜಿಪಿ ಅಡಿಯಲ್ಲಿ ಅರ್ಜಿ ಹಾಕಿದ್ದರು. ಮೂರು ತಿಂಗಳಾದರೂ ಸಬೂಬು ಹೇಳಿ ಬ್ಯಾಂಕ್‌ ಸಿಬ್ಬಂದಿ ಲೋನ್‌ ನೀಡದೆ ಸತಾಯಿಸಿದ್ದರು. ನೊಂದ ನೀಲಿ ಅವರು ಲೋನ್‌ ಕೊಡದೆ ಇರಲು ಸರಿಯಾದ ಕಾರಣವನ್ನು ಕಾಗದದಲ್ಲಿ ಬರೆದು ಕೊಡುವಂತೆ ಬ್ಯಾಂಕ್‌ ಮುಂಭಾಗವೇ ಏಕಾಂಗಿ ಧರಣಿ ಕುಳಿತರು. ಇದನ್ನು ಸಾಮಾಜಿಕ ಮಾಧ್ಯಮದ ಮೂಲಕ ಹೊರ ಜಗತ್ತಿಗೆ ತಿಳಿಸಿದರು. ಬಳಿಕ ಎಚ್ಚೆತ್ತ ಬ್ಯಾಂಕ್‌ ಅಧಿಕಾರಿಗಳು ನೀಲಿ ಲೋಹಿತ್‌ಗೆ ಸಾಲ ಮಂಜೂರು ಮಾಡಲು ಒಪ್ಪಿದರು. 'ನನ್ನ ಲೋನಿಗೆ ಸಂಬಂಧಪಟ್ಟ ವರ್ಕ್ ಯೂನಿಟ್‌ ವೆರಿಫಿಕೇಶನ್‌ ಮಾಡಲಾಗಿತ್ತು. ಸಿಬಿಲ್‌ ರಿಪೋರ್ಟ್‌ ಸರಿ ಇತ್ತು. ಒರಿಜಿನಲ್‌ ಡಾಕ್ಯುಮೆಂಟ್ ತಪಾಸಣೆಯೂ ಆಗಿತ್ತು. ಲೋನ್‌ ನೀಡುವ ಭರವಸೆಯನ್ನೂ ಅಧಿಕಾರಿಗಳು ನೀಡಿದ್ದರು. ಆದರೆ, ನಂತರ ಸಬೂಬು ಹೇಳಲು ಶುರು ಮಾಡಿದರು. ಬ್ಯಾಂಕ್‌ನಲ್ಲಿ ಅವಮಾನ ಆದರೂ ನಾನು ಸುಮ್ಮನೆ ಕೂರಲಿಲ್ಲ. ನ್ಯಾಯಕ್ಕಾಗಿ ಹೋರಾಡಿದೆ. ಪರಿಣಾಮ ಇವತ್ತು ಲೋನ್‌ ನೀಡಲು ಸ್ವತಃ ಅಧಿಕಾರಿಗಳೇ ಮುಂದೆ ಬಂದಿದ್ದಾರೆ' ಎಂದು ನೀಲಿ ಲೋಹಿತ್‌ ತಿಳಿಸಿದ್ದಾರೆ. ವಿದೇಶಕ್ಕೂ ಮಣ್ಣಿನ ಆಭರಣ ರಫ್ತು..! ತಮಗಿರುವ ಕಲೆಯನ್ನು ದೇಶದ ವಿವಿಧ ಭಾಗಗಳಿಗೆ ಪಸರಿಸಬೇಕೆಂಬ ಯೋಜನೆಯಿಂದ ನೀಲಿ ಅವರು 95 ಹೆಣ್ಣು ಮಕ್ಕಳಿಗೆ ಈ ಕಲೆಯನ್ನು ಆನ್‌ಲೈನ್‌ ಮೂಲಕ ಕಲಿಸಿದ್ದಾರೆ. ಇದರಿಂದ ಕೊರೊನಾ ಕಾಲದಲ್ಲೂ ಕುಗ್ಗದೆ ಇವರೆಲ್ಲರೂ ಮನೆಯಿಂದಲೇ ಸ್ವತಃ ದುಡಿಮೆ ಪ್ರಾರಂಭಿಸಿದ್ದರು. ಅಲ್ಲದೆ, ನೀಲಿ ಅವರ ಮಣ್ಣಿನ ಆಭರಣಗಳು ದೂರದ ಕ್ಯಾಲಿಫೋರ್ನಿಯಾ, ಸಿಂಗಪುರ, ಅಮೆರಿಕಕ್ಕೂ ರವಾನೆಯಾಗಿದೆ. ಧೋರಣೆ ಕುರಿತಾಗಿ ಮಾಧ್ಯಮಗಳ ಜೊತೆ ಮಾತನಾಡಿದ ನೀಲಿ ಲೋಹಿತ್ ಅವರು, 'ಅರ್ಹರಿಗೆ ಬ್ಯಾಂಕ್‌ಗಳು ನೀಡುವ ಸಾಲ ಭಿಕ್ಷೆಯಲ್ಲ. ಅದು ಅರ್ಹರ ಹಕ್ಕು ಕೂಡ. ಬ್ಯಾಂಕ್‌ಗಳು ಅರ್ಹತೆ ಹೊಂದಿರುವ ಗ್ರಾಹಕರನ್ನು ಅವಮಾನಿಸಬಾರದು' ಎಂದು ಚಾಟಿ ಬೀಸಿದ್ದಾರೆ.


from India & World News in Kannada | VK Polls https://ift.tt/3FBUrzx

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...