ಕೋವಿಡ್ ಭೀತಿ: ಕಾಯಂ ಜಿಲ್ಲಾಧಿಕಾರಿ ನೇಮಕಕ್ಕೆ ಆಗ್ರಹಿಸಿ ಕೋಲಾರದಲ್ಲಿ ಸಗಣಿ ಚಳವಳಿ

ಮುಳಬಾಗಲು: ಕೊರೊನಾ ಮೂರನೇ ಅಲೆ ನಿಯಂತ್ರಣ ಹಾಗೂ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಪರಿಹಾರದ ಹಿತದೃಷ್ಟಿಯಿಂದ ಕಾಯಂ ಮತ್ತು ಜಿಲ್ಲಾ ಉಸ್ತುವಾರಿಯನ್ನು ನೇಮಕ ಮಾಡುವಂತೆ ಸರಕಾರವನ್ನು ಒತ್ತಾಯಿಸಿ ಎಲ್ಲ ಜನಪ್ರತಿನಿಧಿಗಳ ಮನೆ ಮುಂದೆ ಜ.20ರಂದು ಚಳವಳಿ ಮಾಡುವ ನಿರ್ಧಾರವನ್ನು ರೈತಸಂಘದ ಸಭೆಯಲ್ಲಿ ತೆಗೆದುಕೊಳ್ಳಲಾಯಿತು. ನಗರದಲ್ಲಿ ನಡೆದ ಸಭೆಯಲ್ಲಿ ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್‌ ಮಾತನಾಡಿ, ದಿವಂಗತ ಡಿ.ಕೆ.ರವಿ ವರ್ಗಾವಣೆ ನಂತರ ಜಿಲ್ಲೆಯಲ್ಲಿ ಕನಿಷ್ಠಪಕ್ಷ ಒಂದು ವರ್ಷ ಯಾವುದೇ ಜಿಲ್ಲಾಧಿಕಾರಿ ಕೆಲಸ ನಿರ್ವಹಿಸಿರುವ ಉದಾಹರಣೆಯಿಲ್ಲ. ಜಿಲ್ಲೆಯ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತರಬೇಕಾದ ಜಿಲ್ಲಾ ಉಸ್ತುವಾರಿ ಸಚಿವರು ಬಿಜೆಪಿ ಕಾರ್ಯಕ್ರಮಗಳಿಗೆ ಸೀಮಿತವಾಗಿದ್ದಾರೆ. ಪತ್ರಿಕಾ ಮಾಧ್ಯಮದವರು ಕೇಳಿದರೆ ನಾನು ಕಾಯಂ ಸಚಿವನಲ್ಲಎಂದು ಉತ್ತರ ನೀಡುತ್ತಿದ್ದಾರೆ. ಒಟ್ಟಾರೆಯಾಗಿ ಅಧಿಕಾರ ಹಿಡಿಯಲು ಕುರುಡುಮಲೆ ವಿನಾಯಕನ ಆಶೀರ್ವಾದ ಬೇಕು. ಜಿಲ್ಲೆಯ ಸಮಸ್ಯೆಗಳಿಗೆ ಸ್ಪಂದಿಸಲು ಇಚ್ಛಾಶಕ್ತಿ ಕೊರತೆ ಮತ್ತು ಸರಕಾರದ ಜನವಿರೋಧಿ ನೀತಿಗೆ ಮುಂದಿನ ದಿನಗಳಲ್ಲಿ ಪಾಠ ಕಲಿಸುವ ಕಾಲ ದೂರವಿಲ್ಲ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು. ರಾಜಕಾರಣಿಗಳ ಕೈಗೊಂಬೆಯಾಗಿ ಜಿಲ್ಲೆಗೆ ಬಂದರೆ ಮಾತ್ರ ಹಿರಿಯ ಅಧಿಕಾರಿಗಳಿಗೆ ಉಳಿಗಾಲವಿದೆ. ಇಲ್ಲವಾದರೆ ಸಂವಿಧಾನಕ್ಕೆ ವಿರೋಧವಾಗಿ 3 ತಿಂಗಳು, 6 ತಿಂಗಳಿಗೆ ವರ್ಗಾವಣೆ ಶಿಕ್ಷೆ ವಿಧಿಸುವ ಕಾಯಕವನ್ನು ಜನಪ್ರತಿನಿಧಿಗಳು ರೂಢಿಸಿಕೊಂಡಿದ್ದಾರೆ. ಜಿಲ್ಲೆಯ ಜನಪ್ರತಿನಿಧಿಗಳ ತಾಳಕ್ಕೆ ತಕ್ಕಂತೆ ಸರಕಾರ ಕುಣಿಯುತ್ತಿದೆ ಎಂದು ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ ಮಾತನಾಡಿ, ಕೊರೊನಾ 2ನೇ ಅಲೆ, ಅಕಾಲಿಕ ಮಳೆಯ ಅವಾಂತರಗಳನ್ನು ಸಮರ್ಪಕವಾಗಿ ನಿಭಾಯಿಸುವ ಜತೆಗೆ ಯಾವುದೇ ಅಹಿತಕರ ಘಟನೆ 2ನೇ ಅಲೆಯಲ್ಲಿಆಗದಂತೆ ಆಕ್ಸಿಜನ್‌, ಬೆಡ್‌, ವೆಂಟಿಲೇಟರ್‌ ವ್ಯವಸ್ಥೆ ಮಾಡುವ ಜತೆಗೆ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಸ್ಪಂಧಿಸುತ್ತಿದ್ದ ಜಿಲ್ಲಾಧಿಕಾರಿ ಡಾ.ಆರ್‌. ಸೆಲ್ವಮಣಿ ಮತ್ತು ಅಕ್ರಮಗಳಿಗೆ ಕಡಿವಾಣ ಹಾಕುತ್ತಿದ್ದ ಪೊಲೀಸ್‌ ವರಿಷ್ಠಾಧಿಕಾರಿಗಳನ್ನು ವಾರದ ಅಂತರದಲ್ಲಿ ವರ್ಗಾವಣೆ ಮಾಡುವ ಮುಖಾಂತರ ಸರಕಾರ ಜನ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಹದಗೆಟ್ಟಿರುವ ವ್ಯವಸ್ಥೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಮೂರನೇ ಅಲೆ ಸಮರ್ಪಕವಾಗಿ ನಿಭಾಯಿಸುವ ನಿಟ್ಟಿನಲ್ಲಿ ಜಿಲ್ಲೆಯ ನಾಲ್ಕು ಜನ ಹಿರಿಯ ಅಧಿಕಾರಿಗಳ ಉತ್ತಮವಾದ ತಂಡ ಕೆಲಸ ನಿರ್ವಹಿಸುವ ಉತ್ಸುಕದಲ್ಲಿದ್ದಾಗ ಸರಕಾರ ಏಕಾಏಕಿ ವರ್ಗಾವಣೆ ಶಿಕ್ಷೆ ನೀಡಿರುವುದು ಯಾವ ನ್ಯಾಯ. ರಾಜಕಾರಣಿಗಳ ಕೈಗೊಂಬೆಯಾಗದ ಜತೆಗೆ ಅವರ ಬೆದರಿಕೆಗಳಿಗೆ ಹೆದರದ ಅಧಿಕಾರಿಗಳಿಗೆ ವರ್ಗಾವಣೆ ಶಿಕ್ಷೆಯೇ ಎಂದು ಪ್ರಶ್ನಿಸಿದರು. ಜಿಲ್ಲೆಯ ಜನಪ್ರತಿನಿಧಿಗಳು ಪಕ್ಷ, ಭೇದ, ಭಾವ ಬಿಟ್ಟು ಸರಕಾರದ ಮೇಲೆ ಒತ್ತಡ ಹಾಕಿ ಜಿಲ್ಲೆಯ ಅಭಿವೃದ್ಧಿ ಮತ್ತು ಕೊರೊನಾ ಮೂರನೇ ಅಲೆ ಸಮರ್ಪಕ ನಿರ್ವಹಣೆ ಹಿತದೃಷ್ಟಿಯಿಂದ ಕಾಯಂ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡುವಂತೆ ಸರಕಾರವನ್ನು ಒತ್ತಾಯಿಸಿ ರೈತಸಂಘದಿಂದ ಜ.20ರಂದು ಎಲ್ಲ ಜನಪ್ರತಿನಿಧಿಗಳ ಮನೆ ಮುಂದೆ ಸಗಣಿ ಚಳವಳಿ ಮಾಡುವ ಮುಖಾಂತರ ನ್ಯಾಯ ಪಡೆದುಕೊಳ್ಳುವ ನಿರ್ಧಾರ ಕೈಗೊಳ್ಳಲಾಯಿತು. ಸಭೆಯಲ್ಲಿ ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್‌, ಮಹಿಳಾ ಜಿಲ್ಲಾಧ್ಯಕ್ಷ ಎ.ನಳಿನಿಗೌಡ, ಕೋಲಾರ ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್‌, ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ, ಶಿವನಾರಹಳ್ಳಿ ವೇಣು, ಹೆಬ್ಬಣಿ ಆನಂದರೆಡ್ಡಿ, ಲಾಯರ್‌ ಮಣಿ, ಯಾರಂಘಟ್ಟ ಗಿರೀಶ್‌, ಪುತ್ತೇರಿ ರಾಜು, ಮಂಗಸಂದ್ರ ತಿಮ್ಮಣ್ಣ, ನಾಗೇಶ್‌, ಮಾಲೂರು ತಾಲೂಕು ಅಧ್ಯಕ್ಷ ಪೆಮ್ಮದೊಡ್ಡಿ ಯಲ್ಲಣ್ಣ ಮತ್ತಿತರರು ಉಪಸ್ಥಿತರಿದ್ದರು.


from India & World News in Kannada | VK Polls https://ift.tt/3fAwhe8

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...