ಮಾಸ್ಕೊ: ರಷ್ಯಾ ಹಾಗೂ ಉಕ್ರೇನ್ ನಡುವಿನ ಮುಸುಕಿನ ಗುದ್ದಾಟ ಈಗ ಅಮೆರಿಕದ ಅಂಗಳ ತಲುಪಿದೆ. ಬಿಕ್ಕಟ್ಟು ಶಮನಗೊಳಿಸಲು ಸಹಕರಿಸಿ ಎಂದು ರಷ್ಯಾ ಮನವಿ ಮಾಡಿದ್ದರೂ, ಅಮೆರಿಕ ಮಾತ್ರ ಯಾವುದೇ ಪ್ರಕ್ರಿಯೆ ನೀಡಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ಉಭಯ ರಾಷ್ಟ್ರಗಳ ನಡುವಿನ ಬಿಕ್ಕಟ್ಟು ಯಾವ ಹಂತಕ್ಕೆ ತಲುಪುತ್ತದೆ ಎಂಬ ಕುತೂಹಲ ಮೂಡಿದೆ. 'ಮಧ್ಯ ಪ್ರವೇಶ ಮಾಡಿ ಬಿಕ್ಕಟ್ಟು ಶಮನಗೊಳಿಸಬೇಕು ಹಾಗೂ ರಷ್ಯಾಗೆ ಭದ್ರತೆ ಖಾತರಿಪಡಿಸಬೇಕು ಎಂದು ಅಮೆರಿಕ ಹಾಗೂ ನ್ಯಾಟೋಗೆ ಮನವಿ ಮಾಡಿದರೂ ಇದುವರೆಗೆ ಸಕಾರಾತ್ಮಕ ಉತ್ತರ ಬಂದಿಲ್ಲ. ಹಾಗಾಗಿ, ಎರಡೂ ದೇಶಗಳ ನಡುವಿನ ಗೊಂದಲ ಮುಂದುವರಿದಿದೆ' ಎಂದು ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೋವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಂದೆಡೆ, ಉಕ್ರೇನ್ ಗಡಿಗೆ ರಷ್ಯಾ ಒಂದು ಲಕ್ಷಕ್ಕೂ ಅಧಿಕ ಸೈನಿಕರನ್ನು ನಿಯೋಜಿಸಿ ಯುದ್ಧದ ಭೀತಿ ಸೃಷ್ಟಿಸಿದೆ. ಮತ್ತೊಂದೆಡೆ ಅಮೆರಿಕ ಹಾಗೂ ನ್ಯಾಟೋ ಬಳಿ ತಮ್ಮ ದೇಶದ ಭದ್ರತೆ ಕುರಿತು ಕಳವಳ ವ್ಯಕ್ತಪಡಿಸಿದೆ. ಹಾಗಾಗಿಯೇ, ಇದುವರೆಗೂ ಈ ಕುರಿತು ಮಧ್ಯ ಪ್ರವೇಶಿಸಲು ಅಮೆರಿಕ ಮುಂದಾಗಿಲ್ಲ ಎಂದು ತಿಳಿದು ಬಂದಿದೆ. ಅತ್ತ, ನ್ಯಾಟೋ ನಿಲುವು ಉಕ್ರೇನ್ ಪರವಾಗಿ ಇದ್ದರೂ ಯಾವುದೇ ಬಹಿರಂಗ ಹೇಳಿಕೆ ನೀಡುತ್ತಿಲ್ಲ. ಹಾಗಾಗಿ, ಉಭಯ ರಾಷ್ಟ್ರಗಳ ಬಿಕ್ಕಟ್ಟು ಕಗ್ಗಂಟಾಗಿಯೇ ಉಳಿಯುವಂತಾಗಿದೆ. ರಷ್ಯಾ ಹಾಗೂ ಉಕ್ರೇನ್ ನಡುವೆ ದಶಕಗಳಿಂದಲೂ ಬಿಕ್ಕಟ್ಟು ಇದೆ. ಅದರಲ್ಲೂ, 1991ರ ಬಳಿಕ ರಷ್ಯಾ ಹಿಡಿತದಿಂದ ಉಕ್ರೇನ್ ಮುಕ್ತವಾದ ಬಳಿಕ ಆ ರಾಷ್ಟ್ರದ ಮೇಲೆ ರಷ್ಯಾ ಆಗಾಗ ಪ್ರಾಬಲ್ಯ ಸಾಧಿಸಲು ಹವಣಿಸುತ್ತದೆ. ಇದರ ಭಾಗವಾಗಿಯೇ ಈಗ ಪೂರ್ವ ಉಕ್ರೇನ್ ಗಡಿಗೆ ಲಕ್ಷಾಂತರ ಸೈನಿಕರನ್ನು ನಿಯೋಜಿಸಿ ಯುದ್ಧದ ಭೀತಿ ಹೆಚ್ಚಿಸಿದೆ. ಅಲ್ಲದೆ, ಉಕ್ರೇನ್‌ಗೆ ನ್ಯಾಟೋ ಒಕ್ಕೂಟದ ಸದಸ್ಯತ್ವ ಸಿಗಬಾರದು ಎಂಬುದು ರಷ್ಯಾ ಒತ್ತಾಯವಾಗಿದೆ. ಯುದ್ಧವಿಲ್ಲ ಎಂದ ರಷ್ಯಾ: ಉಕ್ರೇನ್ ಗಡಿಗೆ ಲಕ್ಷಾಂತರ ಸೈನಿಕರನ್ನು ನಿಯೋಜಿಸಿರುವ ರಷ್ಯಾ, ಯುದ್ಧ ಸಾರುವ ಮೂಲಕ ಅತಿಕ್ರಮಣ ಮಾಡಲು ಮುಂದಾಗಿದೆ ಎಂಬ ಮಾತುಗಳನ್ನು ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೋವ್ ತಳ್ಳಿ ಹಾಕಿದ್ದಾರೆ. 'ಯಾವ ರಾಷ್ಟ್ರಗಳ ಮೇಲೂ ರಷ್ಯಾ ಆಕ್ರಮಣ ಮಾಡುವುದಿಲ್ಲ. ದೇಶ ದೇಶಗಳ ಮಧ್ಯೆ ಯುದ್ಧದ ಸನ್ನಿವೇಶ ಕುರಿತ ಚಿಂತನೆಯೇ ಸ್ವೀಕಾರಾರ್ಹವಲ್ಲ. ನಾವು ಮೊದಲು ಸಹ ಇದನ್ನೇ ಹೇಳಿದ್ದೇವೆ. ಈಗಲೂ ಇದನ್ನೇ ಹೇಳುತ್ತಿದ್ದೇವೆ. ಯಾರ ಮೇಲೂ ದಾಳಿ ಮಾಡುವ ಉದ್ದೇಶ ನಮ್ಮದಲ್ಲ' ಎಂದು ಸ್ಪಷ್ಪಪಡಿಸಿದ್ದಾರೆ.
from India & World News in Kannada | VK Polls https://ift.tt/3KNx2iy