ನೈಸ್‌ ರಸ್ತೆಯಲ್ಲಿ ಸಂಚಾರ ಸಲೀಸಲ್ಲ: ಸವಾರರ ಜೀವಕ್ಕೆ ಕುತ್ತು ತರುತ್ತಿರುವ ಅತಿ ವೇಗ!

ನಾಗಪ್ಪ ನಾಗನಾಯಕನಹಳ್ಳಿ, ಬೆಂಗಳೂರು: ರಾಜಧಾನಿಯ ಹೊರವಲಯದಲ್ಲಿ ಪೂರ್ವ-ಪಶ್ಚಿಮ ಮತ್ತು ಉತ್ತರ-ದಕ್ಷಿಣ ದಿಕ್ಕಿನ ಪ್ರದೇಶಗಳನ್ನು ಬೆಸೆಯಲು ಪ್ರಮುಖ ಸಂಪರ್ಕ ಸೇತುವೆಯಾಗಿರುವ 'ನೈಸ್‌' ರಸ್ತೆಯಲ್ಲಿ ವಾಹನಗಳ ವೇಗದ ಮಿತಿಗೆ ಕಡಿವಾಣ ಹಾಕದಿರುವುದು ಅಪಾಯಕ್ಕೆ ಎಡೆಮಾಡಿಕೊಟ್ಟಿದೆ. ಶರವೇಗದ ಸಂಚಾರವು ಹಲವರ ಜೀವಕ್ಕೆ ಸಂಚಕಾರ ತಂದೊಡ್ಡುತ್ತಿದೆ. ಹೊಸೂರು ರಸ್ತೆಯ ಎಲೆಕ್ಟ್ರಾನಿಕ್‌ ಸಿಟಿಯಿಂದ ತುಮಕೂರು ರಸ್ತೆಯ ಮಾದಾವರದವರೆಗೆ 41 ಕಿ.ಮೀ. ಮತ್ತು ಹೊಸಕೆರೆಹಳ್ಳಿಯಿಂದ ಸೋಂಪುರ ಜಂಕ್ಷನ್‌ಗೆ 11 ಕಿ.ಮೀ. ಉದ್ದದ ರಸ್ತೆ ಜಾಲವನ್ನು ನೈಸ್‌ ಹೊಂದಿದೆ. ಈ ರಸ್ತೆಗೆ ಎಲೆಕ್ಟ್ರಾನಿಕ್‌ ಸಿಟಿ, ಬನ್ನೇರುಘಟ್ಟ ರಸ್ತೆ, ಕನಕಪುರ ರಸ್ತೆ, ಮೈಸೂರು ರಸ್ತೆ, ಮಾಗಡಿ ರಸ್ತೆ, ತುಮಕೂರು ರಸ್ತೆ, ಗೊರಗುಂಟೆಪಾಳ್ಯ, ನಾಯಂಡಹಳ್ಳಿ ಜಂಕ್ಷನ್‌ನಿಂದಲೂ ಸಾಗರೋಪಾದಿಯಲ್ಲಿ ವಾಹನಗಳು ಬಂದು ಸೇರುತ್ತವೆ. ಪ್ರತಿದಿನ ಸುಮಾರು 80 ಸಾವಿರಕ್ಕೂ ಅಧಿಕ ವಾಹನಗಳು ನೈಸ್‌ ರಸ್ತೆಯನ್ನು ಬಳಸುತ್ತವೆ. ಹೀಗಾಗಿ, ಸದಾ ವಾಹನಗಳ ಜಾತ್ರೆ ಇದ್ದೇ ಇರುತ್ತದೆ. ಕೆಲವೆಡೆ ಗೆರೆ ಎಳೆದಂತೆ ನೇರವಾಗಿರುವ ಮತ್ತು ಇನ್ನೂ ಕೆಲವೆಡೆ ಹಾವಿನಂತೆ ಸಾಗಿರುವ ನೈಸ್‌ ಹಾದಿಯಲ್ಲಿ ವೇಗದ ಮಿತಿ ನಿಗದಿಪಡಿಸಿ, ಎಚ್ಚರಿಕೆಯ ಸಂದೇಶದ ಫಲಕಗಳನ್ನು ಅಳವಡಿಸಲಾಗಿದೆ. ಆದರೆ, ಇದಕ್ಕೆ ಸೊಪ್ಪು ಹಾಕದ ಸವಾರರು ಮಿತಿ ಮೀರಿದ ವೇಗದಲ್ಲಿ ವಾಹನ ಚಲಾಯಿಸುವ ದೂರುಗಳಿವೆ. ಅಲ್ಲದೆ, ಟೋಲ್‌ ಶುಲ್ಕ ಪಾವತಿಸಿಕೊಳ್ಳಲಷ್ಟೇ ಆಸಕ್ತಿ ತೋರುವ ನೈಸ್‌ ಸಂಸ್ಥೆಯು, ವಾಹನಗಳ ವೇಗದ ಮೇಲೆ ನಿಗಾ ಇಟ್ಟು, ನಿಯಂತ್ರಿಸುವ ಕೆಲಸ ಮಾಡುತ್ತಿಲ್ಲ ಎಂಬ ಅಪವಾದವೂ ಇದೆ. ಪರಿಣಾಮ, ಆಗಾಗ್ಗೆ ಅನಾಹುತಗಳು ಘಟಿಸುತ್ತಲೇ ಇವೆ. ಅಪಘಾತಗಳಲ್ಲಿ ಹಲವು ಜೀವಗಳ ಬಲಿ ನೈಸ್‌ ರಸ್ತೆಯಲ್ಲಿ ಇತ್ತೀಚೆಗೆ ನಡೆದ ಸರಣಿ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದರು. ವ್ಯಾಗನರ್‌ ಕಾರೊಂದು ಪುರವಂಕರ ವಸತಿ ಸಮುಚ್ಚಯದ ಬಳಿ ಸಾಗುತ್ತಿದ್ದಾಗ ಲಾರಿಯೊಂದು ಅತಿ ವೇಗವಾಗಿ ಬಂದು ಕಾರಿಗೆ ಡಿಕ್ಕಿ ಹೊಡೆದಿತ್ತು. ಈ ಅಪಘಾತದಿಂದಾಗಿ ಅಕ್ಕಪಕ್ಕದಲ್ಲಿ ಸಾಗುತ್ತಿದ್ದ ಕ್ವಾಲಿಸ್‌, ಸ್ವಿಫ್ಟ್‌ ಕಾರು, ಮೂರು ಕಂಟೈನರ್‌ ವಾಹನಗಳೂ ಜಖಂಗೊಂಡವು. ಕ್ವಾಲಿಸ್‌ನಲ್ಲಿದ್ದ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದವು. ಇಂಥ ದುರ್ಘಟನೆಗಳು ಪದೇಪದೆ ಮರುಕಳಿಸುತ್ತಲೇ ಇವೆ. ಮಣ ಭಾರದ ಸರಕು ಹೊತ್ತು ಆಮೆ ವೇಗದಲ್ಲಿ ಸಂಚರಿಸುವ ಟ್ರಕ್‌ಗಳು, ಲಾರಿಗಳನ್ನು ಹಿಂದಿಕ್ಕುವ ಭರದಲ್ಲಿ ಕಾರು ಮತ್ತು ದ್ವಿಚಕ್ರ ವಾಹನಗಳು ಅಪಘಾತಕ್ಕೀಡಾಗುತ್ತಿವೆ. ರಸ್ತೆ ಬದಿಯಲ್ಲೇ ಸರಕು ಸಾಗಣೆ ವಾಹನಗಳನ್ನು ನಿಲುಗಡೆ ಮಾಡುವ ಸಂದರ್ಭದಲ್ಲೂ ಅವಘಡಗಳು ಜರುಗುತ್ತಿವೆ. ಈ ರಸ್ತೆಯಲ್ಲಿ ಪುಂಡರ ವ್ಹೀಲಿಂಗ್‌ ಸಹ ಮಿತಿ ಮೀರಿದೆ. ಇದರಿಂದ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ರಸ್ತೆಯಲ್ಲಿ ಇತ್ತೀಚಿನ ದಿನಗಳಲ್ಲಿ ಅಪಘಾತಗಳು ಹೆಚ್ಚುತ್ತಿದ್ದು, ನಿರ್ಲಕ್ಷ್ಯ ವಹಿಸುತ್ತಿರುವ ಆಡಳಿತ ಮಂಡಳಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ ಎಂದು ವಿಭಾಗದ ಜಂಟಿ ಕಮಿಷನರ್‌ ಬಿ.ಆರ್‌.ರವಿಕಾಂತೇಗೌಡ ಪೊಲೀಸರಿಗೆ ಸೂಚನೆ ನೀಡಿದ್ದರು. ನೈಸ್‌ ಆಡಳಿತ ಮಂಡಳಿಗೂ ಎಚ್ಚರಿಕೆ ನೀಡಿದ್ದರು. ಇದರಿಂದ ಎಚ್ಚೆತ್ತ ಆಡಳಿತ ಮಂಡಳಿ ಅಪಘಾತಗಳಿಗೆ ಕಾರಣ ಎನ್ನಲಾದ ದ್ವಿಚಕ್ರ ವಾಹನಗಳ ರಾತ್ರಿ ಸಂಚಾರಕ್ಕೆ ಜ. 16 ರಿಂದ ನಿರ್ಬಂಧ ವಿಧಿಸಿದೆ. ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ದ್ವಿಚಕ್ರ ವಾಹನಗಳ ರಾತ್ರಿ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ದ್ವಿಚಕ್ರ ವಾಹನಗಳ ರಾತ್ರಿ ಸಂಚಾರ ನಿಷೇಧಕ್ಕೆ ಅಪಘಾತಗಳಷ್ಟೇ ಕಾರಣವಲ್ಲ; ದುಷ್ಕರ್ಮಿಗಳು ಸವಾರರನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದರು. ಇದಕ್ಕೆಲ್ಲಾ ಕಡಿವಾಣ ಹಾಕುವ ಉದ್ದೇಶದಿಂದಲೇ ಈ ಕ್ರಮ ಕೈಗೊಳ್ಳಲಾಗಿದೆ. ಸಂಚಾರ ಪೊಲೀಸರಿಗೆ ನೋ 'ಎಂಟ್ರಿ' ನೈಸ್‌ ರಸ್ತೆಯ ಪ್ರವೇಶ ಮತ್ತು ನಿರ್ಗಮನದ ದ್ವಾರದಲ್ಲಷ್ಟೇ ಸಂಚಾರ ಪೊಲೀಸರು ವಾಹನಗಳ ತಪಾಸಣೆ ನಡೆಸಿ, ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸುತ್ತಿದ್ದಾರೆ. ಆದರೆ, ನೈಸ್‌ ರಸ್ತೆಯ ಹಾದಿಯಲ್ಲಿ ತಪಾಸಣೆ ನಡೆಸಲು ಅವಕಾಶವಿಲ್ಲ. ಹೀಗಾಗಿಯೇ, ವಾಹನ ಸವಾರರು ಲಗಾಮಿಲ್ಲದ ಕುದುರೆಗಳಂತೆ ಅತಿ ವೇಗದಲ್ಲಿ ಸಂಚರಿಸುವುದು ಮಾಮೂಲಿ ಆಗಿದೆ. ಆ ಮೂಲಕ ಸಹ ಸವಾರರ ಜೀವದ ಜತೆ ಚೆಲ್ಲಾಟವಾಡುತ್ತಿದ್ದಾರೆ. ಇತ್ತ ನೈಸ್‌ ಸಂಸ್ಥೆಯೂ ವಾಹನಗಳ ವೇಗಕ್ಕೆ ಕಡಿವಾಣ ನಿಟ್ಟಿನಲ್ಲಿ ಗಮನ ಹರಿಸುತ್ತಿಲ್ಲ. ಸ್ಪೀಡ್‌ ಬ್ರೇಕರ್‌ಗಳನ್ನೂ ಅಳವಡಿಸುತ್ತಿಲ್ಲ. ''ಹೆಲ್ಮೆಟ್‌ ಧರಿಸದ ದ್ವಿಚಕ್ರ ವಾಹನ ಸವಾರರ ಸಂಚಾರಕ್ಕೆ ಅನುಮತಿ ನೀಡುತ್ತಿಲ್ಲ. ವೇಗದ ಮಿತಿಯನ್ನು ಕೆಲವೆಡೆ 60 ಕಿ.ಮೀ., ಉಳಿದೆಡೆ 80 ಕಿ.ಮೀ.ಗೆ ನಿಗದಿಪಡಿಸಿ, ರಸ್ತೆಯುದ್ದಕ್ಕೂ ಸೂಚನಾ ಫಲಕ ಅಳವಡಿಸಿದ್ದೇವೆ. ಟೋಲ್‌ಗಳ ಬಳಿ ರಂಬ್ಲರ್ಸ್ ಹಾಕಿದ್ದೇವೆ. ಸುಗಮ ಸಂಚಾರಕ್ಕಾಗಿ ಕ್ಯಾಟ್‌ ಐ, ರಿಫ್ಲೆಕ್ಟರ್‌ಗಳು, ಡೆಲಿಮೀಟರ್‌ಗಳನ್ನೂ ಅಳವಡಿಸಲಾಗಿದೆ. ತುರ್ತು ನೆರವಿಗೆ ಸಂಪರ್ಕಿಸಲು ಸಹಾಯವಾಣಿ ಸಂಖ್ಯೆಯ ಫಲಕಗಳನ್ನೂ ಪ್ರದರ್ಶಿಸಲಾಗಿದೆ. ಅಪಘಾತಗಳಲ್ಲಿ ಗಾಯಗೊಂಡವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲು 5 ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸಲಾಗಿದೆ. 7 ಗಸ್ತು ವಾಹನಗಳು ದಿನವಿಡೀ ಗಸ್ತು ತಿರುಗುತ್ತಿರುತ್ತವೆ. ಆದರೆ, ಕೆಲವರು ನಿಯಮ ಉಲ್ಲಂಘಿಸಿ ವೇಗವಾಗಿ ವಾಹನ ಚಲಾಯಿಸಿಕೊಂಡು ಹೋಗುತ್ತಾರೆ. ಇಂಥವರನ್ನು ನಿಯಂತ್ರಿಸುವುದು ಕಷ್ಟವಾಗಿದೆ,'' ಎಂದು ನೈಸ್‌ ಸಂಸ್ಥೆಯ ವಕ್ತಾರರೊಬ್ಬರು ತಿಳಿಸಿದರು. ''ಮಳೆಗಾಲದಲ್ಲಿ ನೈಸ್‌ ರಸ್ತೆಯ ಹಲವೆಡೆ ಗುಂಡಿಗಳು ಬಿದ್ದು, ಸಂಚರಿಸಲಾಗದಷ್ಟು ಹದಗೆಟ್ಟಿತ್ತು. ಭಾರಿ ವಾಹನಗಳ ಸಂಚಾರದ ಒತ್ತಡದಿಂದ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದವು. ವ್ಯವಸ್ಥಿತ ನಿರ್ವಹಣೆ ಇಲ್ಲದ ಕಾರಣ ಆಗಾಗ್ಗೆ ಅಪಘಾತಗಳು ಸಂಭವಿಸುತ್ತಿವೆ. ರಸ್ತೆ ಲೇನ್‌ಗಳೂ ಅಳಿಸಿ ಹೋಗಿವೆ. ಸಿಸಿಟಿವಿ ಕ್ಯಾಮೆರಾಗಳು ಎಲ್ಲಿಯೂ ಕಾಣಸಿಗುವುದಿಲ್ಲ. ತುರ್ತು ಕರೆಯ ಸಂಖ್ಯೆಗಳಿಗೆ ಕರೆ ಮಾಡಿದರೆ ಸರಿಯಾಗಿ ಸ್ಪಂದಿಸುವುದಿಲ್ಲ ಎಂಬುದು ವಾಹನ ಸವಾರರ ದೂರು. ಕಾಂಕ್ರೀಟ್‌ ಕಾಮಗಾರಿಯಿಂದ ಹೈರಾಣ ನೈಸ್‌ ಸಂಸ್ಥೆಯು ಎಲೆಕ್ಟ್ರಾನಿಕ್‌ ಸಿಟಿಯಿಂದ ತುಮಕೂರು ರಸ್ತೆವರೆಗೆ ಕಾಂಕ್ರೀಟ್‌ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಂಡಿದೆ. ಸದ್ಯ ಕನಕಪುರ ಮುಖ್ಯರಸ್ತೆಯಿಂದ ಸೋಂಪುರವರೆಗೆ ಒಂದು ಪಾಶ್ರ್ವದ 3.5 ಕಿ.ಮೀ. ಮಾರ್ಗದಲ್ಲಿ ಕಾಮಗಾರಿ ಕೈಗೊಂಡಿದ್ದು, ವಾಹನ ಸಂಚಾರ ನಿಷೇಧಿಸಲಾಗಿದೆ. ಮತ್ತೊಂದು ಪಾಶ್ರ್ವದ ರಸ್ತೆಯಲ್ಲಿಮರಳಿನ ಮೂಟೆಗಳ ಬ್ಯಾರಿಕೇಡ್‌ ಅಳವಡಿಸಿ ದ್ವಿಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ವಾಹನಗಳು ಸಾಲುಗಟ್ಟಿ ನಿಲ್ಲುತ್ತಿದ್ದು, ಸವಾರರು ಹೈರಾಣಾಗುವಂತಾಗಿದೆ. ''ಟೋಲ್‌ನಲ್ಲಿಶುಲ್ಕ ಪಾವತಿಸಿದರೂ ಸುಗಮ ಸಂಚಾರಕ್ಕೆ ಅವಕಾಶವಿಲ್ಲದಂತಾಗಿದೆ. ಕಾಮಗಾರಿಯಿಂದ ಸಂಚಾರ ದಟ್ಟಣೆ ಉಂಟಾಗುತ್ತಿದ್ದು, ತಾಸುಗಟ್ಟಲೆ ರಸ್ತೆಯಲ್ಲೇ ಕಾಲ ಕಳೆಯಬೇಕಾಗಿದೆ. ನಿತ್ಯ ಬೆಳಗ್ಗೆ ಮತ್ತು ಸಂಜೆ ವೇಳೆ ವಿಪರೀತ ದಟ್ಟಣೆ ಆಗುತ್ತಿದೆ' ಎಂದು ಸವಾರರು ತಿಳಿಸಿದರು. ''ಮುಂದಿನ ಮೂರು ವರ್ಷಗಳಲ್ಲಿ ಕಾಂಕ್ರೀಟ್‌ ರಸ್ತೆ ನಿರ್ಮಿಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಹಂತ- ಹಂತವಾಗಿ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಕೆಲಸ ಮುಗಿದ ಭಾಗದಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ಈ ವರ್ಷಾಂತ್ಯದೊಳಗೆ ಕನಕಪುರ ರಸ್ತೆಯಿಂದ ತುಮಕೂರು ರಸ್ತೆವರೆಗೆ ಕಾಂಕ್ರೀಟ್‌ ಕಾಮಗಾರಿ ಮುಗಿಸಲಾಗುವುದು. ಆನಂತರ ಎಲೆಕ್ಟ್ರಾನಿಕ್‌ ಸಿಟಿ ಕಡೆಗೆ ಕೆಲಸ ಆರಂಭಿಸಲಾಗುವುದು,'' ಎಂದು ನೈಸ್‌ ಸಂಸ್ಥೆಯ ಎಂಜಿನಿಯರ್‌ವೊಬ್ಬರು ಮಾಹಿತಿ ನೀಡಿದರು.


from India & World News in Kannada | VK Polls https://ift.tt/32hr880

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...