ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹಿನ್ನಡೆ;ರಾಜ್ಯ ಬಿಜೆಪಿ ವರದಿ ಪಡೆದ ಹೈಕಮಾಂಡ್‌

ಬೆಂಗಳೂರು: ವಾರಾಂತ್ಯದಲ್ಲಿ ನಡೆಯಲಿರುವ ರಾಜ್ಯ ಬಿಜೆಪಿ ಚಿಂತನ ಬೈಠಕ್‌ ಹಿನ್ನೆಲೆಯಲ್ಲಿ, ಇತ್ತೀಚಿನ ಚುನಾವಣೆ ಸೋಲಿನ ಬಗ್ಗೆ ಹೈಕಮಾಂಡ್‌ ವರದಿ ತರಿಸಿಕೊಂಡಿದೆ. ಇದರ ಆಧಾರದಲ್ಲಿ ಆತ್ಮಾವಲೋಕನ ಹಾಗೂ 2023ರ ವಿಧಾನಸಭೆ ಚುನಾವಣೆಗೆ ರೂಟ್‌ ಮ್ಯಾಪ್‌ ಸಿದ್ಧಪಡಿಸುವ ಪ್ರಕ್ರಿಯೆ ನಡೆಯಲಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಹೊರಬಿದ್ದ ಬೆನ್ನಿಗೇ ವರಿಷ್ಠರ ಸೂಚನೆಯಂತೆ ರಾಜ್ಯ ಬಿಜೆಪಿಯಿಂದ ದಿಲ್ಲಿಗೆ ವರದಿ ರವಾನಿಸಲಾಗಿದೆ. ಅದಧಿಕ್ಕಿಂತಲೂ ಮುಖ್ಯವಾಗಿ ಚುನಾವಣೆಗಳಲ್ಲಿ ಹಿನ್ನಡೆ ಸೇರಿದಂತೆ ರಾಜ್ಯ ಬಿಜೆಪಿ ವಿದ್ಯಮಾನದ ಬಗ್ಗೆ ವರಿಷ್ಠರು ಖುದ್ದು ಮಾಹಿತಿ ಕಲೆ ಹಾಕಿದ್ದಾರೆ. ಹಾಗಾಗಿ ತನ್ನದೇ ಮೂಲಗಳಿಂದ ಹೈಕಮಾಂಡ್‌ ಪಡೆದ ಮಾಹಿತಿ ಬಗ್ಗೆಯೇ ಚಿಂತನ ಬೈಠಕ್‌ನಲ್ಲಿ ಪ್ರಮುಖವಾಗಿ ಚರ್ಚೆಯಾಗುವ ನಿರೀಕ್ಷೆಯಿದೆ. ನಾನಾ ಕಾರಣದಿಂದ ಇತ್ತೀಚಿನ ಚುನಾವಣೆಗಳಲ್ಲಿ ಬಿಜೆಪಿ ಮತ ಗಳಿಕೆ ಪ್ರಮಾಣ ಕಡಿಮೆಯಾಗುತ್ತಿದೆ. ಇದು ವೋಟ್‌ ಬ್ಯಾಂಕ್‌ ಕುಸಿತದ ಮುನ್ಸೂಚನೆಯಾಗಿದೆ. ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕಾರಿಣಿಯಲ್ಲೂ ಈ ಬಗ್ಗೆ ಚರ್ಚೆಯಾಗಿತ್ತು. ಈ ತಿಂಗಳ 7, 8, 9ರಂದು ನಡೆಯುವ ಸಭೆಯಲ್ಲಿ ಈ ವಿಚಾರವಾಗಿ ಗಂಭೀರ ಚರ್ಚೆ ನಡೆಯಲಿದೆ. ಈ ಚಿಂತನ ಬೈಠಕ್‌ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಆಗಮಿಸಲಿದ್ದಾರೆ. ಕೇಂದ್ರ ಸರಕಾರದ ಅಧಿಕೃತ ಕಾರ್ಯಕ್ರಮದ ನಿಮಿತ್ತ ರಾಜ್ಯಕ್ಕೆ ಬರುತ್ತಿರುವ ಗೃಹ ಸಚಿವ ಅಮಿತ್‌ ಶಾ ಕೂಡ ಈ ಸಭೆಗೆ ಬರಬಹುದು ಎಂದು ನಿರೀಕ್ಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಂದಿ ಹಿಲ್ಸ್‌ನ ರೆಸಾರ್ಟ್‌ನಲ್ಲಿ ಈ ಸಭೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕಡೆ ಕ್ಷಣದಲ್ಲಿ ಸಭೆ ನಡೆಯುವ ಸ್ಥಳ ಬದಲಾವಣೆಯೂ ಆಗಬಹುದು. ಈ ಉದ್ದೇಶಕ್ಕೆ ಏರ್‌ಪೋರ್ಟ್‌ ಬಳಿಯ ಹೋಟೆಲ್‌ ಒಂದನ್ನು ಕೂಡ ಪರಿಗಣಿಸುವ ಬಗ್ಗೆ ಪರಾಮರ್ಶೆ ನಡೆಸಲಾಗುತ್ತಿದೆ ಎಂದು ಬಿಜೆಪಿ ಮೂಲಗಳು ಹೇಳುತ್ತವೆ. ವರ್ಚಸ್ಸು ತರಲು ಕಸರತ್ತು: ಸರಕಾರದ ವರ್ಚಸ್ಸು ಹೆಚ್ಚಿಸುವುದು ಕೂಡ ಈ ಸಭೆಯಲ್ಲಿ ಚರ್ಚೆಯಾಗುವ ಅಜೆಂಡಾದಲ್ಲಿ ಇದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ಯೋಜನೆಗಳು ಎಷ್ಟರ ಮಟ್ಟಿಗೆ ಜನರಿಗೆ ತಲುಪಿವೆ, ಈ ಬಗ್ಗೆ ಜನಾಭಿಪ್ರಾಯ ಏನಿದೆ ಎಂಬ ಬಗ್ಗೆ ಪರಾಮರ್ಶೆ ಕೈಗೊಳ್ಳಲಾಗುತ್ತದೆ. ಜತೆಗೆ ನಾನಾ ಯೋಜನೆಗಳ ಬಗ್ಗೆ ಜನರಲ್ಲಿ ಸದಭಿಪ್ರಾಯ ಮೂಡಿಸುವ ವಿಧಾನದ ಬಗ್ಗೆ ಚರ್ಚೆಯಾಗಲಿದೆ ಎಂದು ತಿಳಿದು ಬಂದಿದೆ.


from India & World News in Kannada | VK Polls https://ift.tt/3eP5BpO

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...