ಲಖನೌ: ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಮತದಾನಕ್ಕೆ 10 ದಿನ ಇರುವಾಗಲೇ ಬಿಜೆಪಿಗೆ ಭಾರಿ ಬಲ ಬಂದಿದೆ. ಕಾಂಗ್ರೆಸ್ ನಾಯಕ, ಇತ್ತಿಹಾದ್ - ಎ - ಮಿಲ್ಲತ್ ಸಮಿತಿ ಮುಖ್ಯಸ್ಥ ಮೌಲಾನ ತೌಕೀರ್ ರಾಜಾ ಖಾನ್ ಅವರ ಸೊಸೆ, ತ್ರಿವಳಿ ತಲಾಖ್ ಸಂತ್ರಸ್ತೆ ನಿದಾ ಖಾನ್ ಸೇರಿದಂತೆ, ಸಮಾಜವಾದಿ ಪಕ್ಷ (), ಬಹುಜನ ಸಮಾಜ ಪಕ್ಷ (), ಕಾಂಗ್ರೆಸ್‌ಗಳ ಎರಡು ಡಜನ್‌ಗೂ ಅಧಿಕ ನಾಯಕರು ಭಾನುವಾರ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಮಾಜಿ ಸಚಿವರಾಗಿರುವ ಎಸ್‌ಪಿ ನಾಯಕ ಶಿವಚರಣ್ ಪ್ರಜಾಪತಿ, ಬಿಎಸ್‌ಪಿ ನಾಯಕರಾದ ಗಂಗಾರಾಮ್ ಅಂಬೇಡ್ಕರ್ ಮೊದಲಾದ ನಾಯಕರು, ಲಖನೌನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಹಿರಿಯ ನಾಯಕ ಲಕ್ಷ್ಮೀಕಾಂತ ಬಾಜಪೇಯಿ ಅವರ ಉಪಸ್ಥಿತಿಯಲ್ಲಿ ಪಕ್ಷ ಸೇರ್ಪಡೆಯಾದರು. ರಾಜ್ಯದಲ್ಲಿ ವಿಧಾನಸಭೆ ಚಟುವಟಿಕೆಗಳು ಗರಿಗೆದರುತ್ತಿದ್ದಂತೆಯೇ ಸ್ವಾಮಿ ಪ್ರಸಾದ್ ಮೌರ್ಯ ಸೇರಿದಂತೆ ಒಬಿಸಿಯ ಹಲವು ನಾಯಕರು ಸಮಾಜವಾದಿ ಪಕ್ಷ ಸೇರ್ಪಡೆಯಾಗಿದ್ದು, ಬಿಜೆಪಿಗೆ ಹಿನ್ನಡೆ ಎಂದೇ ಹೇಳಲಾಗಿತ್ತು. ಇದಾದ ಬಳಿಕ ಮುಲಾಯಂ ಸಿಂಗ್ ಯಾದವ್ ಸೊಸೆ ಅಪರ್ಣಾ ಯಾದವ್ ಸೇರಿ ಎಸ್‌ಪಿ, ಬಿಎಸ್‌ಪಿ ಹಾಗೂ ಕಾಂಗ್ರೆಸ್‌ನ ಹಲವು ನಾಯಕರು ಸತತವಾಗಿ ಬಿಜೆಪಿ ಸೇರ್ಪಡೆಯಾಗುತ್ತಿದ್ದು, ಇದರಿಂದ ಕಮಲ ಪಾಳಯದಲ್ಲಿ ಹೊಸ ಚೈತನ್ಯ ಮೂಡಿದೆ. ಇದುವರೆಗೆ ಚುನಾವಣೆ ಪೂರ್ವವಾಗಿ ನಡೆದ ಹಲವು ಸಮೀಕ್ಷೆಗಳು, ರಾಜ್ಯದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಅವರ ವರ್ಚಸ್ಸು ಹಾಗೂ ಮೋದಿ ಅವರ ಅಲೆಯಿಂದಾಗಿ ಜನರು ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ ಎಂಬುದನ್ನು ಅರಿತ ಹಲವು ಪಕ್ಷದ ನಾಯಕರು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ ಎಂದೇ ಹೇಳಲಾಗುತ್ತಿದೆ. ಬಿಜೆಪಿ ಸೇರಿದ ಹತ್ತಾರು ನಾಯಕರು ವಿವಿಧ ಸಮುದಾಯಗಳಿಗೆ ಸೇರಿದವರಾಗಿರುವುದರಿಂದ ಜಾತಿ ಮತಗಳ ಲೆಕ್ಕಾಚಾರದಲ್ಲೂ ಕಮಲ ಪಾಳಯಕ್ಕೆ ಮುನ್ನಡೆ ಎಂದು ವಿಶ್ಲೇಷಿಸಲಾಗುತ್ತಿದೆ. ಮಹಿಳಾ ರಕ್ಷಣೆ ಮೆಚ್ಚಿ ಬಿಜೆಪಿ ಸೇರ್ಪಡೆ ಎಂದ ನಿದಾ 'ತ್ರಿವಳಿ ತಲಾಖ್ ನಿಷೇಧ ಹಾಗೂ ಮಹಿಳೆಯರಿಗೆ ರಕ್ಷಣೆ ನೀಡುವಲ್ಲಿ ಬಿಜೆಪಿಯ ಪ್ರಯತ್ನ ಮೆಚ್ಚಿ ಬಿಜೆಪಿ ಸೇರ್ಪಡೆಯಾಗಿದ್ದೇನೆ' ಎಂದು ತ್ರಿವಳಿ ತಲಾಖ್ ಸಂತ್ರಸ್ತೆಯಾದ ನಿದಾ ಖಾನ್ ತಿಳಿಸಿದ್ದಾರೆ. 'ತ್ರಿವಳಿ ತಲಾಖ್ ನಿಷೇಧದಿಂದ ಮುಸ್ಲಿಂ ಹೆಣ್ಣು ಮಕ್ಕಳಿಗೆ ನೆಮ್ಮದಿ ದೊರೆತಿದೆ. ಅಲ್ಲದೆ, ಬಿಜೆಪಿ ಅವಧಿಯಲ್ಲಿ ಹೆಣ್ಣು ಮಕ್ಕಳ ರಕ್ಷಣೆಗೆ ಹಲವು ಕ್ರಮ ತೆಗೆದುಕೊಳ್ಳಲಾಗಿದೆ. ಇದೆಲ್ಲ ಕೆಲಸಗಳನ್ನು ಮೆಚ್ಚಿ ಬಿಜೆಪಿ ಸೇರಿದ್ದೇನೆ' ಎಂದು ತಿಳಿಸಿದ್ದಾರೆ. ನಿದಾ ಖಾನ್ ಮಾವ ಮೌಲಾನ ತೌಕೀರ್ ರಾಜಾ ಖಾನ್ ಅವರು 15 ದಿನಗಳ ಹಿಂದಷ್ಟೇ ಕಾಂಗ್ರೆಸ್ ಸೇರಿದ್ದು, ಇದಾದ ಬೆನ್ನಲ್ಲೇ ಸೊಸೆ ಬಿಜೆಪಿ ಸೇರಿದ್ದಾರೆ. ಅಲ್ಲದೆ, ಇದಕ್ಕೂ ಮೊದಲು ಮಾವನ ವಿರುದ್ಧವೂ ನಿದಾ ಖಾನ್ ಅಸಮಾಧಾನ ವ್ಯಕ್ತಪಡಿಸಿದ್ದರು. ಅಖಿಲೇಶ್ ಯಾದವ್ ವಿರುದ್ಧ ಅಪರ್ಣಾ ಯಾದವ್ ಕಣಕ್ಕೆ..? ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ಅವರ ಸೊಸೆ ಅಪರ್ಣಾ ಯಾದವ್ ಅವರನ್ನು ಅಧ್ಯಕ್ಷ ಅಖಿಲೇಶ್ ಯಾದವ್ ವಿರುದ್ಧವೇ ಕಣಕ್ಕಿಳಿಸಲು ಬಿಜೆಪಿ ಚಿಂತನೆ ನಡೆಸಿದೆ. ಕರ್ಹಾಲ್ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಅಖಿಲೇಶ್ ಯಾದವ್ ಘೋಷಿಸಿದ್ದು, ಈಗ ಅವರ ವಿರುದ್ಧ ಸಂಬಂಧಿಯನ್ನೇ ಕಣಕ್ಕಿಳಿಸುವ ಮೂಲಕ ಜಿದ್ದಾಜಿದ್ದಿಯ ಸ್ಪರ್ಧೆಯೊಡ್ಡಲು ಕಮಲ ಪಾಳಯ ತೀರ್ಮಾನಿಸಿದೆ. ಇತ್ತೀಚೆಗೆ ಬಿಜೆಪಿ ಸೇರಿದ ಬಳಿಕ ಅಪರ್ಣಾ ಯಾದವ್ ಸಹ ಅಖಿಲೇಶ್ ವಿರುದ್ಧ ಸ್ಪರ್ಧೆಗೆ ಉತ್ಸಾಹ ತೋರಿಸಿದ್ದಾರೆ ಎಂದು ತಿಳಿದು ಬಂದಿದೆ. ಮುಸ್ಲಿಂ ಬಾಹುಳ್ಯ ಗ್ರಾಮದ ಜನ ಸಿಎಂ ಯೋಗಿಗೆ ಬೆಂಬಲ ಉತ್ತರ ಪ್ರದೇಶದಲ್ಲಿ ಮುಸ್ಲಿಮರ ಬೆಂಬಲ ಎಸ್‌ಪಿ ಹಾಗೂ ಬಿಎಸ್‌ಪಿಗೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, 2014ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ರಾಜ್ಯದ ಕಿಥೋರೆ ವಿಧಾನ ಸಭೆ ಕ್ಷೇತ್ರದ ನಾಂಗ್ಲಾ ಸಾಹು ಗ್ರಾಮದ ಮುಸ್ಲಿಮರು ಮಾತ್ರ ಬಿಜೆಪಿಗೆ ಬೆಂಬಲ ನೀಡುತ್ತಿದ್ದಾರೆ. ಅದರಲ್ಲೂ, ಯೋಗಿ ಆದಿತ್ಯನಾಥ್ ಅವರ ಆಡಳಿತ ಮೆಚ್ಚಿ ಇವರು ಪ್ರತಿ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ. ನಾಂಗ್ಲಾ ಸಾಹು ಗ್ರಾಮದಲ್ಲಿ ಶೇ.97ರಷ್ಟು ಮುಸ್ಲಿಮರಿದ್ದು, ಗ್ರಾಮದಲ್ಲಿ ಅರ್ಧ ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದ ಜನ ಬಿಜೆಪಿಗೇ ಮತ ಹಾಕುತ್ತಾರೆ ಎಂದು ತಿಳಿದು ಬಂದಿದೆ. ಎಸ್‌ಪಿ ನಾಯಕ, ಕ್ಷೇತ್ರದ ಶಾಸಕ ಶಾಹಿದ್ ಮಂಜೂರ್ ಅಟ್ಟಹಾಸದಿಂದ ಗ್ರಾಮಸ್ಥರನ್ನು ಮುಕ್ತಗೊಳಿಸಿ, ಇಡೀ ಗ್ರಾಮದಲ್ಲಿ ಶಾಂತಿ ನೆಲೆಸಲು ಮೋದಿ ಹಾಗೂ ಯೋಗಿ ಅವರೇ ಕಾರಣ ಎಂಬ ನಂಬಿಕೆ ಜನರಲ್ಲಿದೆ. ಹಾಗಾಗಿ ಇವರು ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ. ಇವರಲ್ಲಿ ಯುವ ಮುಸ್ಲಿಮರ ಪಾಲೂ ಜಾಸ್ತಿ ಇದೆ. 'ಗ್ರಾಮದಲ್ಲಿ 2014ಕ್ಕೂ ಮೊದಲು ಅಪರಾಧ, ಹಿಂಸೆ ಜಾಸ್ತಿ ಇತ್ತು. ಆದರೆ, ಯೋಗಿ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಗ್ರಾಮದಲ್ಲಿ ಶಾಂತಿ ನೆಲೆಸಿದೆ. ಕಳ್ಳರು, ದರೋಡೆಕೋರರು ಸೇರಿ ಎಲ್ಲ ಅಪರಾಧಿಗಳನ್ನು ನಿರ್ಮೂಲನೆ ಮಾಡಲಾಗಿದೆ. ಹಾಗಾಗಿ ಬಿಜೆಪಿಯನ್ನು ಬೆಂಬಲಿಸುತ್ತಿದ್ದೇವೆ' ಎಂದು ಎಂಜಿನಿಯರಿಂಗ್ ವಿದ್ಯಾರ್ಥಿ ರೆಹಾನ್ ಚೌಹಾಣ್ ತಿಳಿಸಿದ್ದಾರೆ. 'ಯೋಗಿ ಅಧಿಕಾರಕ್ಕೆ ಬಂದ ಬಳಿಕ ಗ್ರಾಮಕ್ಕೆ ಕಳ್ಳರು ಬರುವುದು ನಿಂತಿದೆ. ಕಳ್ಳಕಾಕರ ಉಪಟಳ ನಿಂತು ಹೋಗಿದ್ದು, ನಾವೀಗ ನೆಮ್ಮದಿಯಿಂದ ನಿದ್ದೆ ಮಾಡುವಂತಾಗಿದೆ' ಎಂದು ಮೊಹಮ್ಮದ್ ಎಂಬ ಹಿರಿಯ ನಾಗರಿಕರು ಮಾಧ್ಯಮಗಳಿಗೆ ಹೇಳಿದ್ದಾರೆ. ರೀಟಾ ಬಹುಗುಣ ಪುತ್ರ ಪಕ್ಷಾಂತರ? ಬಿಜೆಪಿ ಸಂಸದೆ ರೀಟಾ ಬಹುಗುಣ ಪುತ್ರ ಮಯಾಂಕ್ ಜೋಶಿ ಅವರಿಗೆ ಲಖನೌ ಕಂಟೋನ್ಮೆಂಟ್ ಕ್ಷೇತ್ರದಿಂದ ಟಿಕೆಟ್ ನೀಡಲು ಬಿಜೆಪಿ ಹಿಂದೇಟು ಹಾಕುತ್ತಿರುವ ಕಾರಣ ಅವರು ಸಮಾಜವಾದಿ ಪಾರ್ಟಿ ಸೇರಲಿದ್ದಾರೆ ಎಂದು ತಿಳಿದುಬಂದಿದೆ. 'ಮಯಾಂಕ್ ಮಾತ್ರವಲ್ಲ ಅವರ ತಾಯಿ ರೀಟಾ ಸಹ ಸಮಾಜವಾದಿ ಪಕ್ಷದ ಜತೆ ಸಂಪರ್ಕದಲ್ಲಿದ್ದಾರೆ. ಶೀಘ್ರದಲ್ಲೇ ಇಬ್ಬರು ಸಹ ಎಸ್‌ಪಿ ಸೇರುವ ಸಾಧ್ಯತೆ ಇದೆ' ಎಂದು ಎಸ್‌ಪಿ ವಕ್ತಾರ ಫಕ್ರುಲ್ ಚಾಂದ್ ಹೇಳಿದ್ದಾರೆ.
from India & World News in Kannada | VK Polls https://ift.tt/bG7xTdpca