ಮುಳಬಾಗಲು: ನಗರದ ಬಳೇಚಂಗಪ್ಪ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಗೆ ನಮಾಜ್ ಮಾಡಲು ಅವಕಾಶ ಕಲ್ಪಿಸಿದರೆಂಬ ಕಾರಣಕ್ಕೆ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳ ಆದೇಶದ ಮೇರೆಗೆ ಮುಖ್ಯ ಶಿಕ್ಷಕಿ ಉಮಾದೇವಿ ಅವರನ್ನು ಬಿಇಒ ಡಿ. ಗಿರಿಜೇಶ್ವರಿ ದೇವಿ ಅಮಾನತುಗೊಳಿಸಿದ್ದಾರೆ. ಶಾಲೆಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಗೆ ನಮಾಜ್ ಮಾಡಲು ಮುಖ್ಯ ಶಿಕ್ಷಕಿ ಅವಕಾಶ ನೀಡಿದ್ದಾರೆ ಎಂಬ ಆರೋಪದ ಮೇಲೆ ಡಿಡಿಪಿಐ ಹಾಗೂ ಸ್ಥಳೀಯ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದರು. ಡಿಡಿಪಿಐ ಅವರು ಸಮಗ್ರ ವರದಿಯನ್ನು ಜಿಲ್ಲಾಧಿಕಾರಿಗೆ ನೀಡಿದ್ದರು. ಸದರಿ ಈ ಶಾಲೆಯಲ್ಲಿ ನಮಾಜ್ ಮಾಡಲು ಅವಕಾಶ ನೀಡಿರುವುದನ್ನು ಖಂಡಿಸಿ ಹಳೆಯ ವಿದ್ಯಾರ್ಥಿಗಳು ಹಾಗೂ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಇದಕ್ಕೆ ಮಣಿದ ಅಧಿಕಾರಿಗಳು ಮುಖ್ಯ ಶಿಕ್ಷಕಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಏನಿದು ಘಟನೆ? ಮುಳಬಾಗಲು ನಗರದ ಸೋಮೇಶ್ವರ ಪಾಳ್ಯದ ಬಳೆಚಂಗಪ್ಪ ಸರಕಾರಿ ಕರ್ನಾಟಕ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ದಿನ ಪ್ರತ್ಯೇಕ ಕೊಠಡಿಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಗೆ ನಮಾಜ್‌ಗೆ ಅವಕಾಶ ಕಲ್ಪಿಸಿದ್ದು, ಇದರಿಂದ ಸಿಟ್ಟುಗೊಂಡ ಹಿಂದೂಪರ ಸಂಘಟನೆಗಳು, ಹಳೆಯ ವಿದ್ಯಾರ್ಥಿಗಳು ವಾರದ ಹಿಂದೆ ನೂರಾರು ಸಂಖ್ಯೆಯಲ್ಲಿ ಶಾಲೆಯ ಮುಂದೆ ಜಮಾಯಿಸಿದ್ದರು. ಶಾಲೆಯಲ್ಲಿ ಮಕ್ಕಳಿಗೆ ನಮಾಜ್ ನೀಡಲು ಅವಕಾಶ ಮಾಡಿಕೊಟ್ಟ ಶಾಲೆಯ ಮುಖ್ಯ ಶಿಕ್ಷಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಅವರನ್ನು ಅಮಾನತುಗೊಳಿಸಲು ಆಗ್ರಹಿಸಿದ್ದರು. ಲಾಕ್‌ಡೌನ್ ಬಳಿಕ ಸ್ಥಗಿತಗೊಂಡಿದ್ದ ಶಾಲೆಗಳು ಮರು ಆರಂಭವಾದ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಶಾಲೆಗಳಿಗೆ ಹಾಜರಾಗುತ್ತಿದ್ದಾರೆ. ಆ ನಡುವೆಯೂ ಪ್ರತಿ ಶುಕ್ರವಾರ ಮುಸ್ಲಿಂ ಸಮುದಾಯದ ಮಕ್ಕಳು ನಮಾಜ್‌ಗೆ ಹೋಗಬೇಕೆಂದು ರಜೆ ಪಡೆಯುವುದು ಕಂಡುಬಂದಿದೆ. ನಮಾಜ್ ಮಾಡಿ ಬರುವುದಾಗಿ ಹೋದರೂ ಮರಳಿ ಮಕ್ಕಳು ಶಾಲೆಗೆ ವಾಪಸ್ ಬರದಿರುವುದನ್ನು ಕಂಡು ಶಾಲೆಯ ಮುಖ್ಯಶಿಕ್ಷಕರು ಮಕ್ಕಳ ಹಾಜರಾತಿ ತಪ್ಪಬಾರದೆಂಬ ಕಾರಣಕ್ಕೆ ಶಾಲೆಯ ಕೊಠಡಿಯೊಂದರಲ್ಲಿಯೇ ಮಕ್ಕಳಿಗೆ ನಮಾಜ್ ಮಾಡಲು ಅವಕಾಶ ನೀಡಿದ್ದರು. ಈ ಸಂಬಂಧ ಕಳೆದ ಸೋಮವಾರ ಡಿಡಿಪಿಐ ರೇವಣ ಸಿದ್ದಪ್ಪ ಮುಖ್ಯ ಶಿಕ್ಷಕಿ ಉಮಾದೇವಿ ಅವರನ್ನು ವಿಚಾರಣೆ ನಡೆಸಿದ ವೇಳೆಯೂ ‘ಕೋವಿಡ್ ಪರಿಸ್ಥಿತಿಯಲ್ಲಿ ಮಕ್ಕಳ ಆರೋಗ್ಯ ಮತ್ತು ಸುರಕ್ಷತೆ ದೃಷ್ಟಿಯಿಂದ ಶಾಲೆಯಲ್ಲಿಯೇ ನಮಾಜ್ ಮಾಡಲು ಅವಕಾಶ ನೀಡಿದೆವು. ಇದರಲ್ಲಿ ಯಾವುದೇ ದುರುದ್ದೇಶವಿಲ್ಲ. ನಮಾಜ್‌ಗೆ ರಜೆ ಪಡೆದು ಹೋಗುತ್ತಿದ್ದ ಮಕ್ಕಳು ಮತ್ತೆ ಶಾಲೆಗೆ ಬರುತ್ತಿರಲಿಲ್ಲ. ಹೀಗಾಗಿ ಅವರ ಶೈಕ್ಷಣಿಕ ಹಿತದೃಷ್ಟಿಯಿಂದ ನಮಾಜ್‌ಗೆ ಅವಕಾಶ ಕಲ್ಪಿಸಿದೆವು’ ಎಂದಿದ್ದರು. ಬಳೇ ಚೆಂಗಪ್ಪ ಶಾಲೆಯಲ್ಲಿ 400 ಮಕ್ಕಳಿದ್ದು, ಈ ಪೈಕಿ 161 ಮಂದಿ ಮುಸ್ಲಿಂ ಸಮುದಾಯಕ್ಕೆ ಸೇರಿದ್ದಾರೆ. ‘ಶಿಕ್ಷಕರು ಒಳ್ಳೆಯ ದೃಷ್ಟಿಯಿಂದ ನೀಡಿದ್ದರೂ ಅದು ತಪ್ಪು. ಮುಖ್ಯ ಶಿಕ್ಷಕರ ಮತ್ತು ಸಹ ಶಿಕ್ಷಕರ ಹೇಳಿಕೆಯನ್ನು ಲಿಖಿತವಾಗಿ ದಾಖಲಿಸಿಕೊಂಡು ಅವರ ಸಹಿ ಪಡೆದಿದ್ದೇವೆ. ಅವರ ಹೇಳಿಕೆಯ ವಿವರ ಒಳಗೊಂಡಂತೆ ಜಿಲ್ಲಾಧಿಕಾರಿಗೆ ಸಮಗ್ರ ವರದಿ ಸಲ್ಲಿಸಲಾಗಿದೆ’ ಎಂದು ರೇವಣ ಸಿದ್ದಪ್ಪ ವಿಚಾರಣೆ ನಡೆಸಿದ ಬಳಿಕ ಮಾಹಿತಿ ನೀಡಿದ್ದರು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ.
from India & World News in Kannada | VK Polls https://ift.tt/3IFtc9d