ಒಟ್ಟಾವಾ: ಕೆನಡಾದಲ್ಲಿ ಕೋವಿಡ್ 19 ಕಡ್ಡಾಯಗೊಳಿಸಿರುವುದನ್ನು ವಿರೋಧಿಸಿ ನಡೆಯುತ್ತಿರುವ ಬೃಹತ್ ಪ್ರತಿಭಟನೆ ಸಂಘರ್ಷದ ಮಟ್ಟಕ್ಕೆ ತಲುಪಿದೆ. ಇದರಿಂದ ಪ್ರಾಣಭಯಕ್ಕೆ ಒಳಗಾಗಿರುವ ಪ್ರಧಾನಿ ಹಾಗೂ ಅವರ ಕುಟುಂಬ ರಾಜಧಾನಿಯಲ್ಲಿನ ತಮ್ಮ ಮನೆಯನ್ನು ತೊರೆದು ಗೋಪ್ಯ ಸ್ಥಳಕ್ಕೆ ಸ್ಥಳಾಂತರಗೊಂಡಿದ್ದಾರೆ. ಗಡಿಯಾಚೆ ಓಡಾಡುವ ಲಸಿಕೆ ಕಡ್ಡಾಯ ನಿಯಮದ ವಿರುದ್ಧ 'ಸ್ವಾತಂತ್ರ್ಯ ರಕ್ಷಣೆ' ಪ್ರತಿಭಟನೆ ಆರಂಭಿಸಿದ್ದು, ಅದು ಈಗ ಟ್ರುಡೋ ಸರ್ಕಾರದ ಕೊರೊನಾ ವೈರಸ್ ನಿಯಂತ್ರಣ ಕ್ರಮಗಳ ವಿರುದ್ಧದ ಬೃಹತ್ ಹೋರಾಟವಾಗಿ ಪರಿವರ್ತನೆ ಹೊಂದಿದೆ. ಸಾವಿರಾರು ಟ್ರಕ್ ಚಾಲಕರು ಮತ್ತು ಇತರೆ ಪ್ರತಿಭಟನಾಕಾರರು ರಾಜಧಾನಿ ನಗರದಲ್ಲಿ ಶನಿವಾರ ಜಮಾಯಿಸಿದ್ದು, ಲಸಿಕೆ ಕಡ್ಡಾಯಗೊಳಿಸಿರುವುದನ್ನು ವಾಪಸ್ ಪಡೆಯುವಂತೆ ಹಾಗೂ ಇತರೆ ಸಾರ್ವಜನಿಕ ಆರೋಗ್ಯ ನಿಯಂತ್ರಣ ಕ್ರಮಗಳನ್ನು ನಿಲ್ಲಿಸುವಂತೆ ಆಗ್ರಹಿಸಿದ್ದರು ಎಂದು ಕೆನಡಿಯನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ ವರದಿ ಮಾಡಿದೆ. ಪ್ರತಿಭಟನಾಕಾರರಲ್ಲಿ ಮಕ್ಕಳು, ವೃದ್ಧರು ಮತ್ತು ವಿಶೇಷಚೇತನರು ಕೂಡ ಸೇರಿದ್ದಾರೆ. ಕೆಲವು ಪ್ರತಿಭಟನಾಕಾರರು ಸರ್ಕಾರ, ಮುಖ್ಯವಾಗಿ ಪ್ರಧಾನಿ ಟ್ರುಡೋ ವಿರುದ್ಧ ಆಕ್ರೋಶ ಭರಿತ ಮತ್ತು ಅವಾಚ್ಯ ಪದಗಳನ್ನು ಬಳಸಿ ನಿಂದಿಸುತ್ತಿದ್ದಾರೆ ಎಂದು ದಿ ಗ್ಲೋಬ್ ಆಂಡ್ ಮೇಲ್ ಪತ್ರಿಕೆ ವರದಿ ತಿಳಿಸಿದೆ. ಕೆಲವು ಪ್ರತಿಭಟನಾಕಾರರು ಪ್ರಮುಖ ಯುದ್ಧ ಸ್ಮಾರಕದಲ್ಲಿ ನರ್ತಿಸುವುದು ವಿಡಿಯೋಗಳಲ್ಲಿ ಸೆರೆಯಾಗಿದೆ. ಪ್ರತಿಭಟನಾಕಾರರ ಈ ವರ್ತನೆಯನ್ನು ಕೆನಡಾದ ಪ್ರಮುಖ ಯೋಧ ಜನರಲ್ ವೇಯ್ನ್ ಐರ್ ಮತ್ತು ಕೆನಡಾ ರಕ್ಷಣಾ ಸಚಿವ ಅನಿತಾ ಆನಂದ್ ಖಂಡಿಸಿದ್ದಾರೆ. ದೇಶದಲ್ಲಿ ವಿಪರೀತ ಕೊರೆಯುವ ಚಳಿ ಇದ್ದರೂ, ಅದನ್ನು ಲೆಕ್ಕಿಸದೆ ನೂರಾರು ಪ್ರತಿಭಟನಾಕಾರರು ಸಂಸತ್ ಆವರಣಕ್ಕೆ ನುಗ್ಗಿದ್ದರಿಂದ ಸಂಭಾವ್ಯ ಹಿಂಸಾಚಾರದ ಬಗ್ಗೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಸುಮಾರು 10,000 ಪ್ರತಿಭಟನಾಕಾರರು ಇಲ್ಲಿ ಸೇರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗುವ ಭೀತಿ ಇದೆ ಎಂದು ಟ್ರುಡೋ ಶುಕ್ರವಾರ ಮಾಧ್ಯಮಗಳಿಗೆ ಹೇಳಿದ್ದರು. ಕೆಲವು ಬೆರಳೆಣಿಕೆಯಷ್ಟು ಕಿಡಿಗೇಡಿಗಳು ಈ ಪ್ರತಿಭಟನೆಯ ಗುಂಪನ್ನು ನಡೆಸುತ್ತಿದ್ದಾರೆ. ಇವು ಕೆನಡಾ ಜನರ ಅಭಿಪ್ರಾಯಗಳನ್ನು ಪ್ರತಿನಿಧಿಸುತ್ತಿಲ್ಲ ಎಂದು ಟ್ರುಡೋ ಹೇಳಿದ್ದಾರೆ. ರಿಡೋ ಕಾಟೇಜ್‌ನಲ್ಲಿನ ತಮ್ಮ ಮನೆಯಿಂದ ಟ್ರುಡೋ ಮತ್ತು ಅವರ ಕುಟುಂಬ, ಪ್ರತಿಭಟನಾ ಕೇಂದ್ರದಿಂದ ದೂರದ ಸ್ಥಳಕ್ಕೆ ತೆರಳಿ, ರಹಸ್ಯವಾಗಿ ನೆಲೆಸಿದೆ. ಆದರೆ ಅವರು ರಾಷ್ಟ್ರ ರಾಜಧಾನಿ ಪ್ರದೇಶದ ಒಳಗೇ ಇದ್ದಾರೆ ಎಂದು ಹೇಳಲಾಗಿದೆ. ತಮ್ಮ ಒಂದು ಮಗುವಿನಲ್ಲಿ ಕೋವಿಡ್ 19 ಪಾಸಿಟಿವ್ ಪತ್ತೆಯಾದ ಹಿನ್ನೆಲೆಯಲ್ಲಿ ಟ್ರುಡೋ ಅವರು ಐಸೋಲೇಷನ್‌ನಲ್ಲಿ ಇದ್ದಾರೆ. ಪ್ರತಿಭಟನಾ ನಿರತ ಟ್ರಕ್ ಚಾಲಕರನ್ನು ದೇಶದ ಅನೇಕ ಭಾಗಗಳ ಜನರು ಸೇರಿಕೊಂಡಿದ್ದಾರೆ. ಪಾರ್ಲಿಮೆಂಟ್ ಹಿಲ್‌ನಲ್ಲಿ ಸಾಲುಗಟ್ಟಿ ಟ್ರಕ್‌ಗಳನ್ನು ಸಾಗಿಸಿದ ಚಾಲಕರು, ಎಡೆಬಿಡದೆ ಹಾರ್ನ್‌ಗಳನ್ನು ಮಾಡುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದರು. ಸಂಸತ್ ಕಟ್ಟಡದ ಸುತ್ತಲೂ, ಸಾರ್ವಜನಿಕ ಆರೋಗ್ಯ ನಿರ್ಬಂಧಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಬ್ಯಾನರ್‌ಗಳನ್ನು ಅಳವಡಿಸಿದರು. 'ಪ್ರತಿಭಟನಾನಿರತರು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಯೋಧರ ಸಮಾಧಿ ಮೇಲೆ ಹತ್ತಿ ನರ್ತಿಸುತ್ತಿರುವುದು ಕಂಡು ಬಹಳ ನೋವಾಗಿದೆ. ಕೆನಡಾದ ತಲೆಮಾರುಗಳು ಅಭಿವ್ಯಕ್ತಿ ಸ್ವಾತಂತ್ರ್ಯ ಸೇರಿದಂತೆ ನಮ್ಮ ಹಕ್ಕುಗಳಿಗಾಗಿ ಹೋರಾಡಿ ಹುತಾತ್ಮರಾಗಿವೆ. ಆದರೆ ಇದಕ್ಕಾಗಿ ಅಲ್ಲ. ಇದರಲ್ಲಿ ಭಾಗಿಯಾದವರು ನಾಚಿಕೆಯಿಂದ ತಲೆತಗ್ಗಿಸಬೇಕು' ಎಂದು ಜನರಲ್ ವೇಯ್ನ್ ಐರ್ ಕಿಡಿಕಾರಿದ್ದಾರೆ. ಡೊನಾಲ್ಡ್ ಟ್ರಂಪ್ ಶ್ಲಾಘನೆಜಸ್ಟಿನ್ ಟ್ರುಡೋ ಸರ್ಕಾರದ ವಿರುದ್ಧ ಟ್ರಕ್ಕರ್‌ಗಳ ಪ್ರತಿಭಟನೆಯನ್ನು ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ ಟ್ರಂಪ್ ಶ್ಲಾಘಿಸಿದ್ದಾರೆ. ಕಾನೂನು ವಿರೋಧಿ ಲಸಿಕೆ ಕಡ್ಡಾಯದ ವಿರುದ್ಧ ಅವರು ಧೈರ್ಯದಿಂದ ಪ್ರತಿರೋಧ ತೋರಿಸಿದ್ದಾರೆ. ಅವರು ತಮ್ಮದೇ ನಾಯಕರ ಬದಲು ಅಮೆರಿಕದ ಸ್ವಾತಂತ್ರ್ಯವನ್ನು ಸಮರ್ಥಿಸಲು ಹೋರಾಡುತ್ತಿದ್ದಾರೆ. ಅವರಿಗೆ ತಮ್ಮ ಬೆಂಬಲ ಇದೆ ಎಂದು ಟ್ರಂಪ್ ಹೇಳಿದ್ದಾರೆ. ಪ್ರತಿಭಟನೆ ಏಕೆ?ದೇಶವನ್ನು ಪ್ರವೇಶಿಸುವ ಟ್ರಕ್ಕರ್‌ಗಳು ಜನವರಿ 15ರಿಂದ ಸಂಪೂರ್ಣವಾಗಿ ಲಸಿಕೆಗಳನ್ನು ಪಡೆದುಕೊಳ್ಳುವುದು ಕಡ್ಡಾಯ ಎಂದು ಕೆನಡಾ ನಿಯಮ ಜಾರಿಗೊಳಿಸಿತ್ತು. ದೇಶದ ಒಳಗೆ ಪ್ರವೇಶಿರುವ ಟ್ರಕ್ಕರ್‌ಗಳಿಗೆ ಅಮೆರಿಕ ಲಸಿಕೆ ಕಡ್ಡಾಯಗೊಳಿಸಿದ ಕೆನಡಾ ಕೂಡ ನಿಯಮ ರೂಪಿಸಿತ್ತು. ಆದರೆ ಕೆನಡಿಯನ್ ಟ್ರಕ್ಕಿಂಗ್ ಅಲಯನ್ಸ್ ಅಂದಾಜಿನ ಪ್ರಕಾರ, ಕೆನಡಾದ ಶೇ 15ರಷ್ಟು, ಅಂದರೆ ಸುಮಾರು 16 ಸಾವಿರ ಮಂದಿ ಸಂಪೂರ್ಣ ಲಸಿಕೆಯನ್ನು ಪಡೆದುಕೊಂಡಿಲ್ಲ. ಲಸಿಕೆ ಕಡ್ಡಾಯ ಮಾಡಿರುವುದು ಪೂರೈಕೆ ಸರಪಣಿಗೆ ಭಾರಿ ಹೊಡೆತ ನೀಡಿದೆ ಎಂದು ಟ್ರಕ್ಕರ್‌ಗಳು ಆರೋಪಿಸಿದ್ದಾರೆ. ಜಸ್ಟಿನ್ ಟ್ರುಡೋ ಅವರು ಪ್ರತಿಭಟನೆಗೆ ಹೆದರಿ ಪಲಾಯನ ಮಾಡಿರುವುದು ಭಾರತದಲ್ಲಿಯೂ ಚರ್ಚೆಗೆ ಒಳಗಾಗಿದೆ. ಭಾರತದಲ್ಲಿ ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿದ್ದ ರೈತರ ಪ್ರತಿಭಟನೆಗೆ ಟ್ರುಡೋ ಬೆಂಬಲ ವ್ಯಕ್ತಪಡಿಸಿದ್ದರು. ಈ ಪ್ರತಿಭಟನೆಯನ್ನು ಸರ್ಕಾರ ಸಮರ್ಥವಾಗಿ ನಿಭಾಯಿಸಬೇಕು ಎಂದು ಸಲಹೆ ನೀಡುವ ಮೂಲಕ ಕೇಂದ್ರ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದರು. ಈಗ ಟ್ರುಡೋ ಒಂದು ಸಣ್ಣ ಪ್ರತಿಭಟನೆಯನ್ನು ಎದುರಿಸಲು ಸಾಧ್ಯವಾಗದೆ ಹೆದರಿ ಪರಾರಿಯಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಟೀಕಿಸಿದ್ದಾರೆ.
from India & World News in Kannada | VK Polls https://ift.tt/gbqKl5o68