ಚಂಡಿಗಢ (ಪಂಜಾಬ್): ವಿಧಾನಸಭೆ ಚುನಾವಣೆ ಪ್ರಚಾರ ಭರಾಟೆ ನಡುವೆಯೇ ಪಂಜಾಬ್‌ನ ಅಮೃತಸರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸಿದ ಸಮಾವೇಶಕ್ಕೆ ಪಕ್ಷದ ಐವರು ಸಂಸದರು ಗೈರಾಗುವ ಮೂಲಕ ಪಕ್ಷದಲ್ಲಿನ ಬಂಡಾಯ ಜಗಜ್ಜಾಹೀರಾಗಿದೆ. ಹಿರಿಯ ಮನಿಷ್ ತಿವಾರಿ, ರವನೀತ್ ಸಿಂಗ್ ಬಿಟ್ಟು, ಜಸ್ವೀರ್ ಸಿಂಗ್ ಗಿಲ್, ಮುಹಮ್ಮದ್ ಸಾದಿಕ್ ಮತ್ತು ಕ್ಯಾ. ಅಮರಿಂದರ್ ಸಿಂಗ್ ಅವರ ಪತ್ನಿ ಪ್ರಣೀತ್ ಕೌರ್ ರಾಹುಲ್ ಕಾರ್ಯಕ್ರಮದಲ್ಲಿ ಭಾಗವಹಿಸುವುದಿರಲಿ, ಅವರನ್ನು ಭೇಟಿ ಮಾಡುವ ಸೌಜನ್ಯವನ್ನೂ ತೋರಿಸಲಿಲ್ಲ. ಮನಿಷ್ ತಿವಾರಿ ಅವರು ಸೋನಿಯಾ ಗಾಂಧಿ ವಿರುದ್ಧ ಅಪಸ್ವರ ಎತ್ತಿದ ಜಿ23 ಗುಂಪಿನ ಪ್ರಮುಖ ಸದಸ್ಯ. ಪೂರ್ಣಾವಧಿ ನಾಯಕತ್ವಕ್ಕಾಗಿ ಮೂರು ವರ್ಷಗಳ ಹಿಂದೆಯೇ ಮನಿಷ್ ಆಗ್ರಹ ಮಂಡಿಸಿದ್ದರು. ಇವರ ನಿಲುವನ್ನು ಪಂಜಾಬಿನ ಈ ಐವರು ಸಂಸದರೂ ಬೆಂಬಲಿಸಿದ್ದರು ಎನ್ನುವುದು ವಿಶೇಷ. ಜೊತೆಗೆ, ಚುನಾವಣೆ ಘೋಷಣೆಯಾದ ಬಳಿಕ ಇದು ರಾಜ್ಯಕ್ಕೆ ರಾಹುಲ್ ಗಾಂಧಿ ಅವರ ಮೊದಲ ಭೇಟಿಯಾಗಿತ್ತು. ಕಾಂಗ್ರೆಸ್‌ನಿಂದ ನಿರ್ಗಮಿಸಿದ ಬಳಿಕ ಕ್ಯಾಪ್ಟನ್ ಅಮರಿಂದರ್ ಸಿಂಗ್, ಪಂಜಾಬ್ ಲೋಕ ಕಾಂಗ್ರೆಸ್ ಪಕ್ಷ ಕಟ್ಟಿದ್ದು, ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದಾರೆ. ಇವರ ಜತೆಗೆ ಈ ಐವರೂ ಸಂಸದರು ನಿಕಟ ಸಂಪರ್ಕದಲ್ಲಿದ್ದು, ಕಾಂಗ್ರೆಸ್ ತೊರೆಯುವ ಸನ್ನಹದಲ್ಲಿದ್ದಾರೆ. ವಿಧಾನಸಭೆ ಚುನಾವಣೆ ಫಲಿತಾಂಶ ನೋಡಿಕೊಂಡು ಈ ಸಂಸದರು ಮುಂದಿನ ದಾರಿ ನಿರ್ಧರಿಸಲಿದ್ದಾರೆ ಎಂದು ತಿಳಿದು ಬಂದಿದೆ. ಆಹ್ವಾನವೇ ಇರಲಿಲ್ಲ: ರಾಹುಲ್ ಗಾಂಧಿ ಅಮೃತಸರಕ್ಕೆ ಬರುವ ಕಾರ್ಯಕ್ರಮ ವಾರ ಮೊದಲೇ ನಿಗದಿಯಾಗಿತ್ತು. ಪಕ್ಷದ 117 ಅಭ್ಯರ್ಥಿಗಳ ಜತೆಗೂಡಿ ಸ್ವರ್ಣ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ ಎನ್ನುವುದೂ ಖಾತ್ರಿಯಾಗಿತ್ತು. ಇವರ ಜತೆಗೆ ಪಕ್ಷದ ಪ್ರಮುಖರೆಲ್ಲರೂ ರಾಹುಲ್ ಸಮಾವೇಶದಲ್ಲಿ ಪಾಲ್ಗೊಳ್ಳುವ ನಿರ್ಧಾರವಾಗಿತ್ತು. 'ನಮಗೆ ರಾಹುಲ್ ಗಾಂಧಿ ಭೇಟಿಯ ವಿಷಯವೇ ಗೊತ್ತಿಲ್ಲ. ಆಹ್ವಾನಿಸಿದ್ದರೆ ಖಂಡಿತ ಹೋಗುತ್ತಿದ್ದೆವು' ಎಂದು ಸಂಸದರು ಉತ್ತರ ನೀಡಿದ್ದಾರೆ. 'ಕಾರ್ಯಕ್ರಮವು ಪಕ್ಷದ 117 ಅಭ್ಯರ್ಥಿಗಳಿಗಾಗಿ ಆಯೋಜನೆಗೊಂಡಿದೆ ಎನ್ನುವ ಮಾಹಿತಿ ಇತ್ತು. ನಮ್ಮನ್ನು ಮುಖ್ಯಮಂತ್ರಿಯಾಗಲಿ, ಪಿಸಿಸಿ ಅಧ್ಯಕ್ಷರಾಗಲಿ ಆಹ್ವಾನಿಸಿರಲಿಲ್ಲ. ಪಕ್ಷದ ಉಸ್ತುವಾರಿ ವಹಿಸಿರುವ ಪ್ರಧಾನ ಕಾರ್ಯದರ್ಶಿ ಕೂಡ ಆ ಬಗ್ಗೆ ಚಕಾರ ಎತ್ತಿರಲಿಲ್ಲ. ಆಹ್ವಾನಿಸಿದ್ದರೆ ಖಂಡಿತ ಹೋಗುತ್ತಿದ್ದೆವು' ಎಂದು ಭಿನ್ನ ಬಣದ ಸಂಸದ ಜಸ್‌ಬಿರ್ ಸಿಂಗ್ ಗಿಲ್ ಹೇಳಿದ್ದಾರೆ. ಕ್ಯಾಪ್ಟನ್ ನಿರ್ಗಮನದ ನಂತರ ಪಂಜಾಬ್ ಕಾಂಗ್ರೆಸ್ ಮುರಿದ ಮನೆಯಾಗಿದೆ. ಇರುವ ನಾಯಕರ ನಡುವೆಯೂ ಹೊಂದಾಣಿಕೆ ಇಲ್ಲ. ಇದೇ ಕಾರಣ, '117 ಸ್ಥಾನಗಳ ಪೈಕಿ ಕಾಂಗ್ರೆಸ್ ಈ ಬಾರಿ ಎರಡಂಕಿ ತಲುಪಿದರೆ, ಅದೇ ದೊಡ್ಡ ಸಾಧನೆ' ಎಂದು ಕೆಲವರು ಅಪಹಾಸ್ಯ ಮಾಡುತ್ತಿದ್ದಾರೆ. ಭಿನ್ನ ಬಣದಲ್ಲಿ ಅರ್ಧದಷ್ಟು ಸಂಸದರು ಪಂಜಾಬ್‌ನಲ್ಲಿ ಕಾಂಗ್ರೆಸ್ ಎಂಟು ಸಂಸದರನ್ನು ಹೊಂದಿದೆ. ಒಟ್ಟು 13 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಮತ್ತು ಶಿರೋಮಣಿ ಅಕಾಲಿದಳ ತಲಾ ಎರಡು, ಆಪ್ ಒಂದು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೆ ಕಾಂಗ್ರೆಸ್ ಎಂಟು ಸ್ಥಾನಗಳನ್ನು ಗೆದ್ದುಕೊಂಡಿತ್ತು. ಇರುವ ಈ ಎಂಟು ಸಂಸದರಲ್ಲಿ ಸದ್ಯ ಅರ್ಧಕ್ಕಿಂತ ಹೆಚ್ಚು ಮಂದಿ ಭಿನ್ನ ಬಣ ಸೇರಿದ್ದಾರೆ. ಗುರ್ಜಿತ್ ಸಿಂಗ್ ಅಹುಜಾ, ಅಮರ್ ಸಿಂಗ್ ಮತ್ತು ಸಂತೋಷ್ ಸಿಂಗ್ ಚೌಧರಿ ಮಾತ್ರ ಕಾಂಗ್ರೆಸ್‌ಗೆ ನಿಷ್ಠರಾಗಿದ್ದಾರೆ. ಆದರೆ ಗಾಂಧಿ ಕುಟುಂಬದೆಡೆಗಿನ ಅವರ ನಿಷ್ಠೆ ಪ್ರಶ್ನಾರ್ಹವಾಗಿಯೇ ಉಳಿದಿದೆ. ಹೀಗಾಗಿ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪರವಾಗಿ ಪ್ರಚಾರ ನಡೆಸಲು ರಾಷ್ಟ್ರಮಟ್ಟದ ನಾಯಕರೇ ಇಲ್ಲದಂತಾಗಿದೆ.
from India & World News in Kannada | VK Polls https://ift.tt/34dO20u