ಶ್ರೀರಂಗಪಟ್ಟಣ (): ಶ್ರೀರಂಗಪಟ್ಟಣದ ಐತಿಹಾಸಿಕ ಜಾಮಿಯಾ ಸಂಬಂಧ ಹೊರಗಿನವರು ಪ್ರಚೋದನಕಾರಿಯಾಗಿ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಇದು ಸರಿಯಲ್ಲ. ಯಾವುದೇ ಕಾರಣಕ್ಕೂ ಹೊಸ ವಿವಾದ ಸೃಷ್ಟಿ ಮಾಡಬಾರದು ಎಂದು ಟಿಪ್ಪು ವಕ್ಫ್ ಎಸ್ಟೇಟ್ ಸಮಿತಿ ಅಧ್ಯಕ್ಷ ಹಾಗೂ ಶಾಸಕ ತನ್ವೀರ್ ಸೇಠ್ ಹೇಳಿದರು. ಪಟ್ಟಣದ ಜಾಮೀಯ ಮಸೀದಿಯಲ್ಲಿ ಗುರುವಾರ ನಡೆದ ಟಿಪ್ಪು ವಕ್ಫ್ ಎಸ್ಟೇಟ್ ಸಮಿತಿ ಸಭೆ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. 'ಇದುವರೆಗೂ ಸ್ಥಳೀಯರು ಮಸೀದಿ ಕುರಿತು ಯಾವುದೇ ಹೇಳಿಕೆ ನೀಡಿಲ್ಲ. ಎಲ್ಲರೂ ಸೌಹಾರ್ದಯುತವಾಗಿ ಕೋಮು ದ್ವೇಷ ಇಲ್ಲದೇ ಜೀವನ ನಡೆಸುತ್ತಿದ್ದಾರೆ. ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಹೊರಗಿನಿಂದ ಇಲ್ಲಿಗೆ ಬರುವವರು ಪ್ರಚೋದನಕಾರಿ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಜಾಮೀಯ ಮಸೀದಿ ಪ್ರಸ್ತುತ ಭಾರತೀಯ ಪುರಾತತ್ವ ಹಾಗೂ ಸಂಗ್ರಹಾಲಯಗಳ ಇಲಾಖೆ (ಎಎಸ್‌ಐ) ಸುಪರ್ದಿಯಲ್ಲಿದೆ. ಪೊಲೀಸರು ಬಂದೋಬಸ್ತ್ ನೀಡಿದ್ದಾರೆ. ನಾನು ಟಿಪ್ಪು ವಕ್ಫ್ ಎಸ್ಟೇಟ್ ಅಧ್ಯಕ್ಷನಾಗಿ ಇಲ್ಲಿಗೆ ಬಂದಿದ್ದೇನೆ. ಪೊಲೀಸರು, ಎಎಸ್‌ಐ ಅಧಿಕಾರಿಗಳು, ಕಂದಾಯ ಅಧಿಕಾರಿಗಳ ಜತೆ ಚರ್ಚಿಸಿದ್ದೇನೆ. 1994ರಲ್ಲಿ ಕೇಂದ್ರ ಸರಕಾರ ಮಹತ್ವದ ಆದೇಶ ನೀಡಿದೆ. ಮಸೀದಿ, ಮಂದಿರಗಳಲ್ಲಿ ಯಥಾಸ್ಥಿತಿ ಕಾಪಾಡಿಕೊಂಡು ಹೋಗಬೇಕು ಎಂದು ಕಾನೂನು ಜಾರಿ ಮಾಡಿದೆ. ಯಾವುದೇ ಕಾರಣಕ್ಕೂ ಹೊಸ ವಿವಾದಗಳನ್ನು ಹುಟ್ಟು ಹಾಕಬಾರದು. ಸರಕಾರದ ಆದೇಶವನ್ನು ಪಾಲಿಸಬೇಕು ಎಂದು ಹೇಳಿದರು. ಶ್ರೀರಂಗಪಟ್ಟಣ ಮಸೀದಿ ವಿವಾದ ಸೃಷ್ಟಿಸದಿರಿ ಎಂದ ತನ್ವೀರ್ ಸೇಠ್ ಎಎಸ್‌ಐ ಮಸೀದಿ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕು. ಸುತ್ತಲೂ ಕಾಂಪೌಂಡ್ ನಿರ್ಮಿಸಬೇಕು. ಟಿಪ್ಪು ಸುಲ್ತಾನ್ ಉತ್ತಮ ಕೆಲಸ ಮಾಡಿದ್ದಾರೆ. ಶಿಕ್ಷಣಕ್ಕೆ ಒತ್ತು ನೀಡಿದ್ದಾರೆ. ಸಾರಾಯಿ ನಿಷೇಧಿಸಿದ್ದಾರೆ. ಅವುಗಳನ್ನು ಸ್ಮರಿಸಬೇಕು. ಟಿಪ್ಪು ಸುಲ್ತಾನ್ ಹಾಗೂ ಆತನ ತಂದೆ ಹೈದರಾಲಿ ಶ್ರೀರಂಗಪಟ್ಟಣವನ್ನು ಆಳಿದ್ದಾರೆ. ಇತಿಹಾಸ ತಿರುಚುವುದು ಸರಿಯಲ್ಲ. ಟಿಪ್ಪು ಸುಲ್ತಾನ್ ಶೃಂಗೇರಿ ಮಠಕ್ಕೂ ಕೊಡುಗೆ ನೀಡಿದ್ದಾರೆ. ಒಳ್ಳೆಯ ವಿಷಯಗಳನ್ನು ಸ್ಮರಿಸಬೇಕು ಎಂದು ತನ್ವೀರ್ ಸೇಠ್ ಹೇಳಿದರು. ಟಿಪ್ಪು ವಕ್ಫ್ ಎಸ್ಟೇಟ್ ಸಮಿತಿ ಸದಸ್ಯರು ಹಾಗೂ ಸ್ಥಳೀಯ ಮುಸ್ಲಿಂ ಮುಖಂಡರು ಈ ವೇಳೆ ಹಾಜರಿದ್ದರು. ಮೂರ್ನಾಲ್ಕು ದಿನಗಳ ಹಿಂದೆ ಶ್ರೀರಂಗಪಟ್ಟಣಕ್ಕೆ ಆಗಮಿಸಿದ್ದ ಚಿಕ್ಕಮಗಳೂರು ಕಾಳಿ ಮಠದ ಋುಷಿ ಕುಮಾರ ಸ್ವಾಮೀಜಿ, ಜಾಮೀಯ ಮಸೀದಿಯನ್ನು ಬಾಬ್ರಿ ಮಸೀದಿ ರೀತಿ ಧ್ವಂಸ ಮಾಡಬೇಕು. ಇಲ್ಲಿ ಹನುಮನ ಮಂದಿರ ನಿರ್ಮಾಣವಾಗಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇನ್ನು ಕೋಮು ಸೌರ್ಹಾದತೆಗೆ ಧಕ್ಕೆ ತರುವ ಪ್ರಚೋದನಕಾರಿ ಹೇಳಿಕೆ ನೀಡಿ ಮಂಗಳವಾರ ಬಂಧಿತನಾಗಿ ನ್ಯಾಯಾಂಗ ವಶದಲ್ಲಿದ್ದ ಚಿಕ್ಕಮಗಳೂರು ಕಾಳಿ ಮಠದ ಶ್ರೀ ಋಷಿ ಕುಮಾರ ಸ್ವಾಮಿಗೆ ಬುಧವಾರ ಷರತ್ತು ಬದ್ಧ ಜಾಮೀನು ಸಿಕ್ಕಿದ್ದು, ಬಿಡುಗಡೆ ಮಾಡಲಾಗಿದೆ.
from India & World News in Kannada | VK Polls https://ift.tt/3GQffEQ