ಕೋಲ್ಕೊತಾ: ತನ್ನ ಒಪ್ಪಿಗೆ ಇಲ್ಲದೆ ಸ್ಮಾರ್ಟ್ ಫೋನ್ ಖರೀದಿಸಿದ ಪತ್ನಿಯನ್ನು ಕೊಲೆ ಮಾಡಲು ಸುಪಾರಿ ಕೊಟ್ಟ ಮಹಾಶಯನೊಬ್ಬ ಪೊಲೀಸರಿಗೆ ಸಿಕ್ಕಿಬಿದ್ದು ಜೈಲು ಸೇರಿದ ಘಟನೆ ಕೋಲ್ಕೊತಾದಲ್ಲಿ ನಡೆದಿದೆ. ಒಡವೆ ವಸ್ತುಗಳಂತೆ ಸ್ಮಾರ್ಟ್ ಫೋನ್ ಕೂಡ ಈಗ ಖರೀದಿಯ ಆಕರ್ಷಣೆ. ಅಂತಹದ್ದೊಂದು ಆಕರ್ಷಣೆಗೆ ಒಳಗಾದ ಮಹಿಳೆಯೊಬ್ಬರು, ಗಂಡನ ಮುಂದೆ ಪ್ರೀತಿಯಿಂದ ಬೇಡಿಕೆ ಇರಿಸಿದ್ದರು. ಅದಕ್ಕೆ ಮುನಿಸಿಕೊಂಡ ಗಂಡ, ‘ಸಾಧ್ಯವೇ ಇಲ್ಲ. ಮನೆಯಲ್ಲಿರುವ ನಿನಗೇಕೆ ಸ್ಮಾರ್ಟ್ ಫೋನ್, ಸುಮ್ಕಿರು’ ಎಂದು ಗದರಿಸಿದ್ದಾನೆ. ಆದರೆ ತನಗೊಂದು ಸ್ಮಾರ್ಟ್ ಫೋನ್ ಬೇಕೇಬೇಕೆಂದು ನಿರ್ಧಾರ ಮಾಡಿದ ಪತ್ನಿ, ತಾನು ಮನೆಯಲ್ಲಿ ಮಕ್ಕಳಿಗೆ ಟ್ಯೂಷನ್ ಮಾಡಿ ಕೂಡಿಟ್ಟಿದ್ದ ಹಣದಲ್ಲಿ ಮೊಬೈಲ್ ಖರೀದಿಸಿದರು. ಸಂಜೆ ಮನೆಗೆ ಬಂದ ಪತಿಗೆ ಅದನ್ನು ತೋರಿಸಿ, ತನ್ನದೇ ಹಣದಿಂದ ಖರೀದಿಸಿದ್ದಾಗಿ ಸಮಜಾಯಿಷಿಯನ್ನೂ ನೀಡಿದಳು. ತಾನು ಬೇಡವೆಂದರೂ ಹೆಂಡತಿ ಸ್ಮಾರ್ಟ್‌ಫೋನ್ ಖರೀದಿಸಿದ್ದರಿಂದ ತನ್ನ 'ಅಹಂ'ಗೆ ಏಟು ಬಿದ್ದಿದೆ. ಇದರಿಂದ ಕುಪಿತಗೊಂಡ ಗಂಡ ಕೋಪದಿಂದ ಮನೆಯಿಂದ ಹೊರ ನಡೆದಿದ್ದಾನೆ. ಇದರಿಂದ ದಿಗಿಲುಗೊಂಡ ಪತ್ನಿ ಗಂಡನನ್ನು ಸಮಾಧಾನ ಪಡಿಸುವುದು ಹೇಗೆ ಎನ್ನುವ ಗೊಂದಲದಲ್ಲೇ ಮುಳುಗಿದ್ದಳು. ಅಂತೂ ರಾತ್ರಿ ಮನೆಗೆ ಮರಳಿದ ಗಂಡನೊಂದಿಗೆ ರಾಜಿ ಏರ್ಪಟ್ಟು ಊಟ ಮುಗಿಸಿ ಮಲಗುವ ಕೊಠಡಿಗೆ ಹೊರಟರು. ಆ ವೇಳೆ, ಪತಿ ಮುಖ್ಯ ದ್ವಾರ ನೆನಪಿಸಿಕೊಂಡು ಬಾಗಿಲು ಮುಚ್ಚಿ ಬರಲು ಹೋದ. ಎಷ್ಟು ಹೊತ್ತಾದರೂ ಪತಿ ಮರಳಿ ಬಾರದೇ ಹೋದಾಗ, ಏನಾಯಿತೆಂದು ನೋಡಲು ಪತ್ನಿ ಎದ್ದು ಬಂದಾಗ ಆಕೆಯ ಮೇಲೆ ದುಷ್ಕರ್ಮಿಗಳು ಕತ್ತಿಯಿಂದ ದಾಳಿ ನಡೆಸಿದ್ದಾರೆ. ಇಬ್ಬರು ಆಗಂತುಕರು ಹಾಕಿದ ಕತ್ತಿ ಏಟು ಆಕೆಯ ಕತ್ತಿನಲ್ಲಿ ಆಳವಾದ ಗಾಯ ಮಾಡಿದೆ. ಪೆಟ್ಟಿನಿಂದ ಚೀರಿಕೊಂಡು ಹೊರ ಓಡಿ ಬಂದ ಮಹಿಳೆಯನ್ನು ನೆರೆಯವರು ರಕ್ಷಿಸಿ, ಒಬ್ಬ ದಾಳಿಕೋರನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು. ಬಂಧಿತ ದುಷ್ಕರ್ಮಿ ನೀಡಿದ ಮಾಹಿತಿ ಮೇರೆಗೆ ಪತಿ ಕೂಡ ಬಂಧನಕ್ಕೊಳಗಾಗಿದ್ದಾನೆ. ಪತಿಯನ್ನು ರಾಜೇಶ್ ಝಾ ಎಂದು ಗುರುತಿಸಲಾಗಿದೆ. ಪತಿಯಿಂದ ಕೊಲೆಗೆ ಸುಪಾರಿ ಪಡೆದ ಮತ್ತೊಬ್ಬನಿಗಾಗಿ ಶೋಧ ಕಾರ್ಯ ನಡೆದಿದೆ.
from India & World News in Kannada | VK Polls https://ift.tt/3AwpOuI