: ಬೆಂಗಳೂರು ವಿಶ್ವ ವಿದ್ಯಾಲಯದ ಆವರಣದಲ್ಲಿ ಎಬಿವಿಪಿ ಸೇರಿದಂತೆ ಎರಡು ಸಂಘಟನೆಗಳ ನಡುವೆ ಪ್ರತಿಭಟನೆ ವಿಚಾರವಾಗಿ ಮಾತಿನ ಚಕಮಕಿ ನಡೆಯಿತು. ತೀವ್ರಗೊಳ್ಳುವುದನ್ನು ನಿಯಂತ್ರಿಸಲು ಪೊಲೀಸರು ಲಘು ನಡೆಸಿದ್ದು, ಘಟನೆಯಲ್ಲಿ ಎಬಿವಿಪಿ ಸಂಘಟನೆಯ ಓರ್ವ ವಿದ್ಯಾರ್ಥಿನಿಯ ತಲೆಗೆ ತೀವ್ರ ಪೆಟ್ಟಾಗಿದೆ. ಹಲವು ವಿದ್ಯಾರ್ಥಿಗಳು ಮತ್ತು ಪೊಲೀಸರಿಗೂ ಸಣ್ಣ ಪುಟ್ಟ ಗಾಯಗಳಾಗಿವೆ. ರಾಯಚೂರು ಜಿಲ್ಲಾ ನ್ಯಾಯಾಧೀಶರು ಡಾ. ಬಿ. ಆರ್. ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ, ಬೆಂಗಳೂರು ವಿಶ್ವವಿದ್ಯಾಲಯದ ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿ ಒಕ್ಕೂಟವು ವಿಶ್ವ ವಿದ್ಯಾಲಯದ ಆಡಳಿತ ಕಚೇರಿಯ ಮೆಟ್ಟಿಲುಗಳ ಮೇಲೆ ಪ್ರತಿಭಟನೆ ಹಮ್ಮಿಕೊಂಡಿತ್ತು. ಇದೇ ಸ್ಥಳಕ್ಕೆ ಧಾವಿಸಿದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನೇತೃತ್ವದ ಗುಂಪೊಂದು ವಿಶ್ವ ವಿದ್ಯಾಲಯಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಬಿಂಬಿಸಿ ಪ್ರತಿಭಟನೆಗೆ ಮುಂದಾಯಿತು. 'ಪದವಿ ಪರೀಕ್ಷೆ, ಮೌಲ್ಯಮಾಪನ ಮತ್ತು ಫಲಿತಾಂಶ ನೀಡುವಲ್ಲಿ ವಿಶ್ವ ವಿದ್ಯಾಲಯ ವಿಳಂಬ ಮಾಡುತ್ತಿದೆ' ಎಂದು ಆರೋಪಿಸಿ ಕಚೇರಿಗೆ ಮುತ್ತಿಗೆ ಹಾಕಲು ಎಬಿವಿಪಿ ಕಾರ್ಯಕರ್ತರು ಮುಂದಾದರು. ಈಗಾಗಲೇ ಒಂದು ಸಂಘಟನೆಯವರು ಪ್ರತಿಭಟನೆ ನಡೆಸುತ್ತಿದ್ದು, ಮತ್ತೊಂದು ದಿವಸ ಪ್ರತಿಭಟನೆ ನಡೆಸುವಂತೆ ಪೊಲೀಸರು ಮನವರಿಕೆ ಮಾಡಿಕೊಟ್ಟರೂ ಎಬಿವಿಪಿ ಕಾರ್ಯಕರ್ತರು ಸುಮ್ಮನಾಗಲಿಲ್ಲ. ಎಬಿವಿಪಿ ಕಾರ್ಯಕರ್ತರ ಕ್ರಮವನ್ನು ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿ ಒಕ್ಕೂಟ ಖಂಡಿಸಿತು. ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ವಿದ್ಯಾರ್ಥಿಗಳು ಹಾಗೂ ಪೊಲೀಸರ ನಡುವೆ ತಳ್ಳಾಟ ನೂಕಾಟ ನಡೆಯಿತು. ಲಘು ಲಾಠಿ ಪ್ರಹಾರ ನಡೆಸಿ ವಿದ್ಯಾರ್ಥಿಗಳನ್ನು ಪೊಲೀಸರು ಚದುರಿಸಿದರು. ಈ ವೇಳೆ 20ಕ್ಕೂ ಹೆಚ್ಚು ಎಬಿವಿಪಿ ಕಾರ್ಯಕರ್ತರು ಮತ್ತು ಕೆಲ ಪೊಲೀಸರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಸುದ್ದಿ ತಿಳಿಯುತ್ತಿದ್ದಂತೆಯೇ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹಾಗೂ ಡಿಸಿಪಿ ಸಂಜೀವ್ ಪಾಟೀಲ್ ಸ್ಥಳಕ್ಕಾಗಮಿಸಿ ಪರಿಸ್ಥಿತಿ ಕೈ ಮೀರದಂತೆ ಕ್ರಮ ಕೈಗೊಂಡರು. ಯಾರೂ ಅನುಮತಿ ಪಡೆದಿರಲಿಲ್ಲ: 'ವಿಶ್ವ ವಿದ್ಯಾಲಯದ ಆವರಣದಲ್ಲಿ ಲಘು ಲಾಠಿ ಪ್ರಹಾರದಂತಹ ಘಟನೆಗಳು ನಡೆಯದಂತೆ ತಡೆಯಲು ಮತ್ತು ವಿಶ್ವ ವಿದ್ಯಾಲಯದ ಆಡಳಿತ ಕಚೇರಿಗೆ ಹೆಚ್ಚಿನ ಭದ್ರತೆ ನೀಡುವಂತೆ ಪೊಲೀಸರಿಗೆ ಮನವಿ ಸಲ್ಲಿಸಲಾಗುವುದು' ಎಂದು ಕುಲಪತಿ ಪ್ರೊ. ಕೆ. ಆರ್. ವೇಣುಗೋಪಾಲ್ 'ವಿಕ'ಗೆ ತಿಳಿಸಿದ್ದಾರೆ. 'ವಿಶ್ವವಿದ್ಯಾಲಯದ ಆಡಳಿತ ಕಚೇರಿ ಮುಂದೆ ಪ್ರತಿಭಟನೆಗೆ ಎಬಿವಿಪಿ ಮತ್ತು ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿ ಒಕ್ಕೂಟ ಸೇರಿದಂತೆ ಎರಡೂ ಸಂಘಟನೆಗಳು ಅನುಮತಿ ಪಡೆದಿರಲಿಲ್ಲ. ಆದರೆ, ಒಂದು ಸಂಘಟನೆ ಪ್ರತಿಭಟನೆ ನಡೆಸುತ್ತಿದ್ದ ವೇಳೆ, ಇನ್ನೊಂದು ಸಂಘಟನೆಯೂ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದಾಗ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಕರ್ತವ್ಯ ಪಾಲನೆ ಮಾಡಿದ್ದಾರೆ' ಎಂದು ಅವರು ಹೇಳಿದರು. ನಾವು ವಿದ್ಯಾರ್ಥಿನಿಗೆ ಹೊಡೆದಿಲ್ಲ 'ಪ್ರತಿಭಟನೆ ನಡೆಸಲು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ಅನುಮತಿ ಪಡೆದಿರಲಿಲ್ಲ. ಸಂಘರ್ಷ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದಾರೆ. ಆದರೆ, ರಕ್ತ ಸುರಿಯವಂತೆ ಮತ್ತು ಗಂಭೀರ ಗಾಯಗಳಾಗುವಂತೆ ಯಾರಿಗೂ ಹೊಡೆದಿಲ್ಲ. ಗಾಯಗೊಂಡ ವಿದ್ಯಾರ್ಥಿನಿಯು ರಸ್ತೆಯಲ್ಲಿ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡಿದ್ದಾರೆ' ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಲಾಠಿ ಪ್ರಹಾರಕ್ಕೆ ಎಬಿವಿಪಿ ಖಂಡನೆ ಶೈಕ್ಷಣಿಕ ಸಮಸ್ಯೆಗಳನ್ನು ಪರಿಹರಿಸುವಂತೆ ನಮ್ಮ ಕಾರ್ಯಕರ್ತರು ಬೆಂಗಳೂರು ವಿಶ್ವ ವಿದ್ಯಾಲಯದ ಆವರಣದಲ್ಲಿ ಪ್ರತಿಭಟನೆ ಮಾಡುತ್ತಿದ್ದಾಗ ಅಮಾನುಷವಾಗಿ ಲಾಠಿ ಚಾರ್ಜ್ ಮಾಡಲಾಗಿದೆ. ಇದು ಖಂಡನೀಯ. ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸರಕಾರವನ್ನು ಎಬಿವಿಪಿ ಒತ್ತಾಯಿಸಿದೆ. ರಾಜಕೀಯ ಸಂಘಟನೆಯ ದಾಂಧಲೆ ರಾಯಚೂರು ಜಿಲ್ಲಾ ನ್ಯಾಯಾಧೀಶರ ಧೋರಣೆಯನ್ನು ಖಂಡಿಸಿ ಕಳೆದ ಮೂರು ದಿನಗಳಿಂದ ವಿಶ್ವ ವಿದ್ಯಾಲಯದಲ್ಲಿ ಪ್ರತಿಭಟನೆ ನಡೆಸಲಾಗುತ್ತಿತ್ತು. ವಿಶ್ವ ವಿದ್ಯಾಲಯದ ಆವರಣದಲ್ಲಿ ಯಾವುದೇ ರಾಜಕೀಯ ಪ್ರೇರಿತ ವಿದ್ಯಾರ್ಥಿ ಸಂಘಟನೆಗಳ ಪ್ರತಿಭಟನೆಗೆ ಅವಕಾಶವಿಲ್ಲ. ಈ ಬಗ್ಗೆ ಪೊಲೀಸರು ಮನವರಿಕೆ ಮಾಡಿಕೊಟ್ಟರೂ, ಒಳಗೆ ನುಗ್ಗಿ ಎಬಿವಿಪಿ ಕಾರ್ಯಕರ್ತರು ದಾಂಧಲೆ ನಡೆಸಿದರು. ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದರು ಎಂದು ವಿವಿ ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿ ಒಕ್ಕೂಟ ಆರೋಪಿಸಿದೆ.
from India & World News in Kannada | VK Polls https://ift.tt/SekoDalHJ