ಬೆಂಗಳೂರು: ಉಡುಪಿಯ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಹಿಜಾಬ್ ಧರಿಸಿ ಬರುತ್ತಿದ್ದ ವಿದ್ಯಾರ್ಥಿನಿಯರನ್ನು ತರಗತಿಯಿಂದ ಹೊರಗಿಟ್ಟ ಪ್ರಕರಣದ ಬಗ್ಗೆ ವರದಿ ನೀಡುವಂತೆ ಅಲ್ಲಿನ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಸೂಚಿಸಲಾಗಿದೆ. ವರದಿ ಬಂದ ನಂತರ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ, ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದರು. ಈ ಬಗ್ಗೆ ಗುರುವಾರ ವಿಜಯ ಕರ್ನಾಟಕದೊಂದಿಗೆ ಮಾತನಾಡಿದ ಅವರು, ‘ಈ ಕಾಲೇಜಿನಲ್ಲಿ 1985ರಿಂದ ಸಮವಸ್ತ್ರ ಜಾರಿಯಲ್ಲಿದ್ದು, ಎಸ್‌ಡಿಎಂಸಿ ತೀರ್ಮಾನದಂತೆ ಈಗಲೂ ಮುಂದುವರಿಸಿಕೊಂಡು ಬರಲಾಗುತ್ತಿದೆ. ದಾಖಲಾತಿ ಸಂದರ್ಭದಲ್ಲಿ ಸಮವಸ್ತ್ರದ ಬಗ್ಗೆ ಎಲ್ಲಾ ವಿದ್ಯಾರ್ಥಿಗಳಿಗೂ ತಿಳಿಸಲಾಗಿತ್ತು. ಈ ಕಾಲೇಜಿಗೆ ನೂರಕ್ಕೂ ಹೆಚ್ಚು ಮುಸ್ಲಿಂ ವಿದ್ಯಾರ್ಥಿನಿಯರು ಸೇರ್ಪಡೆ ಯಾಗಿದ್ದಾರೆ. ಎಲ್ಲಾ ವಿದ್ಯಾರ್ಥಿನಿಯರು ಮತ್ತು ಪೋಷಕರು ಸಮವಸ್ತ್ರ ಪಾಲನೆ ಮಾಡುವುದಾಗಿ ತಿಳಿಸಿದ್ದಾರೆ. ಆದರೆ, 6 ವಿದ್ಯಾರ್ಥಿನಿಯರು ಮಾತ್ರ ಹಿಜಾಬ್ ಧರಿಸಿ ಬರುವುದಾಗಿ ಹಠ ಹಿಡಿದಿದ್ದಾರೆ. ಈ ಆರು ಮಂದಿ ವಿದ್ಯಾರ್ಥಿನಿಯರು ಸಹ 21 ದಿನಗಳ ಹಿಂದೆ ಹಿಜಾಬ್ ಧರಿಸಿ ಬರುತ್ತಿರಲಿಲ್ಲ. ದಾಖಲಾತಿ ವೇಳೆ ಸಮವಸ್ತ್ರ ಪಾಲನೆಯನ್ನು ಒಪ್ಪಿಕೊಂಡು, ಈಗ ಧಾರ್ಮಿಕ ಕಾರಣಗಳನ್ನು ನೀಡಿ ವಿರೋಧ ವ್ಯಕ್ತಪಡಿಸುವುದು ಅಶಿಸ್ತು ತಾನೆ?’ ಎಂದು ಪ್ರಶ್ನಿಸಿದರು. ‘ ಘಟನೆ ನಂತರ, ಕೊಪ್ಪಳ ಸೇರಿದಂತೆ ಇತರೆ ಕೆಲವು ಕಾಲೇಜು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬಂದ ಘಟನೆಗಳು ಸಹ ಜರುಗಿವೆ. ಹಿಜಾಬ್ ಧರಿಸಿ ಬರಲು ಅವಕಾಶ ನೀಡಿದರೆ, ಕೇಸರಿ ಶಾಲು ಧರಿಸಿ ಬರಲು ಸಹ ಅವಕಾಶ ನೀಡಬೇಕಾಗುತ್ತದೆ. ಮುಂದೆ ಯಾರಾದರೂ ಸ್ವಾತಂತ್ರ್ಯದ ಹೆಸರಿನಲ್ಲಿ ಬನಿಯನ್, ಚಡ್ಡಿ ತೊಟ್ಟು ಬಂದರೆ ಅದಕ್ಕೂ ಅವಕಾಶ ನೀಡಬೇಕಾಗುತ್ತದೆ. ಆದ್ದರಿಂದ ಯಾರೂ ಸಹ ತಮಗಿರುವ ಸ್ವಾತಂತ್ರ್ಯವನ್ನು ದುರ್ಬಳಕೆ ಮಾಡಿಕೊಳ್ಳಬಾರದು. ಕಾಲೇಜುಗಳಲ್ಲಿ ಜಾರಿಯಲ್ಲಿರುವ ನಿಯಮಗಳನ್ನು ಒಪ್ಪಿಕೊಂಡ ನಂತರ, ಅವುಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು’ ಎಂದು ಸಚಿವ ನಾಗೇಶ್ ತಿಳಿಸಿದರು.
from India & World News in Kannada | VK Polls https://ift.tt/3tM2urq