ಡೆಹ್ರಾಡೂನ್: ಹಿಮಾಲಯ ಸೆರಗಿನ ತಣ್ಣನೆಯ ರಾಜ್ಯ ಉತ್ತರಾಖಂಡದಲ್ಲಿ ಚುನಾವಣೆಯ ಕಾವು ಗಗನಕ್ಕೇರಿದೆ. ಪ್ರಮುಖ ಪಕ್ಷಗಳು ಹುರಿಯಾಳುಗಳ ಮೊದಲ ಪಟ್ಟಿ ಪ್ರಕಟಿಸಿದ ಬೆನ್ನ ಹಿಂದೆಯೇ ಸ್ಫೋಟಿಸಿದ ಅವಕಾಶ ವಂಚಿತರ ಆಕ್ರೋಶ ವರಿಷ್ಠರಿಗೆ ತಲೆನೋವು ತಂದಿದೆ. ಆಡಳಿತಾರೂಢ ಬಿಜೆಪಿಯಲ್ಲೂ ಅವಕಾಶ ಕಳೆದುಕೊಂಡು ಕಂಗೆಟ್ಟ ಶಾಸಕರ ದಂಡು ಎದುರಾಳಿ ಬಣ ಸೇರಿ ಹೋರಾಟಕ್ಕಿಳಿಯುವ ಸನ್ನಾಹದಲ್ಲಿದೆ. 70 ಸದಸ್ಯ ಬಲದ ಉತ್ತರಾಖಂಡ ವಿಧಾನಸಭೆಗೆ ಫೆಬ್ರವರಿ 14ರಂದು ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ. ಅಧಿಕಾರ ಉಳಿಸಿಕೊಳ್ಳುವ ಉಮೇದಿಯಲ್ಲಿರುವ ಬಿಜೆಪಿಯು 59 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಈ ಪೈಕಿ ಬರೋಬ್ಬರಿ 10 ಹಾಲಿ ಶಾಸಕರಿಗೆ ಕೊಕ್ ನೀಡಲಾಗಿದೆ. ಶಾಸಕರ ಸಾಧನೆ ಮತ್ತು ಜನ ಸಂಪರ್ಕವನ್ನು ಮಾನದಂಡ ಮಾಡಿಕೊಂಡು ಈ ಬಾರಿ ಟಿಕೆಟ್ ಹಂಚಿಕೆ ಮಾಡಲಾಗಿದೆ ಎಂದು ರಾಜ್ಯ ಚುನಾವಣಾ ಉಸ್ತುವಾರಿಯೂ ಆಗಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ. ಆದರೆ, ಸಚಿವರ ಈ ಸಮಜಾಯಿಷಿ ಒಪ್ಪದ ಅತೃಪ್ತ ಶಾಸಕರು, ''ಹೊರಗಿನಿಂದ ಬಂದ ಪ್ರಬಲರ ಲಾಬಿಗೆ ಮಣಿದು ನಮ್ಮನ್ನು ಕೈಬಿಡಲಾಗಿದೆ,'' ಎಂದು ದೂರಿದ್ದಾರೆ. ಅತೃಪ್ತರ ಹಾವಳಿ ಉತ್ತರಪ್ರದೇಶ, ಪಂಜಾಬ್ ಆದಿಯಾಗಿ ಪಂಚ ರಾಜ್ಯಗಳ ಎಲ್ಲಾ ಪಕ್ಷಗಳಲ್ಲೂ ಅತೃಪ್ತರ ಹಾವಳಿ ಮಿರಿಮೀರಿದೆ. ಕೆಲವು ಅವಕಾಶ ವಂಚಿತರು ಆಸರೆ ಅರಸಿ ಎದುರಾಳಿ ಬಣ ಸೇರಿದ್ದಾರೆ. ಇನ್ನೂ ಹಲವರು ಅವಕಾಶಕ್ಕಾಗಿ ಎಡತಾಕುತ್ತಿದ್ದಾರೆ. ಈ ನಡುವೆಯೇ ಟಿಕೆಟ್ ಕಳೆದುಕೊಂಡ ಉತ್ತರಾಖಂಡದ ಬಿಜೆಪಿ ಅತೃಪ್ತರು, ಕಾಂಗ್ರೆಸ್ ಅತೃಪ್ತರ ಕಡೆಗೆ ಬೊಟ್ಟು ಮಾಡಿದ್ಧಾರೆ. ''ನಮ್ಮ ಪಕ್ಷದ ವರಿಷ್ಠರಿಗೆ ನಿಷ್ಠಾವಂತ ಕಾರ್ಯಕರ್ತರ ಬಗ್ಗೆ ಒಲವಿಲ್ಲ. ಹೊರಗಡೆಯಿಂದ ಬಂದವರನ್ನು ಓಲೈಸಲು ನಮ್ಮನ್ನು ಬಲಿಕೊಡುತ್ತಿದ್ದಾರೆ. ಈ ಬಾರಿ ನನಗೆ ಟಿಕೆಟ್ ಕೊಡದೇ ಇರುವುದಕ್ಕೆ ಕಾಂಗ್ರೆಸ್‌ನಿಂದ ಬಂದ ಅತೃಪ್ತ ನಾಯಕನ ಲಾಬಿಯೇ ಕಾರಣ,'' ಎಂದು ತಾರಾಲಿ ಕ್ಷೇತ್ರದ ಬಿಜೆಪಿ ಶಾಸಕಿ ಮುನ್ನಿ ದೇವಿ ಶಾ ಬೇಸರ ವ್ಯಕ್ತಪಡಿಸಿದ್ದಾರೆ. ಮುನ್ನಿ ದೇವಿ ಮತ್ತು ದ್ವಾರಹತ್ ಕ್ಷೇತ್ರದ ಮಹೇಶ್ ನೇಗಿ ಅವರಂಥ ಪ್ರಭಾವಿ ಶಾಸಕರಿಗೂ ಈ ಸಾರಿ ಬಿಜೆಪಿ ಟಿಕೆಟ್ ಕೈತಪ್ಪಿದೆ. ''ಕೇಂದ್ರ ವರಿಷ್ಠರು ನನ್ನ ಪ್ರಶ್ನೆಗೆ ಉತ್ತರಿಸಬೇಕಿದೆ. ಐದು ವರ್ಷ ನಾನು ಕ್ಷೇತ್ರದ ಅಭಿವೃದ್ಧಿಗೆ ಮಾಡಿದ ಕೆಲಸಗಳು ಎಲ್ಲರ ಕಣ್ಣ ಮುಂದಿವೆ. ರಾಜ್ಯ ಮತ್ತು ಕೇಂದ್ರದ ಸಾಧನೆಗಳನ್ನು ನಾನು ಮುತುವರ್ಜಿಯಿಂದ ಜನರಿಗೆ ಮುಟ್ಟಿಸಿದ್ದೇನೆ. ಏನು ಕಡಿಮೆಯಾಗಿತ್ತು ನನ್ನ ಸಾಧನೆಯಲ್ಲಿ,'' ಎಂದು ಮುನ್ನಿ ದೇವಿ ಪ್ರಶ್ನಿಸಿದ್ದಾರೆ. ''ಅಷ್ಟಕ್ಕೂ ನನ್ನನ್ನು ಕೈಬಿಟ್ಟು ಪಕ್ಷದ ನಿಷ್ಠಾವಂತನಿಗೆ ಟಿಕೆಟ್ ನೀಡಿದ್ದರೆ ನನಗೆ ಬೇಸರವಿರುತ್ತಿರಲಿಲ್ಲ. ಕಾಂಗ್ರೆಸ್‌ನಿಂದ ಬಂದ ಲಾಬಿಕೋರನಿಗೆ ಟಿಕೆಟ್ ನೀಡಲಾಗಿದೆ. ಇದರಿಂದ ಕಾರ್ಯಕರ್ತರ ಆತ್ಮಸ್ಥೈರ್ಯಕ್ಕೆ ಪೆಟ್ಟು ಬಿದ್ದಿದೆ,'' ಎಂದು ಅವರು ಹೇಳಿದ್ದಾರೆ. ಕಾಂಗ್ರೆಸ್‌ನಿಂದ ಬಂದು ಬಿಜೆಪಿ ಟಿಕೆಟ್ ಗಿಟ್ಟಿಸಿರುವ ಭೋಪಾಲ್ ರಾಮ್ ಟಮ್ಟಾ ವಿರುದ್ಧ ಮುನ್ನಿ ದೇವಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಅದೇ ರೀತಿ, ನೇಗಿ ಕೂಡ ವರಿಷ್ಠರ ನಿರ್ಧಾರದ ವಿರುದ್ಧ ಕಿಡಿಕಾರಿದ್ದಾರೆ. ಪಕ್ಷದ ಹಲವು ಪದಾಧಿಕಾರಿಗಳು ಸಹ ಕಾಂಗ್ರೆಸ್ ಸೇರುವ ಅಥವಾ ಪಕ್ಷೇತರ ಅಭ್ಯರ್ಥಿಗಳಾಗಿ ಸ್ಪರ್ಧಿಸುವ ಬೆದರಿಕೆ ಹಾಕಿದ್ದಾರೆ. ''ಒಂದಲ್ಲಾಒಂದು ಕಾರಣಕ್ಕೆ ಹೆಸರು ಕೆಡಿಸಿಕೊಂಡ ಶಾಸಕರಿಗೆ ಈ ಬಾರಿ ಮುಲಾಜಿಲ್ಲದೇ ವಿಶ್ರಾಂತಿ ನೀಡಲಾಗಿದೆ. ವ್ಯಕ್ತಿಗಿಂತ ಪಕ್ಷದ ವರ್ಚಸ್ಸು ಮುಖ್ಯ,'' ಎಂದು ಟಿಕೆಟ್ ವಂಚಿತರ ಆರೋಪಗಳಿಗೆ ಬಿಜೆಪಿ ಮುಖಂಡರು ಸ್ಪಷ್ಟನೆ ನೀಡಿದ್ದಾರೆ. ಉತ್ತರಪ್ರದೇಶದಲ್ಲೂ ಬಿಜೆಪಿ ಮೊದಲ ಪಟ್ಟಿ ಪ್ರಕಟಗೊಂಡಿದ್ದು, ಹತ್ತು ಶಾಸಕರಿಗೆ ಟಿಕೆಟ್ ಕೈತಪ್ಪಿದೆ. ಗೋವಾದಲ್ಲೂ ಇಂತಹದ್ದೇ ಭಿನ್ನರಾಗ ಕೇಳಿ ಬಂದಿದೆ. ''ದೊಡ್ಡ ಪಕ್ಷದಲ್ಲಿ ಇಂತಹದ್ದೆಲ್ಲ ಘಟಿಸುವುದು ಸಾಮಾನ್ಯ. ಪೂರ್ವ ಸಮೀಕ್ಷೆ ನಡೆಸಿಯೇ ಅಭ್ಯರ್ಥಿಗಳನ್ನು ನಿರ್ಧರಿಸಲಾಗಿದೆ. ಈ ನಿರ್ಧಾರದಲ್ಲಿ ಬದಲಾವಣೆ ಇಲ್ಲ,'' ಎಂದು ಬಿಜೆಪಿ ಅಭ್ಯರ್ಥಿ ಆಯ್ಕೆ ಸಮಿತಿ ತಿಳಿಸಿದೆ.
from India & World News in Kannada | VK Polls https://ift.tt/3KLnTan