ಯುವಕರಿಗೆ ಪಂಜಾಬ್‌ ಕಾಂಗ್ರೆಸ್‌ ಮಣೆ..! ಎಂಜಿನಿಯರ್‌, ಉಪನ್ಯಾಸಕ, ಪದವೀಧರರಿಗೆ ಟಿಕೆಟ್‌..!

ಚಂಡೀಗಢ: ಪಂಜಾಬ್‌ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಭಾರಿ ರಣತಂತ್ರ ರೂಪಿಸುತ್ತಿರುವ ಕಾಂಗ್ರೆಸ್‌, ಹೊಸ ಮುಖಗಳು, ಅದರಲ್ಲೂ ಹಲವು ಕ್ಷೇತ್ರಗಳ ವೃತ್ತಿಪರರಿಗೆ ಟಿಕೆಟ್‌ ನೀಡುವ ಮೂಲಕ ಬದಲಾವಣೆಗೆ ಮುನ್ನುಡಿ ಬರೆದಿದೆ. ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದವರು, ಬೋಧನಾ ವೃತ್ತಿಯಲ್ಲಿದ್ದು ರಾಜಕೀಯಕ್ಕೆ ಬಂದವರು, ವಿದೇಶದಲ್ಲಿ ಪದವಿ ಪಡೆದವರು ಹಾಗೂ ಪಕ್ಷದ ನಾಯಕರ ಮಕ್ಕಳನ್ನು ರಾಜಕೀಯಕ್ಕೆ ಸೆಳೆದಿದೆ. ಅಲ್ಲದೆ, ಅವರಿಗೆ ಟಿಕೆಟ್‌ ನೀಡುವ ಮೂಲಕ ಯುವ ಮತದಾರರು ಸೇರಿ ಸಮಾಜದ ಎಲ್ಲ ವರ್ಗದವರ ಮತ ಸೆಳೆಯಲು ತಂತ್ರ ರೂಪಿಸಿದ್ದಾರೆ. ಸಂದೀಪ್‌ ಕುಮಾರ್‌ ಜಾಖಡ್‌ (45) ಅವರು ಪಂಜಾಬ್‌ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಸುನಿಲ್‌ ಜಾಖರ್‌ ಅವರ ಸಂಬಂಧಿಯಾಗಿದ್ದು, ಇವರಿಗೆ ಅಬೋಹರ್‌ ಕ್ಷೇತ್ರದಿಂದ ಟಿಕೆಟ್‌ ನೀಡಲಾಗಿದೆ. ಅವರು ಅಮೆರಿಕದ ಫ್ಲೊರಿಡಾ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿ ಓದಿದ್ದಾರೆ. ಯುವ ಮತದಾರರನ್ನು ಸೆಳೆಯಲು ಕಾಂಗ್ರೆಸ್‌ ಇವರಿಗೆ ಟಿಕೆಟ್‌ ನೀಡಿದೆ ಎಂದು ಹೇಳಲಾಗಿದೆ. ನಟ, ಸಮಾಜ ಸೇವಕ ಸೋನು ಸೂದ್‌ ಅವರ ಸಹೋದರಿ ಮಾಳವಿಕಾ ಸೂದ್‌ ಸಾಚರ್‌ (38) ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿರುವುದರ ಹಿಂದೆಯೂ ಯುವ ಮತದಾರರ ಸೆಳೆಯುವ ತಂತ್ರವಿದೆ. ಅದರಲ್ಲೂ, ಮೋಗಾ ಕ್ಷೇತ್ರದ ಹಾಲಿ ಶಾಸಕ ಹರ್‌ಜೋತ್‌ ಸಿಂಗ್‌ ಕಮಲ್‌ ಅವರಿಗೆ ಟಿಕೆಟ್‌ ತಪ್ಪಿಸಿ, ಮಾಳವಿಕಾ ಅವರಿಗೆ ಟಿಕೆಟ್‌ ನೀಡಿದ್ದು ಇದೇ ತಂತ್ರದ ಭಾಗವಾಗಿದೆ. ಮಾಳವಿಕಾ ವೃತ್ತಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದಾರೆ. ಬುದ್ಲಾಧ (ಎಸ್‌ಸಿ ಮೀಸಲು) ಕ್ಷೇತ್ರದಿಂದ ಸ್ಪರ್ಧಿಸಿರುವ ರಣವೀರ್‌ ಕೌರ್‌ ಮಿಯಾನ್‌ ಅವರು 30 ವರ್ಷದ ಯುವಕರಾಗಿದ್ದು, ಇಂಗ್ಲಿಷ್‌ ಸಾಹಿತ್ಯದ ಕುರಿತು ಪಿಎಚ್‌ಡಿ ಮಾಡಿ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅಷ್ಟೇ ಅಲ್ಲ, ಸಚಿವ ಬ್ರಹ್ಮ ಮೊಹಿಂದ್ರಾ ಪುತ್ರ ಮೋಹಿತ್‌ ಮೊಹಿಂದ್ರಾ (32) ಅವರಿಗೆ ಪಟಿಯಾಲ ಗ್ರಾಮೀಣದಿಂದ ಟಿಕೆಟ್ ನೀಡಲಾಗಿದೆ. ಮಾಜಿ ಮುಖ್ಯಮಂತ್ರಿ ಪ್ರಕಾಶ್‌ ಸಿಂಗ್‌ ಬಾದಲ್‌ ಅವರ ಸಂಬಂಧಿ ಜಗಪಾಲ್‌ ಸಿಂಗ್‌ ಅಬುಲ್‌ ಖುರಾನ, ಶಿಕ್ಷಕ ವೃತ್ತಿಯಲ್ಲಿದ್ದು ಬಳಿಕ ರಾಜಕೀಯಕ್ಕೆ ಧುಮುಕಿದ ರಜಿಂದರ್‌ ಕೌರ್‌, ಪಂಜಾಬಿ ಗಾಯಕ ಸಿಧು ಮೂಸೆವಾಲಾ (28), ಯುವ ಕಾಂಗ್ರೆಸ್‌ ನಾಯಕ ಅಮರ್‌ಪ್ರೀತ್‌ ಸಿಂಗ್‌ ಲಲ್ಲಿ (39) ಅವರೂ ಚುನಾವಣೆ ಕಣದಲ್ಲಿರುವ ಯುವ ಮುಖಗಳಾಗಿವೆ. ಎರಡು ಕ್ಷೇತ್ರಗಳಿಂದ ಸಿಎಂ ಸ್ಪರ್ಧೆ ಮುಖ್ಯಮಂತ್ರಿ ಚರಣ್‌ ಜಿತ್‌ ಸಿಂಗ್‌ ಚನ್ನಿ ತಾವು ಹಾಲಿ ಪ್ರತಿನಿಧಿಸುತ್ತಿರುವ ಚಮಕೌರ್‌ ಸಾಹಿಬ್‌ ಅಲ್ಲದೆ ಬಹಾದೂರ್‌ ಕ್ಷೇತ್ರದಿಂದಲೂ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಕಾಂಗ್ರೆಸ್‌ ಭಾನುವಾರ ಪ್ರಕಟಿಸಿದ ಎಂಟು ಅಭ್ಯರ್ಥಿಗಳ ಪಟ್ಟಿಯಲ್ಲಿ ಮುಖ್ಯಮಂತ್ರಿ ಚನ್ನಿ ಅವರ ಹೆಸರಿದೆ. ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವ ಮುಖ್ಯಮಂತ್ರಿ ನಿರ್ಧಾರವನ್ನು ಆಮ್‌ ಆದ್ಮಿ ಪಾರ್ಟಿ ವರಿಷ್ಠ ಅರವಿಂದ್‌ ಕೇಜ್ರಿವಾಲ್‌ ಟೀಕಿಸಿದ್ದಾರೆ. 'ನಮ್ಮ ಪಕ್ಷದ ಸಮೀಕ್ಷೆಯು ಚಮಕೌರ್‌ ಸಾಹಿಬ್‌ನಲ್ಲಿ ಚನ್ನಿಯವರು ಸೋಲುವುದು ಖಚಿತ ಎಂಬ ವರದಿ ನೀಡಿದೆ. ಮುಖ್ಯಮಂತ್ರಿ ಈಗ ಎರಡು ಕ್ಷೇತ್ರ ಆರಿಸಿಕೊಂಡಿರುವುದನ್ನು ನೋಡಿದರೆ ನಮ್ಮ ಸಮೀಕ್ಷೆ ನಿಜವಾಗುವಂತೆ ತೋರುತ್ತಿದೆ' ಎಂದು ಕೇಜ್ರಿವಾಲ್‌ ಹೇಳಿದ್ದಾರೆ.


from India & World News in Kannada | VK Polls https://ift.tt/V7SDeXjxp

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...