ಬೆಂಗಳೂರು: ನನ್ನ ವಿರುದ್ಧ ಪಕ್ಷದ ವರಿಷ್ಠರಿಗೆ ಸ್ವತಃ ಸಿಎಂ ದೂರು ನೀಡಿದ್ದಾರೆ ಎಂಬುದು ಸತ್ಯಕ್ಕೆ ದೂರವಾದ ಮಾತು ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದರು. ಬುಧವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಧಿಕಾರ ಇದ್ದಾಗ, ಇಲ್ಲದಿದ್ದಾಗಲೂ ಸಮಚಿತ್ತದಲ್ಲೇ ಇದ್ದೇನೆ. ಸಿಎಂ, ವರಿಷ್ಠರ ನಿರ್ಧಾರ ಪಾಲಿಸುವ ವ್ಯಕ್ತಿ ನಾನು ಎಂದರು. ‘ಕೆಲವರು ಗಾಳಿ ಸುದ್ದಿ ಹಬ್ಬಿಸುತ್ತಿದ್ದಾರೆ. ಸಿಎಂ ನನ್ನ ವಿರುದ್ಧ ದೂರು ನೀಡಲು ಸಾಧ್ಯವೇ ಇಲ್ಲ. ಒಂದೇ ಕಾಲೇಜಿನಲ್ಲಿ ಓದಿದ್ದೇವೆ. 30 ವರ್ಷಗಳ ಸಂಬಂಧ ಇದ್ದು, ಭಿನ್ನಾಭಿಪ್ರಾಯ ಬರಲು ಸಾಧ್ಯವಿಲ್ಲ’ ಎಂದು ಹೇಳಿದರು. ‘ಕೇವಲ ರಾಜಕೀಯ ಮಾತ್ರ ಅಲ್ಲ. ಬೇರೆ ಕಾರಣಗಳಿಂದ ನಾನು ತಪ್ಪು ಹೆಜ್ಜೆ ಇಟ್ಟಾಗಲೂ ಬಸವರಾಜ ಬೊಮ್ಮಾಯಿ ತಿಳಿ ಹೇಳುತ್ತಾ ಬಂದಿದ್ದಾರೆ’ ಎಂದರು. ನನ್ನ ಬಗ್ಗೆ ಅವರಿಗೆ ಅಸಮಾಧಾನ ಇಲ್ಲ ಎಂದ , 8 ತಿಂಗಳಿಂದ ದಿಲ್ಲಿ, ಮುಂಬೈ, ನಾಗಪುರ, ಅಹಮದಾಬಾದ್ ಕಡೆ ಹೋಗಿಲ್ಲ. ರಾಷ್ಟ್ರೀಯ ನಾಯಕರು, ಸಂಘ ಪರಿವಾರದ ಯಾರನ್ನೂ ಭೇಟಿಯಾಗಿಲ್ಲ’ ಎಂದು ಹೇಳಿದರು. ‘ಖಾಲಿ ಇರುವ ಸಚಿವ ಸ್ಥಾನ ಭರ್ತಿ ಮಾಡೋದು ಬಿಡೋದು ಸಿಎಂಗೆ ಬಿಟ್ಟ ಪರಮಾಧಿಕಾರ. ಸೂಕ್ತ ಸಮಯದಲ್ಲಿ ಅವರು ಭರ್ತಿ ಮಾಡುತ್ತಾರೆ. ಕೆಲ ಸಚಿವರನ್ನು ಸಂಪುಟದಿಂದ ಕೈ ಬಿಡುವುಧಿದಾದರೆ ಅದು ಸಹ ಸಿಎಂ ಪರಮಾಧಿಕಾರ’ ಎಂದರು. ನ್ಯಾಯ ಸಿಗುವ ವಿಶ್ವಾಸವಿದೆ: ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ಹಿಂದುಳಿದ ವರ್ಗಕ್ಕೆ ಸೇರ್ಪಡೆ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಸೂಕ್ತ ಸಂದರ್ಭದಲ್ಲಿ ನಿರ್ಣಯ ಕೈಗೊಳ್ಳಲಿದ್ದಾರೆ. ಅವರಿಂದ ಸಮುದಾಯಕ್ಕೆ ಖಂಡಿತ ನ್ಯಾಯ ಸಿಗಲಿದೆ. ನಾನು ಸರಕಾರದ ಭಾಗವಾಗಿ ಕಾನೂನು ಬದ್ಧವಾಗಿ ಘೋಷಣೆ ಮಾಡಬೇಕು ಎಂಬ ಬೇಡಿಕೆ ಇದೆ. ಹೊರಗೆ ಇರುವವರು ಬೇರೆ ರೀತಿ ಹೋರಾಟ ಮಾಡುತ್ತಿದ್ದಾರೆ. ಹಿಂದುಳಿದ ಆಯೋಗದ ವರದಿ ಸಂಪುಟದಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು’ ಎಂದರು.
from India & World News in Kannada | VK Polls https://ift.tt/3FHKXCX