ನಾಲತವಾಡ: ಪಕ್ಷಾತೀತವಾಗಿ ಕರ್ತವ್ಯ ನಿರ್ವಹಿಸಬೇಕಿದ್ದ ಮುದ್ದೇಬಿಹಾಳದ ಪಿಎಸ್‌ಐ ರಾಜಕೀಯ ಚದುರಂಗದಾಟಕ್ಕಿಳಿದು ಪ. ಪಂ ಚುನಾವಣೆಯಲ್ಲಿ ಬಿಜೆಪಿ ಪರ ಮತಕ್ಕೆ ಗೇಮ್ ಪ್ಲಾನ್ ಮಾಡಿದ್ದು, ಇದೀಗ ಭಾರೀ ವಿರೋಧಕ್ಕೆ ಗುರಿಯಾಗಿದೆ. ಬಿಜೆಪಿ ಅಭ್ಯರ್ಥಿಯ ಪುತ್ರನೊಂದಿಗೆ ಮುದ್ದೇಬಿಹಾಳದ ಮಹಿಳಾ ಪಿಎಸ್‌ಐ ಮೊಬೈಲ್ ಮೂಲಕ ಮಾತನಾಡಿದ್ದ ಸಂಭಾಷಣೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈಗ ಬಾರಿ ಚರ್ಚೆಗೆ ಗ್ರಾಸವಾಗಿದೆ. ಕಳೆದ ಡಿ.27 ರಂದು ನಾಲತವಾಡ ಪಟ್ಟಣ ಪಂಚಾಯತ್‌ಗೆ ಸಾರ್ವತ್ರಿಕೆ ಚುನಾವಣೆ ನಡೆದಿತ್ತು. ಈ ವೇಳೆ ಮುದ್ದೇಬಿಹಾಳ ಪಿಎಸ್‌ಐ ರೇಣುಕಾ ಜಕನೂರ ಎಂಬುವರೇ ಪಟ್ಟಣದ 6ನೇ ವಾರ್ಡ್‌ನ ಬಿಜೆಪಿ ಅಭ್ಯರ್ಥಿ ಪರ ಸಾಥ್ ನೀಡಿದವರು. ಮೊಬೈಲ್ ಮೂಲಕ ವಾರ್ಡ್‌ನ ಮತದಾರರ ಸಂಪೂರ್ಣ ಮಾಹಿತಿ ಪಡೆದು ಚುನಾವಣೆಯಲ್ಲಿ ಬಿಜೆಪಿಗೆ ಮತ ಚಲಾವಣೆಯ ಕುರಿತು ಅಭ್ಯರ್ಥಿಯ ಪುತ್ರನಿಗೆ ಪ್ಲಾನ್ ನೀಡಿದ್ದು, ಪೊಲೀಸ್ ಇಲಾಖೆಯನ್ನೇ ತಲೆ ಕೆಳಗಾಗುವಂತೆ ಮಾಡಿದೆ. ಸಂಭಾಷಣೆಯಲ್ಲಿ ‘ನಾನು ಈ ವಿಷಯ ಮಾತನಾಡಿದ್ದು ಯಾರಿಗೂ ಗೊತ್ತಾಗಬಾರದು. ಎಲ್ಲಾ ಜಾತಿಯ ಪ್ರತ್ಯೇಕ ಮತಗಳ ಮಾಹಿತಿ ಪಡೆದುಕೊಂಡು ಬಿಜೆಪಿ ಪರ ಒಲವು ತೋರಿಸಿದ್ದಾರೆ. ಹೇಗಾದರೂ ಮಾಡಿ ಬಿಜೆಪಿಯತ್ತ ಗಮನ ಸೆಳೆಯುವಂತೆ ಪ್ರಚಾರ ಕೈಗೊಳ್ಳಿ.. ಸಾಹೇಬರು ಸಿಕ್ರೆಟ್ ಮೆಂಟೆನ್ ಮಾಡಲು ಹೇಳಿದ್ದಾರೆ’ ಎಂದು ಪಿಎಸ್‌ಐ ಹೇಳಿದ್ದು, ಸಾಹೇಬರು ಎನ್ನುವ ಪದ ಮತ್ತಷ್ಟು ಕುತೂಹಲ ಮೂಡಿಸಿದೆ. ಪಿಎಸ್‌ಐ ಅವರಿಗೆ ಯಾವ ಸಾಹೇಬ್ರು ಸಾಥ್ ನೀಡಿದ್ದಾರೆ ಎನ್ನುವ ಅಂಶ ಬೆಳಕಿಗೆ ಬರಬೇಕಿದ್ದು, ಮಹಿಳಾ ಪಿಎಸ್‌ಐಯೊಬ್ಬರ ಈ ನಡೆ ಸದ್ಯ ವಿವಾದಕ್ಕೆ ಗುರಿಯಾಗಿದ್ದು, ಒಂದು ಪಕ್ಷದ ಪರ ಒಲವು ತೋರಿಸಿ ಕರ್ತವ್ಯಕ್ಕೆ ಅಪಚಾರ ಎಸಗಿರುವ ಪಿಎಸ್‌ಐಯನ್ನು ಕೂಡಲೇ ಅಮಾನತುಗೊಳಿಸಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಮೇಲಾಧಿಕಾರಿಗಳು ಈ ಪಿಎಸ್‌ಐ ಮೇಲೆ ಯಾವ ಕ್ರಮ ಕೈಗೊಳ್ಳಬಹುದು ಎನ್ನುವದನ್ನು ಕಾದು ನೋಡಬೇಕಿದೆ.
from India & World News in Kannada | VK Polls https://ift.tt/3tRAR03