ಗರ್ಭಿಣಿಯ ಬಯಕೆ ಈಡೇರಿಸಿದ ಬೆಂಗಳೂರು ಎಫ್‌ಸಿ

ಮಂಜುನಾಥ ಜಾಬಗೆರೆ ಬೆಂಗಳೂರು: ಗರ್ಭಿಣಿಯ ಬಯಕೆ ಈಡೇರಿಸುವುದು ಭಾರತೀಯರ ಪಾಲಿಗೆ ಖುಷಿಯ ಸಂಗತಿ. ಮುದ್ದು ಕಂದಮ್ಮನ ನಿರೀಕ್ಷೆಯಲ್ಲಿರುವ ಆಕೆಯನ್ನು ಸತ್ಕಾರ ಮಾಡಿ ನಗುಮೊಗದೊಂದಿಗೆ ಕಳುಹಿಸುವುದು ನಮ್ಮ ಸಂಸ್ಕೃತಿ ಯ ಭಾಗವೂ ಹೌದು. ಇಂಥದ್ದೊಂದು ಸುಂದರ ಕ್ಷಣಕ್ಕೆ ಎದುರು ನೋಡುತ್ತಿದೆ ಬೆಂಗಳೂರು ಫುಟ್ಬಾಲ್‌ ಕ್ಲಬ್‌. ಈ ಅಪರೂಪದ ಸಂದರ್ಭಕ್ಕೆ ಸಾಕ್ಷಿಯಾಗಲಿರುವುದು ಶನಿವಾರ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಐಎಸ್‌ಎಲ್‌ ಪಂದ್ಯವೆನ್ನುವುದು ಸೋಜಿಗದ ಸಂಗತಿ. ಎಂಟೂವರೆ ತಿಂಗಳ ತುಂಬು ಗರ್ಭಿಣಿಯ ಹೆಸರು ಮೇಘನಾ ನಾಯರ್‌. ಬೆಂಗಳೂರು ನಿವಾಸಿಯಾಗಿರುವ ಅವರು, ಸ್ಟ್ರೈಕರ್‌ ಸುನಿಲ್‌ ಛೆತ್ರಿ ಸಾರಥ್ಯದ ಹಾಲಿ ಚಾಂಪಿಯನ್‌ ಬಿಎಫ್‌ಸಿ ತಂಡದ ಅಪ್ಪಟ ಅಭಿಮಾನಿ. ಬಿಎಫ್‌ಸಿ ಹಾಗೂ ಕೇರಳ ಬ್ಲಾಸ್ಟರ್ಸ್‌ ನಡುವೆ ಶನಿವಾರ ಕಂಠೀರವ ಕ್ರೀಡಾಂಗಣದಲ್ಲಿಐಎಸ್‌ಎಲ್‌ ಪಂದ್ಯ ನಡೆಯಲಿದ್ದು, ಆ ಪಂದ್ಯವನ್ನು ಮೈದಾನಕ್ಕೆ ಹೋಗಿ ವೀಕ್ಷಿಸುವ ಆಸೆ ಮೇಘನಾ ಅವರದ್ದು. ಅದಕ್ಕಾಗಿ ಟಿಕೆಟ್‌ ಕೂಡ ಕಾಯ್ದಿರಿಸಿದ್ದಾರೆ. ಆದರೆ, ಹೆರಿಗೆಗೆ ಇನ್ನು ಕೆಲವೇ ದಿನಗಳ ಬಾಕಿ ಇರುವ ಅವರಿಗೆ ಆಗಾಗ ಕುಡಿಯಲು ಬಿಸಿ ನೀರು ಬೇಕಾಗುತ್ತದೆ. ಆದರೆ, ಭದ್ರತೆಯ ಕಾರಣಕ್ಕೆ ಮೈದಾನದೊಳಗೆ ಒಂದು ತೊಟ್ಟು ನೀರು ತೆಗೆದುಕೊಂಡು ಹೋಗಲೂ ಬಿಡುವುದಿಲ್ಲ. ಇಂಥ ಸಂದರ್ಭದಲ್ಲಿಅವರಿಗೆ ಸ್ಮರಣೆಗೆ ಬಂದಿದ್ದು ಬಿಎಫ್‌ಸಿ. ಕ್ಲಬ್‌ನ ಟ್ವಿಟರ್‌ ಖಾತೆಗೆ ಸಂದೇಶ ಕಳುಹಿಸಿದ ಮೇಘನಾ ಬಿಸಿ ನೀರು ಹಾಗೂ ಸ್ವಲ್ಪ ಔಷಧಗಳೊಂದಿಗೆ ಮೈದಾನಕ್ಕೆ ಪ್ರವೇಶ ಕೊಡಿಸಿ ಎಂದು ಮನವಿ ಮಾಡುತ್ತಾರೆ. ಅದ್ಧೂರಿ ಸತ್ಕಾರಕ್ಕೆ ರೆಡಿ: ಮೇಘನಾ ಅವರ ಸಂದೇಶಕ್ಕೆ ಅತ್ಯಂತ ಸಂತಸದಿಂದ ಪ್ರತಿಕ್ರಿಯಿಸಿರುವ ಬಿಎಫ್‌ಸಿ, ತಂಡದ ಮಾಲೀಕರು ಕುಳಿತುಕೊಳ್ಳುವ ಬಾಕ್ಸ್‌ ನಲ್ಲೇ ಕುಳಿತು ಪಂದ್ಯದ ರೋಚಕ ಕ್ಷಣಗಳನ್ನು ವೀಕ್ಷಿಸಲು ಅವಕಾಶ ಕಲ್ಪಿಸುತ್ತೇವೆ ಎಂದಿದೆ. ''ನಿಮ್ಮ ಮುದ್ದು ಕಂದನನ್ನು ಫುಟ್ಬಾಲ್‌ ಕ್ಷೇತ್ರಕ್ಕೆ ಈಗಾಗಲೇ ಪರಿಚಯಿಸುತ್ತಿರುವುದು ಹೆಮ್ಮೆಯ ಸಂಗತಿ. ನಿಮ್ಮ ಅಭಿಮಾನ ನಮ್ಮ ಪ್ರೀತಿಗೆ ಪಾತ್ರವಾಗಿದೆ. ನಿಮಗಾಗಿ ಬಿಸಿ ನೀರು ಮಾತ್ರವಲ್ಲಇನ್ನಷ್ಟು ಅಗತ್ಯಗಳನ್ನು ಪೂರೈಸುವ ವಸ್ತುಗಳು ಕಾಯ್ದಿರಿಸಿದ್ದೇವೆ,'' ಎಂದು ಮರು ಸಂದೇಶ ಕಳುಹಿಸಿದ ಬಿಎಫ್‌ಸಿ ನೈಜ 'ಕ್ರೀಡಾ ಸ್ಫೂರ್ತಿ' ಮೆರೆದಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2OD2p3b

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...