ಕೆಪಿಎಲ್‌ ಮಾಲೀಕರು, ಕೆಎಸ್‌ಸಿಎಗೆ ಲೆಕ್ಕದ ಸಂಕಟ

ಗಿರೀಶ್‌ ಕೋಟೆ ಕೆಪಿಎಲ್ : ಒಟ್ಟು ವಹಿವಾಟಿನ ಲೆಕ್ಕ-ಪತ್ರ ಕೇಳಿದ ಸಿಸಿಬಿ ಬೆಂಗಳೂರು: ಕೆಪಿಎಲ್‌ ಮ್ಯಾಚ್‌ ಫಿಕ್ಸಿಂಗ್‌ ಪ್ರಕರಣದ ತನಿಖೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ತನಿಖೆಯೀಗ ಕೆಪಿಎಲ್‌ನ ಒಟ್ಟು ಹಣಕಾಸು ವಹಿವಾಟಿನ ಮೂಲಕ್ಕೆ ಬಂದು ನಿಂತಿದೆ. ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಮತ್ತು ಕರ್ನಾಟಕ ಪ್ರೀಮಿಯರ್‌ ಲೀಗ್‌ನ ಎಲ್ಲಾ ತಂಡಗಳ ಮಾಲೀಕರಿಗೆ ಸಿಸಿಬಿ ನೋಟಿಸ್‌ ಜಾರಿ ಮಾಡಿ ತಂಡ ಮತ್ತು ಸಂಸ್ಥೆಯ ಸಂಪೂರ್ಣ ಆರ್ಥಿಕ ವಹಿವಾಟಿನ ವಿವರ ಸಲ್ಲಿಸುವಂತೆ ಸೂಚಿಸಿದೆ. ಬೆಳಗಾವಿ ಪ್ಯಾಂಥರ್ಸ್ ಮಾಲೀಕ ಅಷ್ಫಕ್‌ ಅಲಿ ಬಂಧನದ ಮೂಲಕ ಕೆಪಿಎಲ್‌ ಮ್ಯಾಚ್‌ ಫಿಕ್ಸಿಂಗ್‌ನ ಸುಳಿಗಳು ಬಿಚ್ಚಿಕೊಳ್ಳುತ್ತಾ ಹೋಗಿವೆ. ಇದು ಹಲವು ತಂಡಗಳ ಮಾಲೀಕರು ಹಾಗೂ ಆಟಗಾರರ ಜತೆಗೆ ಕೋಚ್‌ಗಳು ಮತ್ತು ಅಂಪೈರ್‌ಗಳನ್ನೂ ಸುತ್ತಿಕೊಳ್ಳತೊಡಗಿದೆ. ಇದುವರೆಗೂ ಈ ಸಂಬಂಧ ಒಟ್ಟು ಐದು ಎಫ್‌ಐಆರ್‌ಗಳು ದಾಖಲಾಗಿದ್ದು, ಪ್ರತಿಯೊಬ್ಬರ ವಿಚಾರಣೆಯಲ್ಲೂ ಮ್ಯಾಚ್‌ಫಿಕ್ಸಿಂಗ್‌ನ ಆಳ ವಿಸ್ತಾರವಾಗುತ್ತಿದೆ. ಸದ್ಯ 30ಕ್ಕೂ ಹೆಚ್ಚು ಆಟಗಾರರು, ಕೋಚ್‌ಗಳ ಹೆಸರು ವಿಚಾರಣೆ ವೇಳೆ ಹೊರಬಂದಿವೆ. ಇನ್ನೂ 18 ಮಂದಿಯ ವಿಚಾರಣೆ ಬಾಕಿ ಉಳಿದಿದ್ದು, ಇನ್ನಷ್ಟು ಜನರ ಹೆಸರುಗಳು ಹೊರಬರಬಹುದು. ತನಿಖೆ ದೀರ್ಘವಾದರೆ ಮುಗಿಯಲು ವರ್ಷಗಳೇ ಬೇಕಾಗಬಹುದು ಎಂದು ಸಿಸಿಬಿ ಮೂಲಗಳು ತಿಳಿಸಿವೆ. ನಡುಕ ಹುಟ್ಟಿಸಿರುವ ಸಿಸಿಬಿ ಪ್ರಶ್ನೆಗಳು: ಈ ಕಾರಣದಿಂದಲೇ ತನಿಖೆಯ ಸ್ವರೂಪ ಬದಲಾಯಿಸಿರುವ ಸಿಸಿಬಿ ಅಧಿಕಾರಿಗಳು, ಕರ್ನಾಟಕ ಪ್ರೀಮಿಯರ್‌ ಲೀಗ್‌ನಲ್ಲಿ ಭಾಗಿಯಾಗಿದ್ದ 8 ತಂಡಗಳ ಮಾಲೀಕರು ಮತ್ತು ಈ ಎಲ್ಲಾ ತಂಡಗಳ ಮಾತೃಸಂಸ್ಥೆ ಕೆಎಸ್‌ಸಿಎಗೂ ನೋಟಿಸ್‌ ನೀಡಿದ್ದಾರೆ. ಅಧಿಕಾರಿಗಳು ನೋಟಿಸ್‌ನಲ್ಲಿ ಕೇಳಿರುವ ಪ್ರಶ್ನೆಗಳು ತಂಡಗಳಿಗೆ ನಡುಕ ಹುಟ್ಟಿಸಿವೆ. ಸಿಸಿಬಿ ಕೇಳಿರುವ ದಾಖಲೆಗಳನ್ನು ಒದಗಿಸುವುದೂ ಕಷ್ಟ. ಒದಗಿಸದಿದ್ದರೆ ಇನ್ನೂ ಕಷ್ಟ ಎಂಬಂತಾಗಿದೆ ತಂಡಗಳ ಮಾಲೀಕರ ಸ್ಥಿತಿ. ಸಿಸಿಬಿ ಕೇಳಿರುವುದೇನು? ತಂಡದ ಮಾಲೀಕರು ತಂಡವನ್ನು ಎಷ್ಟು ಹಣಕ್ಕೆ ಖರೀದಿಸಿದರು. ಈ ಹಣದ ಮೂಲ ಏನು? ತಂಡದ ಇದುವರೆಗಿನ ಆಡಿಟ್‌ ವರದಿ ಮತ್ತು ಬ್ಯಾಂಕ್‌ ಖಾತೆಯ ವಿವರಗಳನ್ನು ಸಲ್ಲಿಸಬೇಕು. ಎಲ್ಲಾ ತಂಡಗಳೂ ತಮ್ಮ ವಾರ್ಷಿಕ ಲೆಕ್ಕ ಪತ್ರಗಳನ್ನು ಒದಗಿಸಬೇಕು. ಆಟಗಾರರನ್ನು ಖರೀದಿಸುವ ಸಲುವಾಗಿ ನೀಡಿರುವ ಹರಾಜಿನ ಹಣ, ಆಟಗಾರರ ಮತ್ತು ನೌಕರರ ವೇತನಗಳ ವಿವರ ನೀಡಬೇಕು ಎಂದು ಸಿಸಿಬಿ ಅಧಿಕಾರಿಗಳು ಸೂಚಿಸಿದ್ದಾರೆ. ಕೆಎಸ್‌ಸಿಎಗೆ ಕಠಿಣವಾದ ಪ್ರಶ್ನೆಗಳು: ತಂಡದ ಮಾಲೀಕರಿಗೆ ನೀಡಿರುವ ನೋಟಿಸ್‌ಗಿಂತ ಕೆಎಸ್‌ಸಿಎಗೆ ನೀಡಿರುವ ನೋಟಿಸ್‌ನಲ್ಲಿ ಸಿಸಿಬಿ ಇನ್ನಷ್ಟು ವಿಸ್ತೃತವಾದ ದಾಖಲೆ ಮತ್ತು ವಿವರಗಳನ್ನು ಕೇಳಿದೆ. ಕೆಎಸ್‌ಸಿ ಯಾವ ಬೈಲಾ ಅಡಿಯಲ್ಲಿ ನೋಂದಣಿ ಮಾಡಿಕೊಂಡಿದೆ ಎನ್ನುವುದರಿಂದ ಹಿಡಿದು ಇದುವರೆಗೂ ಮೋಸದ ಆಟಕ್ಕೆ ಎಷ್ಟು ಮಂದಿ ವಿರುದ್ಧ ಯಾವ ರೀತಿಯ ಕ್ರಮ ಕೈಗೊಳ್ಳಲಾಗಿದೆ, ಕೆಎಸ್‌ಸಿಎ ಜತೆಗೆ ಹೊಂದಾಣಿಕೆ ಮಾಡಿಕೊಂಡಿರುವ ಕ್ಲಬ್‌ಗಳು ಯಾವುವು? ಹೊಂದಾಣಿಕೆಗೆ ಮಾಡಿಕೊಂಡಿರುವ ಒಪ್ಪಂದಗಳೇನು ಎನ್ನುವುದೂ ಸೇರಿದಂತೆ ಕೆಎಸ್‌ಸಿಎನ ಲೆಕ್ಕ ಪತ್ರಗಳು ಹಾಗೂ ಆಡಿಟ್ ವರದಿಗಳನ್ನೂ ಕೇಳಿದೆ. ಇಂದು (ನ.20) ಬೆಳಗ್ಗೆ 10.30ರ ಗಡುವು ಕೆಎಸ್‌ಸಿಎ ಸೇರಿದಂತೆ ಎಲ್ಲಾ ತಂಡಗಳ ಮಾಲೀಕರೂ ನ.20ರ ಬೆಳಗ್ಗೆ 10.30ಕ್ಕೆ ಸರಿಯಾದ ಸಿಸಿಬಿ ತನಿಖಾಧಿಕಾರಿಗಳ ಮುಂದೆ ಹಾಜರಾಗಿ ದಾಖಲೆಗಳನ್ನು ಒದಗಿಸಬೇಕು ಎಂದು ಸೂಚಿಸಲಾಗಿದೆ. ಆದರೆ ಎಷ್ಟು ತಂಡಗಳು ದಾಖಲೆಗಳನ್ನು ಒದಗಿಸುತ್ತದೆ ಎನ್ನುವುದು ಕೌತುಕದ ಪ್ರಶ್ನೆ ಆಗಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2O2o9pL

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...