ಹೊಸದಿಲ್ಲಿ: ಮುಗಿದ ಅಧ್ಯಾಯವಲ್ಲ. ಮುಂದಿನ ಕೆಲ ಸಮಯದಲ್ಲೇ ಚಂದ್ರನಲ್ಲಿ ಮತ್ತೊಮ್ಮೆ ಲ್ಯಾಂಡರ್ ಒಂದರನ್ನು ಸಾಫ್ಟ್ ಲ್ಯಾಂಡಿಂಗ್ ಮಾಡಲಿದೆ. ಮುಂದಿನ ದಿನದಲ್ಲಿ ಇಸ್ರೋದ ದಿನಗಳು ಉಜ್ವಲವಾಗಿರಲಿದೆ. ಅನೇಕ ಯೋಜನೆಗಳಿಗೆ ಇಸ್ರೋ ಸಿದ್ಧವಾಗುತ್ತಿದೆ. ಇವೆಲ್ಲದರಲ್ಲಿ ಚಂದ್ರನ ಅಂಗಣದಲ್ಲಿ ಮತ್ತೊಂದು ಸಾಫ್ಟ್ ಲ್ಯಾಂಡಿಂಗ್ ಯೋಜನೆಯನ್ನು ಕಾರ್ಯ ರೂಪಕ್ಕೆ ತರುವುದೂ ಇದೆ. ವಿಕ್ರಂ ಲ್ಯಾಂಡರ್ ಚಂದ್ರನ ಅಂಗಳದಿಂದ ಸುಮಾರು 300ಮೀ ಎತ್ತರದಲ್ಲಿರುವ ವರೆಗೆ ಇಸ್ರೋದ ತಂತ್ರಜ್ಞಾನ, ಯೋಜನೆ ಎಲ್ಲವೂ ಸರಿಯಾಗಿತ್ತು. ಮುಂದಿನ ದಿನದಲ್ಲಿ ಚಂದ್ರಯಾನ 2 ಅನುಭವ, ಜ್ಞಾನ ಎಲ್ಲವನ್ನೂ ಒಟ್ಟುಗೂಡಿಸಿ, ಹೊಸ ಯೋಜನೆ ಕಾರ್ಯರೂಪಕ್ಕೆ ಬರಲಿದೆ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ಹೇಳಿದ್ದಾರೆ. ದಿಲ್ಲಿಯ ಐಐಟಿಯ ಸುವರ್ಣ ಮಹೋತ್ಸವ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಂದ್ರಯಾನ 2 ಗೆ ಇಸ್ರೋದ ಯೋಜನೆಗಳು ಅಂತ್ಯವಾಗಿಲ್ಲ. ಸೂರ್ಯನ ಕುರಿತು ಅಧ್ಯಯನಕ್ಕಾಗಿ ಆದಿತ್ಯ ಎಲ್1 ಹಾಗೂ ಮಾನವ ಸಹಿತ ಅಂತರಿಕ್ಷಯಾನ ಯೋಜನೆಗಳಲ್ಲಿ ಹೆಚ್ಚಿನ ಕೆಲಸಗಳು ನಡೆಯುತ್ತಿವೆ. ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಶಕ್ತಿಶಾಲಿ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ತಲುಪಿಸುವ ಇನ್ನಷ್ಟು ಯೋಜನೆಗಳು ಮುಂದಿನ ದಿನದಲ್ಲಿ ಸಿದ್ಧವಾಗಲಿದೆ ಎಂದರು. ಎಸ್‌ಎಸ್‌ಎಲ್‌ವಿ (ಸಣ್ಣ ಪ್ರಮಾಣದ ಸ್ಯಾಟಲೈಟ್ ಲಾಂಚ್ ವೆಹಿಕಲ್) ಡಿಸೆಂಬರ್ ಅಥವಾ ಜನವರಿ ಆರಂಭದಲ್ಲಿ ತನ್ನ ಚೊಚ್ಚಲ ಬಾಹ್ಯಾಕಾಶ ಪ್ರಯಾಣ ನಡೆಸಲಿದೆ. 200 ಟನ್ ಸೆಮಿ ಕ್ರಯೋ ಎಂಜಿನ್‌ನ ಪರೀಕ್ಷೆ ಸದ್ಯದಲ್ಲೇ ನಡೆಯಲಿದೆ. NAVIC ಸಿಗ್ನಲ್‌ಗಳನ್ನು ಮೊಬೈಲ್ ಫೋನ್‌ಗೆ ಕಳುಹಿಸುವ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಶಿವನ್ ವಿವರಿಸಿದ್ದಾರೆ. ಇದರೊಂದಿಗೆ ಐಐಟಿ ದಿಲ್ಲಿಯಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ವಿಭಾಗ (ಎಸ್‌ಟಿಸಿ) ಆರಂಭಿಸುವ ನಿಟ್ಟಿನಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
from India & World News in Kannada | VK Polls https://ift.tt/34p5Kcm