ಮುಂಬಯಿ: ಅಂತರ್ ಶಾಲಾ ಕ್ರಿಕೆಟ್ ಟೂರ್ನಿಯೊಂದರಲ್ಲಿ ತಂಡವೊಂದು ಬರಿ ಏಳು ರನ್ನಿಗೆ ಆಲೌಟಾಗಿರುವ ಘಟನೆ ನಡೆದಿದೆ. ಹ್ಯಾರಿಸ್ ಶೀಲ್ಡ್ ಫಸ್ಟ್ ರೌಂಡ್ ನಾಕೌಟ್ ಟೂರ್ನಿಯಲ್ಲಿ ಅಂಧೇರಿ ಮೂಲದ ಚಿಲ್ಡ್ರನ್ಸ್ ವೆಲ್ಫೆರ್ ಸ್ಕೂಲ್ ಕೇವಲ ಏಳು ರನ್‌ಗಳಿಗೆ ಆಲೌಟ್ ಆಗಿದೆ. ಬೊರಿವಲಿಯಲ್ಲಿ ಸ್ವಾಮಿ ವಿವೇಕಾನಂದ ಇಂಟರ್‌ನ್ಯಾಷನಲ್ ಸ್ಕೂಲ್ (ಎಸ್‌ವಿಐಎಸ್) ವಿರುದ್ಧ ನಡೆದ ಪಂದ್ಯದಲ್ಲಿ ನಾಟಕೀಯ ರೀತಿಯಲ್ಲಿ ಕುಸಿತ ಕಂಡಿತು. ಇನ್ನು ಗಮನಾರ್ಹ ಸಂಗತಿಯೆಂದರೆ ಎಲ್ಲ ಬ್ಯಾಟ್ಸ್‌ಮನ್‌ಗಳು ಶೂನ್ಯಕ್ಕೆ ಔಟಾಗಿದ್ದರು. ಹಾಗಿದ್ದರೆ ಏಳು ರನ್‌ಗಳು ಎಲ್ಲಿಂದ ಬಂತು ಎಂಬ ಗೊಂದಲ ನಿಮ್ಮನ್ನು ಕಾಡಬಹುದು. ಹೌದು, ಎಲ್ಲ ರನ್‌ಗಳು ಇತರೆ ರನ್ ರೂಪದಲ್ಲಿ ದಾಖಲಾಗಿದ್ದವು. ಕೇವಲ ಆರು ಓವರ್ ಅಂತರದಲ್ಲಿ ಚಿಲ್ಡ್ರನ್ಸ್ ವೆಲ್ಫೆರ್ ಸ್ಕೂಲ್ ಸರ್ವಪತನವನ್ನು ಕಂಡಿತ್ತು. ಸ್ವಾಮಿ ವಿವೇಕಾನಂದ ಇಂಟರ್‌ನ್ಯಾಷನಲ್ ಸ್ಕೂಲ್ ತಂಡದ ವೇಗಿ ಅಲೋಕ್ ಪಾಲ್ ಕೇವಲ ಮೂರು ರನ್ ತೆತ್ತು ಆರು ವಿಕೆಟ್ ಕಬಳಿಸಿ ಮಾರಕ ದಾಳಿ ಸಂಘಟಿಸಿದರು. ಇವರಿಗೆ ತಕ್ಕ ಸಾಥ್ ನೀಡಿದ ನಾಯಕ ವರೋದ್ ವೇಜ್ ಮೂರು ರನ್ನಿಗೆ ಎರಡು ವಿಕೆಟ್ ಕಬಳಿಸಿದರು. ಉಳಿದ ಇಬ್ಬರು ಬ್ಯಾಟ್ಸ್‌ಮನ್‌ಗಳು ರನೌಟ್ ಆಗಿದ್ದರು. ಇಲ್ಲಿ ಮಗದೊಂದು ಗಮನಾರ್ಹ ಸಂಗತಿಯೆಂದರೆ ಬೊರಿವಲಿಯಲ್ಲಿ ಸ್ವಾಮಿ ವಿವೇಕಾನಂದ ಇಂಟರ್‌ನ್ಯಾಷನಲ್ ಸ್ಕೂಲ್ ತಂಡವು 754 ರನ್ ಅಂತರದಲ್ಲಿ ಪಂದ್ಯವನ್ನು ಗೆದ್ದಿದೆ. ಅಂತರ್ ಶಾಲಾ ಕ್ರಿಕೆಟ್ ಟೂರ್ನಿಯಲ್ಲಿ ದಾಖಲಾಗಿರುವ ಅತಿ ದೊಡ್ಡ ಗೆಲುವು ಇದಾಗಿದೆ. ಮೊದಲು ಬ್ಯಾಟಿಂಗ್ ನಡೆಸಿದ ಎಸ್‌ವಿಐಎಸ್ ತಂಡವು ಮೀತ್ ಮಯೇಕರ್ ಅಜೇಯ ತ್ರಿಶತಕದ (338*) ನೆರವಿನಿಂದ 39 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 761 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಕೇವಲ 134 ಎಸೆತಗಳನ್ನು ಎದುರಿಸಿದ ಮಯೇಕರ್ ಇನ್ನಿಂಗ್ಸ್‌ನಲ್ಲಿ 56 ಬೌಂಡರಿ ಹಾಗೂ ಏಳು ಭರ್ಜರಿ ಸಿಕ್ಸರ್‌ಗಳು ಸೇರಿದ್ದವು. ಮೂರು ತಾಸುಗಳ ನಿಗದಿತ ಅವಧಿಯಲ್ಲಿ ಓವರ್‌ಗಳ ಕೋಟಾ ಪೂರೈಸದ ಹಿನ್ನಲೆಯಲ್ಲಿ ಚಿಲ್ಡ್ರನ್ಸ್ ವೆಲ್ಫೆರ್ ಸ್ಕೂಲ್ ಮೇಲೆ 156 ರನ್‌ಗಳ ಪೆನಾಲ್ಟಿಯನ್ನು ಹೇರಲಾಗಿತ್ತು. ಅತ್ತ ಮಯೇಕರ್ ತ್ರಿಶತಕದ ಹೊರತಾಗಿ ಕೃಷ್ಣ ಪಾರ್ಟೆ (95) ಹಾಗೂ ಇಶಾನ್ ರಾಯ್ (67) ಮಿಂಚಿನ ಬ್ಯಾಟಿಂಗ್ ಪ್ರದರ್ಶಿಸಿದ್ದದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2qnOWnN