ಕೋಲ್ಕತಾ: ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಅಬ್ಬರಿಸಿದ ವೇಗದ ಬೌಲರ್‌ಗಳು ಬಾಂಗ್ಲಾ ಬ್ಯಾಟ್ಸ್‌ಮನ್‌ಗಳನ್ನು ಬೆಚ್ಚಿ ಬೀಳುವಂತೆ ಮಾಡಿದರು. ಗುಲಾಬಿ ಬಣ್ಣದ ಚೆಂಡು ಹೆಚ್ಚು ಪುಟಿದೇಳುವ ಮತ್ತು ನಿರೀಕ್ಷೆಗೂ ಮೀರಿದ ಸ್ವಿಂಗ್ ಪಡೆಯುವುದರ ಉತ್ತಮ ಲಾಭ ಪಡೆದ ಇಶಾಂತ್ ಶರ್ಮಾ, ಉಮೇಶ್ ಯಾದವ್ ಮತ್ತು ಮೊಹಮ್ಮದ್ ಶಮಿ ಪ್ರವಾಸಿ ಬ್ಯಾಟ್ಸ್‌ಮನ್‌ಗಳನ್ನು ಅಕ್ಷರಶಃ ಬೇಟೆಯಾಡಿದರು. ಅದ್ಭುತ ಬೌನ್ಸರ್‌ಗಳೊಂದಿಗೆ ಎದುರಾಳಿ ಬ್ಯಾಟ್ಸ್‌ಮನ್‌ಗಳ ಆತ್ಮವಿಶ್ವಾಸ ಅಡಗುವಂತೆ ಬೌಲಿಂದ್ ದಾಳಿ ಸಂಘಟಿಸಿದ ಭಾರತದ ಫಾಸ್ಟ್ ಬೌಲಿಂಗ್ ತ್ರಿವಳಿಗಳು ಸತತ ವಿಕೆಟ್ ಪಡೆದು 30.3 ಓವರ್‌ಗಳಲ್ಲಿ 106 ರನ್‌ಗಳಿಗೆ ಬಾಂಗ್ಲಾ ಪಡೆಯನ್ನು ಆಲ್‌ಔಟ್ ಮಾಡಿತು. ಈ ಮಧ್ಯೆ ಬಾಂಗ್ಲಾ ತಂಡ 12 ಬ್ಯಾಟ್ಸ್‌ಮನ್‌ಗಳೊಂದಿಗೆ ಆಡುವಂತಾಗಿದ್ದು ಮತ್ತೂ ವಿಶೇಷ. ಒಂದು ಹಂತದಲ್ಲಿ 6 ವಿಕೆಟ್ ಕಳೆದುಕೊಂಡು ಭೋಜನ ವಿರಾಮಕ್ಕೂ ಮೊದಲೇ ಆಲ್‌ಔಟ್ ಆಗುವ ಭೀತಿಯಲ್ಲಿದ್ದ ಬಾಂಗ್ಲಾ ತಂಡಕ್ಕೆ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಲಿಟನ್ ದಾಸ್ ಆಸರೆಯಾಗುವ ಪ್ರಯತ್ನ ನಡೆಸಿದರು. ಆದರೆ, ಈ ಹಂತದಲ್ಲಿ ದಾಳಿ ನಡೆಸುತ್ತಿದ್ದ ಮೊಹಮ್ಮದ್ ಶಮಿ, ಗಂಟೆಗೆ 140 ಕಿ.ಮೀ ವೇಗದಲ್ಲಿ ಬೌನ್ಸರ್ ಅಸ್ತ್ರಗಳನ್ನು ಪ್ರಯೋಗಿಸುತ್ತಿದ್ದರು. ಪರಿಣಾಮ 15 ರನ್ ಗಳಿಸಿದ್ದಾಗ ಲಿಟನ್ ದಾಸ್ ಅವರ ಹೆಲ್ಮೆಟ್‌ಗೆ ಮೊದಲ ಬಾರಿ ಶಮಿ ಬೌನ್ಸರ್ ಬಡಿದಿತ್ತು. ಕೂಡಲೇ ವೈದ್ಯರನ್ನು ಕರಿಸಿ ಪರಿಶೀಲನೆ ನಡೆಸಲಾಯಿತು ಬಳಿಕ ಆಟ ಮುಂದುವರಿಸಿದ ದಾಸ್ 27 ಎಸೆತಗಳಲ್ಲಿ 24 ರನ್‌ಗಳನ್ನು ಗಳಿಸಿದ್ದ ಸಂದರ್ಭದಲ್ಲಿ ಬೌನ್ಸರ್ ಪೆಟ್ಟಿನಿಂದಾದ ನೋವು ಹೆಚ್ಚಾದ ಕಾರಣಕ್ಕೆ ನಿವೃತ್ತಿ ಹೊಂದಿದರು. ಬಳಿಕ ಅವರ ಬದಲಾಗಿ ಆಗಿ ಆಲ್‌ರೌಂಡರ್ ಮಿರಾಜ್ ಆಡಬೇಕಾಯಿತು. ಇದರೊಂದಿಗೆ ಬಾಂಗ್ಲಾ ತಂಡ ತನ್ನ ಮೊದಲ ಇನಿಂಗ್ಸ್‌ನಲ್ಲಿ ಒಟ್ಟು 12 ಬ್ಯಾಟ್ಸ್‌ಮನ್‌ಗಳೊಟ್ಟಿಗೆ ಆಡುವಂತಾಯಿತು. ಕನ್ಕೂಷನ್ ಸಬ್‌ಸ್ಟಿಟ್ಯೂಟ್ ಏನಿದು? ಟೆಸ್ಟ್ ಪಂದ್ಯದ ವೇಳೆ ಆಟಗಾರನೊಬ್ಬ ಗಾಯಗೊಂಡ ಆಟದಲ್ಲಿ ಮುಂದುವರಿಯುವುದು ಸಾಧ್ಯವಾಗದೇ ಇದ್ದಂತಹ ಸಂದರ್ಭದಲ್ಲಿ ಆ ಆಟಗಾರನ ಬದಲಿಗೆ ಮತ್ತೊಬ್ಬ ಆಟಗಾರನನ್ನು ಆಡಿಸಬಹುದು. ಬದಲಿ ಆಟಗಾರ ಬ್ಯಾಟ್ ಮತ್ತು ಬೌಲ್ ಕೂಡ ಮಾಡಬಹುದಾಗಿದೆ. ಹೀಗಾಗಿ ಈ ಹೊಸ ಮಾದರಿಯ ಸಬ್‌ಸ್ಟಿಟ್ಯೂಟ್‌ಗೆ ಕನ್ಕೂಷನ್ ಸಬ್‌ಸ್ಟಿಟ್ಯೂಟ್ ಎಂದು ಕರೆಯಲಾಗುತ್ತದೆ. ಬಾಂಗ್ಲಾದ 2ನೇ ಆಟಗಾರನಿಗೆ ಪೆಟ್ಟು ಶಮಿ ಬೌನ್ಸರ್ ಅಸ್ತ್ರಗಳಿಗೆ ಬಾಂಗ್ಲಾ ಬ್ಯಾಟ್ಸ್‌ಮನ್‌ಗಳ ತಬ್ಬಿಬ್ಬಾಗಿದ್ದರು. ಮಧ್ಯಮ ಕ್ರಮಾಕದ ಬ್ಯಾಟ್ಸ್‌ಮನ್ ನಯೀಮ್ ಹಸನ್ ಅವರ ಹೆಲ್ಮೆಟ್‌ಗೂ ಕೂಡ ಎರಡು ಬಾರಿ ಚೆಂಡು ಅಪ್ಪಳಿಸಿತ್ತು. ಆದರೂ ಬ್ಯಾಟಿಂಗ್ ಮುಣದುವರಿಸಿದ ಬಲಗೈ ಬ್ಯಾಟ್ಸ್‌ಮನ್ 19 ರನ್‌ಗಳ ಕಾಣಿಕೆ ನೀಡಿದ್ದರು. ಆದರೆ, ಇನಿಂಗ್ಸ್ ಅಂತ್ಯದ ಬಳಿಕ ಅವರಿಂದ ಬೌಲಿಂಗ್ ಸಾಧ್ಯವಾಗದೇ ಇರುವ ಕಾರಣ 2ನೇ ಕನ್ಕೂಷನ್ ಸಬ್‌ಸ್ಟಿಟ್ಯೂಟ್ ನೀಡಲಾಯಿತು. ಕ್ರೀಡಾಸ್ಫೂರ್ತಿ ಮೆರೆದ ಟೀಮ್ ಇಂಡಿಯಾವಿಶೇಷವೆಂದರೆ ನಯೀಮ್ ಹಸನ್‌ಗೆ ಪೆಟ್ಟಾದಾಗ ಅವರನ್ನು ಪರಿಶೀಲಿಸಲು ಬಾಂಗ್ಲಾ ತಂಡದ ವೈದ್ಯಾಧಿಕಾರಿಗಳು ಲಭ್ಯರಿರಲಿಲ್ಲ. ಲಿಟನ್ ದಾಸ್ ಅವರ ತಪಾಸಣೆಯಲ್ಲಿ ಬಾಂಗ್ಲಾ ವೈದ್ಯಾಧಿಕಾರಿಗಳು ನಿರತರಾಗಿದ್ದ ಕಾರಣ ನಯೀಮ್‌ಗೆ ನೆರವು ಲಭ್ಯವಾಗುವುದು ತಡವಾಗುತ್ತಿತ್ತು. ಇದನ್ನು ಅತಿತ ಟೀಮ್ ಇಂಡಿಯಾ ಆಟಗಾರರು ತಮ್ಮ ವೈದ್ಯಾಧಿಕಾರಿಯನ್ನೇ ಬರಲು ಹೇಳಿ ಕ್ರೀಡಾ ಸ್ಫೂರ್ತಿ ಮೆರೆದರು. ಪರಿಶೀಲನೆ ನಂತರ ನಯೀಮ್ ಬ್ಯಾಟಿಂಗ್ ಮುಂದುವರಿಸಿದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/37tvFSi