ಹೊಸದಿಲ್ಲಿ: ಭಾರತದಿಂದ ಹೆಚ್ಚಿನ ಪ್ರಾಯೋಕತ್ವ ಪಡೆದಿರುವ ಅಬುಬಾದಿ ಟಿ10 ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನ ಕ್ರಿಕೆಟಿಗರು ಭಾಗವಹಿಸದಂತೆ ಪಾಕ್‌ನ ಸೆನೆಟರ್ ಕರೆ ನೀಡಿದ್ದಾರೆ. ಕಾಶ್ಮೀರದ ಹೋರಾಟಕ್ಕೆ ಬೆಂಬಲ ಸೂಚಿಸುವ ಸಲುವಾಗಿ ಭಾರತ ಜತೆಗಿನ ಎಲ್ಲ ಬಾಂಧವ್ಯವನ್ನು ಕೈಬಿಡುವಂತೆ ಕರೆ ನೀಡಲಾಗಿದೆ. ಟಿ20 ಕ್ರಿಕೆಟ್ ಲೀಗ್‌ನಲ್ಲಿ ಭಾಗವಹಿಸುತ್ತಿರುವ ಬಹುತೇಕ ಎಲ್ಲ ತಂಡಗಳಿಗೆ ಭಾರತೀಯ ಮೂಲದ ಉದ್ಯಮಿಗಳೇ ಮಾಲಿಕರಾಗಿದ್ದಾರೆ. ಹಾಗಾಗಿ ಭಾರತದಿಂದ ಪ್ರಾಯೋಜಿತ ಟೂರ್ನಿಯಲ್ಲಿ ಪಾಕ್ ಆಟಗಾರರು ಭಾಗವಹಿಸದಂತೆ ಪಿಟಿಐ ಸೆನೆಟರ್ ಆಗಿರುವ ಫೈಜಲ್ ಜಾವೇದ್ ಖಾನ್ ಆಹ್ವಾನ ನೀಡಿದ್ದಾರೆ. ಕೆಲವು ಸಮಯಗಳ ಹಿಂದೆಯಷ್ಟೇ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ 370ನೇ ವಿಧಿಯನ್ನು ಭಾರತ ರದ್ದುಗೊಳಿಸಿತ್ತು. ಭಾರತ ಸರಕಾರದ ನಿಯಮವನ್ನು ಖಂಡಿಸಿದ ಪಾಕಿಸ್ತಾನ, ಎಲ್ಲ ರೀತಿಯ ದ್ವಿಪಕ್ಷೀಯ ಬಾಂಧ್ಯವವನ್ನು ಕಡಿತುಕೊಂಡಿತ್ತು. ಇದೀಗ ಪಾಕಿಸ್ತಾನ ಸರಕಾರದ ಸೆನೆಟರ್, ಭಾರತ ಪ್ರಾಯೋಜಿತ ಟೂರ್ನಿಯಲ್ಲಿ ಭಾಗವಹಿಸದಂತೆ ಪಾಕ್ ಆಟಗಾರರಿಗೆ ಬಹಿರಂಗ ಕರೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಮಧ್ಯೆ ಪಾಕ್ ಸೆನೆಟರ್ ಹೇಳಿಕೆಗೆ ಅಲ್ಲಿನ ಕ್ರೀಡಾ ಪತ್ರಕರ್ತರಿಂದಲೇ ವಿರೋಧ ವ್ಯಕ್ತವಾಗುತ್ತಿದೆ. ಅಲ್ಲದೆ ಕ್ರೀಡೆಯನ್ನು ರಾಜಕೀಯಗೊಳಿಸಬಾರದು ಎಂಬ ಕೂಗು ಕೇಳಿ ಬಂದಿದೆ. ಕೆರೆಬಿಯನ್ ಪ್ರೀಮಿಯರ್ ಲೀಗ್ ಹಾಗೂ ದಕ್ಷಿಣ ಆಫ್ರಿಕಾ ಲೀಗ್‌ನಲ್ಲಿ ಪಾಕಿಸ್ತಾನ ಕ್ರಿಕೆಟಿಗರು ಭಾಗವಹಿಸುತ್ತಿದ್ದಾರೆ. ಅಲ್ಲೂ ಭಾರತೀಯ ಉದ್ಯಮಿಗಳು ಶೇರನ್ನು ಹೊಂದಿದ್ದು, ತಂಡದ ಮಾಲಿಕತ್ವವನ್ನು ಹೊಂದಿದ್ದಾರೆ. ಕೆರೆಬಿಯನ್ ಲೀಗ್‌ನಲ್ಲಿ ಶಾರೂಕ್ ಖಾನ್ ತಂಡವನ್ನು ಹೊಂದಿದ್ದಾರೆ. ಇದರ ಬದಲು ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು ಕ್ರಮವಾಗಿರಿಸಲು ಗಮನ ಹರಿಸಿ ಎಂದು ಕ್ರೀಡಾ ಪತ್ರಕರ್ತ ಮಿರ್ಜಾ ಇಕ್ಬಾಲ್ ಬೇಗ್ ಸಲಹೆ ಮಾಡಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/341plQ1