ಹೈದರಾಬಾದ್: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ () ರಾಷ್ಟ್ರೀಯ ದೂರಸ್ಥ ಸಂವೇದನಾ ಕೇಂದ್ರದ (ಎನ್‌ಆರ್‌ಎಸ್‌ಸಿ) ವಿಜ್ಞಾನಿಯೊಬ್ಬರು ಹೈದರಾಬಾದ್‌ನ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ನಗರದ ಹೃದಯ ಭಾಗದಲ್ಲಿರುವ ಅಮೀರ್ ಪೇಟೆಯ ಅನ್ನಪೂರ್ಣ ಅಪಾರ್ಟ್‌ಮೆಂಟ್‌ನಲ್ಲಿರುವ ಪ್ಲ್ಯಾಟ್‌ನಲ್ಲಿ ಸುರೇಶ್ (56) ಅವರ ಮೃತ ದೇಹ ಪತ್ತೆಯಾಗಿದ್ದು, ಪೊಲೀಸರು ಕೊಲೆ ಎಂದು ಶಂಕಿಸಿದ್ದಾರೆ. ಕೇರಳ ಮೂಲದ ಸುರೇಶ್ ಅವರು ಫ್ಲ್ಯಾಟ್‌ನಲ್ಲಿ ಒಂಟಿಯಾಗಿ ವಾಸವಿದ್ದರು. ಮಂಗಳವಾರ ಕಚೇರಿಗೆ ಗೈರು ಹಾಜರಾಗಿದ್ದ ಕಾರಣ ಸಹೋದ್ಯೋಗಿಗಳು ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರು. ಆದರೆ, ಸಂಪರ್ಕ ಸಾಧ್ಯವಾಗಿರಲಿಲ್ಲ. ಹೀಗಾಗಿ ಚೆನ್ನೈನಲ್ಲಿ ಬ್ಯಾಂಕ್ ಉದ್ಯೋಗಿಯಾಗಿ ಕೆಲಸ ಮಾಡುತ್ತಿರುವ ಅವರ ಪತ್ನಿ ಇಂದಿರಾ ಅವರನ್ನು ಸಂಪರ್ಕಿಸಿದ್ದರು. ಇಂದಿರಾ ಅವರು ಪತಿ ವಾಸವಿದ್ದ ಅಪಾರ್ಟ್‌ಮೆಂಟ್‌ನಲ್ಲೇ ವಾಸವಿರುವ ಸಂಬಂಧಿಕರನ್ನು ಸಂಪರ್ಕಿಸಿದಾಗ ಸುರೇಶ್ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಮೃತ ಸುರೇಶ್ ದೇಹದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿದ್ದು, ಅವರು ಕೊಲೆಯಾಗಿದ್ದಾರೆಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಸತ್ಯಾಸತ್ಯತೆ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ.
from India & World News in Kannada | VK Polls https://ift.tt/2pbeiEc