
ಜೊಹಾನ್ಸ್‌ಬರ್ಗ್: ಸತತ ಎರಡು ವರ್ಷಗಳಿಂದ ಮೂರಂಕಿ ವೈಯಕ್ತಿಕ ಮೊತ್ತ ದಾಖಲಿಸುವಲ್ಲಿ ವಿಫಲರಾಗಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಗೆ ಹೆಡ್ ಕೋಚ್ ಬೆಂಬಲ ವ್ಯಕ್ತಪಡಿಸಿದ್ದು, ತಂಡದಲ್ಲಿ ಅವರು ರೂಪಿಸಿರುವ ವಾತಾವರಣ ಅದ್ಭುತವಾಗಿದೆ ಎಂದು ಗುಣಗಾನ ಮಾಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಸೆಂಚೂರಿಯನ್ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಇದರ ಹೊರತಾಗಿಯೂ ಅವರು ಔಟ್ ಸೈಡ್ ದಿನ ಆಫ್ ಸ್ಪಂಪ್ ಮೇಲಿನ ಎಸೆತವನ್ನು ಅನಗತ್ಯವಾಗಿ ಆಡುವ ಮೂಲಕ ವಿಕೆಟ್ ಒಪ್ಪಿಸಿದ್ದರು. ವಿರಾಟ್ ಕೊಹ್ಲಿ ವೈಫಲ್ಯದ ಹೊರತಾಗಿಯೂ ಕೆ.ಎಲ್ ರಾಹುಲ್ ಶತಕ ಹಾಗೂ ವೇಗಿಗಳ ಮಾರಕ ಬೌಲಿಂಗ್ ದಾಳಿಯ ಸಹಾಯದಿಂದ ಟೀಮ್ ಇಂಡಿಯಾ ಮೊದಲನೇ ಟೆಸ್ಟ್ ಪಂದ್ಯದಲ್ಲಿ 113 ರನ್‌ಗಳಿಂದ ಗೆಲುವು ಪಡೆದಿತ್ತು. ಆ ಮೂಲಕ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 1-0 ಮುನ್ನಡೆ ಪಡೆಯಿತು. ಮೊದಲನೇ ಟೆಸ್ಟ್ ಗೆಲುವಿನ ವಿಶ್ವಾದಲ್ಲಿರುವ ಭಾರತ ತಂಡ ವಂಡರರ್ಸ್ ಕ್ರೀಡಾಂಗಣದಲ್ಲಿ ಇಂದಿನಿಂದ(ಸೋಮವಾರ) ಆರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಈ ಹಿನ್ನೆಲೆಯಲ್ಲಿ ಪಂದ್ಯ ಪೂರ್ವ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಡ್ ಕೋಚ್ ರಾಹುಲ್ ದ್ರಾವಿಡ್, ನಾಯಕ ವಿರಾಟ್ ಕೊಹ್ಲಿ ಬಗ್ಗೆ ಸಕಾರಾತ್ಮಕ ಅಂಶಗಳನ್ನು ಬಹಿರಂಗಪಡಿಸಿದರು. ಜೋಹನ್ಸ್‌ಬರ್ಗ್‌ನಲ್ಲಿ ಎರಡನೇ ಪಂದ್ಯ ಗೆದ್ದರೆ, ಹರಿಣಗಳ ನಾಡಿನಲ್ಲಿ ಮೊಟ್ಟ ಮೊದಲ ಟೆಸ್ಟ್ ಸರಣಿ ಗೆದ್ದ ಸಾಧನೆಗೆ ಭಾರತ ತಂಡ ಭಾಜನವಾಗಲಿದೆ. ಆ ಮೂಲಕ ವಿರಾಟ್ ಕೊಹ್ಲಿ ತಮ್ಮ ನಾಯಕತ್ವದಲ್ಲಿ ಮತ್ತೊಂದು ದಾಖಲೆಯನ್ನು ಬರೆಯಲಿದ್ದಾರೆ. ಈ ಹಿನ್ನೆಲೆಯಲ್ಲಿ ಎರಡನೇ ಟೆಸ್ಟ್ ಹೆಚ್ಚಿನ ಕುತೂಹಲ ಕೆರಳಿಸಿದೆ. ಇತ್ತೀಚೆಗಷ್ಟೇ ಸೀಮಿತ ಓವರ್‌ಗಳ ತಂಡದ ನಾಯಕತ್ವ ಕಳೆದುಕೊಂಡಿದ್ದ ವಿರಾಟ್ ಕೊಹ್ಲಿ ಹಾಗೂ ಬಿಸಿಸಿಐ ನಡುವೆ ಭಿನ್ನಾಭಿಪ್ರಾಯ ಏರ್ಪಟ್ಟಿತ್ತು. ಇತ್ತೀಚೆಗಷ್ಟೇ ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್ ಶರ್ಮಾ ಸುದ್ದಿಗೋಷ್ಠಿ ನಡೆಸಿ ಎಲ್ಲಾ ಅನುಮಾನಗಳಿಗೂ ಸ್ಪಷ್ಟನೆ ನೀಡಿದ್ದರು. ಆದರೆ, ಇದು ಕೊಹ್ಲಿಯ ಅಸಮಾಧಾನಕ್ಕೆ ಕಾರಣವಾಗಿದೆ. "ಕಳೆದ 20 ದಿನಗಳಿಂದ ವಿರಾಟ್ ಕೊಹ್ಲಿ ಅದ್ಭುತವಾಗಿ ಕಾಣುತ್ತಿದ್ದಾರೆ. ಅವರ ಸಿದ್ದತೆ ಹಾಗೂ ತಯಾರಿಯ ಹಾದಿ ಅತ್ಯುತ್ತಮವಾಗಿದೆ. ತಮ್ಮ ಮೇಲೆ ಎದ್ದಿರುವ ಹಲವು ಗುಮಾನಿಗಳ ಹೊರತಾಗಿಯೂ ಅವರು ತಂಡದ ಆಟಗಾರರೊಂದಿಗಿನ ಸಂಪರ್ಕದ ಹಾದಿ ಅಮೋಘವಾಗಿದೆ," ಎಂದು ರಾಹುಲ್ ದ್ರಾವಿಡ್ ನಾಯಕನಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ತಂಡದಲ್ಲಿ ಪ್ರಸ್ತುತ ಎದ್ದಿರುವ ಸಮಸ್ಯೆ ಮೇಲೆ ರಾಹುಲ್ ದ್ರಾವಿಡ್ ಇದೇ ವೇಳೆ ಬೆಳಕು ಚೆಲ್ಲಿದರು. ಓವರ್ ರೇಟ್ ವಿಚಾರದಲ್ಲಿ ಟೀಮ್ ಇಂಡಿಯಾ ಸುಧಾರಿಸುವುದು ಬಾಕಿ ಇದೆ ಎಂದಿದ್ದಾರೆ. ತಾಯ್ನಾಡಿನಲ್ಲಿ ಆಡುವಾಗ ಈ ಸಮಸ್ಯೆ ಬರುವುದಿಲ್ಲ. ಆದರೆ ವಿದೇಶಿ ಟೆಸ್ಟ್‌ಗಳಲ್ಲಿ ಈ ಸಮಸ್ಯೆ ನಿಭಾಯಿಸುವ ಬಗ್ಗೆ ಕೆಲಸ ಮಾಡಬೇಕಿದೆ ಎಂದಿದ್ದಾರೆ. "ಐಸಿಸಿ ಇಲ್ಲಿ ಹೊಸತನ್ನು ಪ್ರಯೋಗ ಮಾಡುತ್ತಿದೆ. ಇದು ಕಠಿಣ ನಿರ್ಧಾರ ಆದರೂ ಕೂಡ ಆಟದ ವೇಗ ಹೆಚ್ಚಿಸುವ ನಿಟ್ಟಿನಲ್ಲಿ ಈ ನಿಯಮ ತಂದಿರುವುದನ್ನು ಒಪ್ಪಿಕೊಳ್ಳಬಹುದು. ಅಂದಹಾಗೆ ನಿಯಮಗಳು ಎಲ್ಲರಿಗೂ ಒಂದೇ ಆಗಿದೆ. ಆದರೆ, ನಾವು ನಾಲ್ಕು ವೇಗಿಗಳನ್ನು ಆಡಿಸದ ಸಂದರ್ಭದಲ್ಲಿ ಓವರ್ ರೇಟ್ ಕಾಯ್ದುಕೊಳ್ಳಲು ಕಷ್ಟವಾಗುತ್ತದೆ. ಈ ವಿಚಾರದಲ್ಲಿ ಭಾರತ ತಂಡ ಸುಧಾರಿಸುವುದು ಬಾಕಿ ಇದೆ. ಅಂಕ ಕಳೆದುಕೊಂಡಿರುವುದು ಬಹಳಾ ಬೇಸರ ತಂದಿದೆ. ಅದು ಓವರ್ ರೇಟ್ ಕಾರಣ ಅಂಕ ಕಳೆದುಕೊಂಡಿರುವುದು ಬೇಸರವನ್ನು ಹೆಚ್ಚುವಂತೆ ಮಾಡಿದೆ," ಎಂದು ಹೇಳಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3zjwr2I