ಲಖನೌ: ಉತ್ತರ ಪ್ರದೇಶದಲ್ಲಿ ಬಿಜೆಪಿಯ ಮಿತ್ರ ಪಕ್ಷವಾಗಿರುವ ಅಪ್ನಾ ದಳದ ಶಾಸಕ ಚೌಧರಿ ಅಮರ್ ಸಿಂಗ್ ಗುರುವಾರ ಸಂಜೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ವಿಧಾನಸಭೆ ಚುನಾವಣೆಗೆ ಬೆರಳೆಣಿಕೆಯ ವಾರಗಳಿರುವಾಗ ಸಿಎಂ ಯೋಗಿ ಆದಿತ್ಯನಾಥ್ ತಂಡದಿಂದ ಹೊರಬಿದ್ದ ಶಾಸಕರ ಸಂಖ್ಯೆ ಕೇವಲ 3 ದಿನಗಳಲ್ಲಿ 11ಕ್ಕೆ ಏರಿಕೆಯಾಗಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮಿರುವ ಇವರನ್ನೂ ಬುಟ್ಟಿಗೆ ಹಾಕಿಕೊಂಡು ಮತ್ತಷ್ಟು ಬಲಶಾಲಿಯಾಗಿದ್ದಾರೆ. “ಈ ಸರ್ಕಾರ ಸುಳ್ಳುಗಾರ… ಯಾವುದೇ ಅಭಿವೃದ್ಧಿಯನ್ನೂ ಮಾಡಿಲ್ಲ. ನಾನು ಇಂದು ಅಖಿಲೇಶ್ ಯಾದವ್ ಅವರನ್ನು ಭೇಟಿ ಮಾಡಿದ್ದೇನೆ, ಅವರೊಂದಿಗೆ ಸೇರಿಕೊಳ್ಳುತ್ತೇನೆ. ಶೀಘ್ರದಲ್ಲೇ ಹೆಚ್ಚಿನ ಜನರು ನಮ್ಮೊಂದಿಗೆ ಸೇರಿಕೊಳ್ಳುತ್ತಾರೆ,” ಎಂದು ಹೇಳಿ ಚೌಧರಿ ಅಮರ್ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸತತ ಎರಡನೇ ಅವಧಿಗೆ ದೇಶದ ಅತೀ ದೊಡ್ಡ ರಾಜ್ಯವನ್ನು ಉಳಿಸಿಕೊಳ್ಳಲು ಬಿಜೆಪಿ ಶತ ಪ್ರಯತ್ನ ನಡೆಸುತ್ತಿದ್ದು, ಈಗ ನಡೆಯುತ್ತಿರುವ ಬೆಳವಣಿಗೆಗಳು ರಾಷ್ಟ್ರೀಯ ಪಕ್ಷಕ್ಕೆ ಎಚ್ಚರಿಕೆಯ ಗಂಟೆಯಾಗಿ ಪರಿಣಮಿಸಿದೆ. ಮಂಗಳವಾರದ ಬಳಿಕ ಇಲ್ಲಿಯವರೆಗೆ ಮೂವರು ಸಚಿವರು ಸೇರಿ 10 ಬಿಜೆಪಿ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮಂಗಳವಾರ ಪ್ರಭಾವಿ ರಾಜಕಾರಣಿ ಎಸ್‌ಪಿ ಮೌರ್ಯ ರಾಜೀನಾಮೆಯೊಂದಿಗೆ ಈ ಪರ್ವ ಆರಂಭವಾಗಿತ್ತು. ಅಂದೇ ಅವರ ಬೆನ್ನಿಗೆ ಭಗ್ವತಿ ಸಾಗರ್, ರೌಶಾನ್ ಲಾಲ್ ವರ್ಮಾ ಮತ್ತು ಬ್ರಿಜೇಶ್ ಪ್ರಜಾಪತಿ ಶಾಸಕ ಸ್ಥಾನ ತೊರೆದಿದ್ದರು. ಈ ಮೂಲಕ ರಾಜೀನಾಮೆ ಪರ್ವಕ್ಕೆ ವೇಗ ನೀಡಿದ್ದರು. ಅಲ್ಲಿಂದ ಆರಂಭವಾದ ಈ ವಲಸೆ ಸರಣಿ ಗುರುವಾರ ರಾತ್ರಿಯಾದರೂ ನಿಲ್ಲುವಂತೆ ಕಾಣಿಸುತ್ತಿಲ್ಲ. ನಿನ್ನೆ ಅಂದರೆ ಬುಧವಾರ ಇನ್ನೋರ್ವ ಸಹಾಯಕ ಸಚಿವ ದಾರಾ ಸಿಂಗ್ ಚೌಹಾಣ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇವರ ಬೆನ್ನಿಗೆ ಅವತಾರ್ ಸಿಂಗ್ ಭಂದನ ಕೂಡ ರಾಜೀನಾಮೆ ನೀಡಿದ್ದರು. ಭಂದನ ಅವರು ಅಖಿಲೇಶ್ ಯಾದವ್ ಪಕ್ಷದ ಮಿತ್ರ ಪಕ್ಷ ಆರ್‌ಎಲ್‌ಡಿಯತ್ತ ಮುಖ ಮಾಡಿದ್ದಾರೆ. ಇಂದು ಇನ್ನೋರ್ವ ಉತ್ತರ ಪ್ರದೇಶ ಸಚಿವ ಧರಂ ಸಿಂಗ್ ಸೈನಿ ಯೋಗಿ ಆದಿತ್ಯನಾಥ್‌ಗೆ ತಮ್ಮ ರಾಜೀನಾಮೆ ಪತ್ರ ಕಳುಹಿಸಿದ್ದರು. ಅವರ ಜತೆಗೆ ಶಾಸಕರಾದ ವಿನಯ್ ಶಾಕ್ಯ, ಮುಕೇಶ್ ವರ್ಮಾ ಮತ್ತು ಬಾಲ ಅವಸ್ಥಿಯೂ ಪಕ್ಷ ತೊರೆದಿದ್ದಾರೆ. ಇದೀಗ ಚೌಧರಿ ಅಮರ್ ಸಿಂಗ್ ರಾಜೀನಾಮೆಯೊಂದಿಗೆ ಗುರುವಾರ ಒಂದೇ ದಿನ ಐದು ಶಾಸಕರು ಯೋಗಿ ತಂಡ ತೊರೆದಂತಾಗಿದೆ. ಸಚಿವ ಸಂಪುಟದಿಂದ ಹೊರ ಬಂದಿರುವ ಎಲ್ಲಾ ಮೂವರು ಸಚಿವರೂ ಹಿಂದುಳಿದ ವರ್ಗಗಳಿಗೆ ಸೇರಿದವರು ಹಾಗೂ ಪ್ರಭಾವಿ ನಾಯಕರು ಎಂಬುದು ವಿಶೇಷ. ಸರಕಾರ ಸಮುದಾಯ ಹಿತಾಸಕ್ತಿಗಳನ್ನು ಕಡೆಗಣಿಸಿದೆ ಎಂದು ಇವರುಗಳು ದೂರಿದ್ದು, ಚುನಾವಣೆಯಲ್ಲಿ ಇದನ್ನೇ ಪ್ರಮುಖ ವಿಷಯವಾಗಿ ಪ್ರಸ್ತಾಪಿಸುವ ಸಾಧ್ಯತೆ ಇದೆ.
ಈ ಸಂಬಂಧ ಖಾಸಗಿ ಆಂಗ್ಲ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಧರಂ ಸಿಂಗ್ ಸೈನಿ, “1.5 ವರ್ಷಗಳ ಹಿಂದೆ ನಾವೆಲ್ಲರೂ ರಾಜೀನಾಮೆ ನೀಡಲು ನಿರ್ಧರಿಸಿದ್ದೆವು. ದೀನದಲಿತರನ್ನು ಸರಕಾರ ನಡೆಸಿಕೊಳ್ಳುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ 140 ಶಾಸಕರು ಸರ್ಕಾರದ ವಿರುದ್ಧ ಧರಣಿ ನಡೆಸಿದಾಗಲೇ ಈ ನಿರ್ಧಾರಕ್ಕೆ ಬಂದಿದ್ದೆವು. ಆಗ ಅವರೆಲ್ಲರ ಧ್ವನಿಯನ್ನು ಹತ್ತಿಕ್ಕಲಾಯಿತು. ಆದರೆ ಅಂದೇ ಇದಕ್ಕೆಲ್ಲಾ ನಾವು ಉತ್ತರ ನೀಡಬೇಕು ಎಂದು ತೀರ್ಮಾನಿಸಿದೆವು. ಸರಿಯಾದ ಸಮಯಕ್ಕಾಗಿ ನಾವೆಲ್ಲರೂ ಕಾಯುತ್ತಿದ್ದವು. ಅದಕ್ಕಾಗಿಯೇ ಪ್ರತಿದಿನ ಒಬ್ಬೊಬ್ಬರು ಸಚಿವರು ರಾಜೀನಾಮೆ ನೀಡುತ್ತಿದ್ದಾರೆ. ಇದು ಜನವರಿ 20ರವರೆಗೆ ಮುಂದುವರಿಯಲಿದೆ,” ಎಂದಿದ್ದಾರೆ. ಈ ಮೂಲಕ ಬಿಜೆಪಿಗೆ ಭಾರೀ ಆಘಾತಕಾರಿ ಸುದ್ದಿಯನ್ನೇ ಅವರು ನೀಡಿದ್ದಾರೆ.
ಅಷ್ಟೇ ಅಲ್ಲದೆ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಜತೆ ಕೈಜೋಡಿಸಿರುವ ಸ್ವಾಮಿ ಪ್ರಸಾದ್ ಮೌರ್ಯ, ತಾವು ಯಾರ ಜತೆ ಹೋಗುತ್ತೇನೋ ಆ ಪಕ್ಷ ಗೆಲ್ಲುತ್ತದೆ ಎಂದಿದ್ದಾರೆ. ಮೊದಲಿಗೆ ಮಾಯಾವತಿಯವರ ಬಹುಜನ ಸಮಾಜವಾದಿ ಪಕ್ಷದ ಜತೆಗಿದ್ದಾಗ ಬಿಎಸ್‌ಪಿ ಗೆದ್ದಿತು. ನಂತರ ಬಿಜೆಪಿಗೆ ಬಂದಾಗ ಬಿಜೆಪಿ ಗೆಲುವು ಸಾಧಿಸಿತು. ಈಗ ಎಸ್‌ಪಿಗೆ ಬಂದಿದ್ದು ಅಖಿಲೇಶ್ ಯಾದವ್ ಕೂಡ ಗೆಲ್ಲಲಿದ್ದಾರೆ ಎಂದು ಘೋಷಿಸಿದ್ದಾರೆ. ಆದರೆ ಈ ರೀತಿ ಆತುರದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಹಿನ್ನಡೆ ಉಂಟು ಮಾಡಲಿವೆ ಎಂದು ಬಿಜೆಪಿ ಹೇಳಿದೆ. “ಸ್ವಾಮಿ ಪ್ರಸಾದ್ ಮೌರ್ಯ ಯಾಕೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದಿಲ್ಲ. ಆದರೆ ನಾನು ಅವರಿಗೆ, ಪಕ್ಷ ತೊರೆಯಬೇಡಿ ಮಾತಾಡೋಣ ಎಂದು ಮನವಿ ಮಾಡಿದ್ದೆ. ತರಾತುರಿಯಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಹಿನ್ನಡೆ ಉಂಟು ಮಾಡಬಹುದು,” ಎಂದು ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಎಚ್ಚರಿಕೆ ನೀಡಿದ್ದಾರೆ. ಕಳೆದ ವರ್ಷ ಇನ್ನೋರ್ವ ಪ್ರಭಾವಿ ಒಬಿಸಿ ನಾಯಕ ಹಾಗೂ ಬಿಜೆಪಿ ಮಿತ್ರಪಕ್ಷನಾಗಿದ್ದ ಓಂ ಪ್ರಕಾಶ್ ರಾಜ್‌ಭರ್ ಸಮಾಜವಾದಿ ಪಕ್ಷದ ಜತೆ ಕೈ ಜೋಡಿಸಿದ್ದರು. ಇದೀಗ ಸಾಲು ಸಾಲು ಒಬಿಸಿ ನಾಯಕರು ಕಮಲ ಪಾಳಯದಿಂದ ದೂರ ಸರಿಯುತ್ತಿದ್ದು, ಬಿಜೆಪಿಯನ್ನು ಚಿಂತೆಗೀಡು ಮಾಡಿದೆ.
from India & World News in Kannada | VK Polls https://ift.tt/3npc7rY