ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ವಾಯು ಮಾಲಿನ್ಯ ಅಪಾಯ ಸ್ಥಿತಿ ತಲುಪಿ ವೈದ್ಯಕೀಯ ತುರ್ತು ಪರಿಸ್ಥಿತಿ ಘೋಷಿಸಲಾಗಿದ್ದರೂ ಭಾರತ ಮತ್ತು ನಡುವಣ ಟಿ20 ಕ್ರಿಕೆಟ್ ಸರಣಿಯ ಮೊದಲ ಪಂದ್ಯಕ್ಕೆ ಯಾವುದೇ ಅಡಚಣೆಯಾಗಿಲ್ಲ. ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಭಾನುವಾರ ಟಾಸ್ ಗೆದ್ದ ಬಾಂಗ್ಲಾದೇಶ ತಂಡದ ನಾಯಕ ಮಹ್ಮೂದುಲ್ಲ ರಿಯಾಝ್ ಮೊದಲು ಬೌಲಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಸ್ಟಾರ್ ಆಲ್‌ರೌಂಡರ್ ಶಕಿಬ್ ಅಲ್ ಹಸನ್, ಮ್ಯಾಚ್ ಫಿಕ್ಸಿಂಗ್ ಪ್ರಯತ್ನವನ್ನು ಐಸಿಸಿ ಗಮನಕ್ಕೆ ತರದೇ ಮಾಡಿಕೊಂಡ ಎಡವಟ್ಟಿಗೆ 2 ವರ್ಷಗಳ ಕಠಿಣ ನಿಷೇಧ ಶಿಕ್ಷೆಗೆ ಗುರಿಯಾದರು. ಇದರಿಂದಾಗಿ ಬಾಂಗ್ಲಾ ತಂಡ ತನ್ನ ಸ್ಟಾರ್ ಪವರ್ ಇಲ್ಲದೆ ಭಾರತದ ಸವಾಲು ಎದುರಿಸಲಿದೆ. ವಾಯು ಮಾಲಿನ್ಯದ ನಡುವೆಯೂ ಪಂದ್ಯ ವೀಕ್ಷಣಗೆ ಪ್ರೇಕ್ಷಕರು ಕ್ರೀಡಾಂಗಣದ ಪೂರ್ತಿ ಭರ್ತಿಯಾಗಿದ್ದು ವಿಶೇಷವಾಗಿತ್ತು. ಶಿವಂ ದುಬೇ ಪದಾರ್ಪಣೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ತಂಡದ ಸ್ಟಾರ್ ಆಲ್‌ರೌಂಡರ್ ಶಿವಂ ದುಬೇ ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಿದ್ದಾರೆ. ಬಾಂಗ್ಲಾ ವಿರುದ್ಧದ ಸರಣಿಯ ಮೊದಲ ಟಿ20 ಪಂದ್ಯದಲ್ಲಿ ಶಿವಂ ದುಬೇ ತಂಡದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಗಿಟ್ಟಿಸಿದ್ದಾರೆ. ಪಂದ್ಯಕ್ಕೂ ಮುನ್ನ ಶಿವಂ ದುಬೇ ನೆಟ್ಸ್‌ನಲ್ಲಿ ಅಭ್ಯಾಸ ನಡೆಸುವ ವೇಳೆ ಭರ್ಜರಿಯಾಗಿ ಬ್ಯಾಟ್ ಬೀಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅವರ ಈ ವಿಡಿಯೊ ಕಂಡ ಅಭಿಮಾನಿಗಳು ಜೂನಿಯರ್ ಯುವರಾಜ್ ಸಿಂಗ್ ಎಂದೇ ಕರೆಯಲಾರಂಭಿಸಿದ್ದಾರೆ. ಶಿವಂ ಭಾರತ ತಂಡದ ಪರ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ 82ನೇ ಆಟಗಾರನಾಗಿದ್ದಾರೆ. ಬಾಂಗ್ಲಾ ತಂಡದಲ್ಲೂ ಮೊಹಮ್ಮದ್ ನಯೀಮ್ ಪದಾರ್ಪಣೆ ಮಾಡಿದ್ದಾರೆ. ಪ್ಲೇಯಿಂಗ್ 11 ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್‌ಕೀಪರ್), ವಾಷಿಂಗ್ಟನ್ ಸುಂದರ್, ಕೃಣಾಲ್ ಪಾಂಡ್ಯ, ಯುಜ್ವೇಂದರ್ ಚಹಲ್, ದೀಪಕ್ ಚಹರ್, ಖಲೀಲ್ ಅಹ್ಮದ್, ಶಿವಂ ದುಬೇ. ಬಾಂಗ್ಲಾದೇಶ ಪ್ಲೇಯಿಂಗ್ 11 ಮಹ್ಮೂದುಲ್ಲ ರಿಯಾದ್ (ನಾಯಕ), ಲಿಟನ್ ದಾಸ್, ಸೌಮ್ಯ ಸರ್ಕಾರ್, ಮೊಹಮ್ಮದ್ ನಯಿಮ್, ಮುಷ್ಫಿಕರ್ ರಹೀಮ್, ಆಸಿಫ್ ಹುಸೇನ್, ಮೊಸಾದೆಕ್ ಹುಸೇನ್, ಅಮಿನುಲ್ ಇಸ್ಲಾಮ್, ಮುಸ್ತಾಫಿಜುರ್ ರೆಹಮಾನ್, ಶಫಿಯುಲ್ ಇಸ್ಲಾಮ್, ಅಲ್ ಅಮಿನ್ ಹುಸೇನ್.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/36wEpGL