- ಪ್ರಮೋದ ಹರಿಕಾಂತ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಅನರ್ಹರಾಗಿ ಈಗ ಬಿಜೆಪಿ ಅಭ್ಯರ್ಥಿಯಾಗಿರುವ ರಮೇಶ ಜಾರಕಿಹೊಳಿ 2013, 2018ರ ಸಾರ್ವತ್ರಿಕ ಚುನಾವಣೆಯಲ್ಲೂ ಚುನಾವಣೆ ಆಯೋಗಕ್ಕೆ ಸುಳ್ಳು ಮಾಹಿತಿ ನೀಡಿರುವ ಅನುಮಾನ ವ್ಯಕ್ತವಾಗಿದೆ. ಉಪಚುನಾವಣೆ ಸ್ಪರ್ಧಿಸುವ ಸಲುವಾಗಿ ರಮೇಶ ಜಾರಕಿಹೊಳಿ ಅವರು ನಾಲ್ಕು ದಿನಗಳ ಹಿಂದೆ ಸರಕಾರಕ್ಕೆ ಬರೋಬ್ಬರಿ 76 ಲಕ್ಷ ರೂ. ಬಾಕಿ ಪಾವತಿಸಿದ್ದಾರೆ. ಸಚಿವ ಸ್ಥಾನ ಕಳೆದುಕೊಂಡ ನಂತರವೂ ಸರಕಾರಿ ವಸತಿ ಸಂಕೀರ್ಣ ಬಳಸಿದ ಬಾಡಿಗೆ ಅದು. ಒಂದೇ ವರ್ಷದ (2018 ಮೇ- 2019 ನವೆಂಬರ್) ಅವಧಿಗೆ ಇಷ್ಟೊಂದು ದೊಡ್ಡ ಮೊತ್ತದ ಬಾಡಿಗೆ ಪಾವತಿಸಿದ್ದು ಅನುಮಾನಕ್ಕೆ ಕಾರಣವಾಗಿದೆ. ಸೋಮವಾರ ಗೋಕಾಕ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿರುವ ರಮೇಶ ಜಾರಕಿಹೊಳಿ ತಮ್ಮ ದೃಢೀಕರಣ ಪತ್ರದಲ್ಲಿ ಈ ಮಾಹಿತಿ ತಿಳಿಸಿದ್ದಾರೆ. ಬೆಂಗಳೂರಿನ ಸ್ಯಾಂಕಿ ರಸ್ತೆಯ ಸಚಿವರ ವಸತಿ ಸಂಕಿರಣದ ನಂಬರ್ 4,7ರ ಬಾಡಿಗೆ 75,79,585 ರೂ.ಗಳನ್ನು ನ.16ಕ್ಕೆ ಪಾವತಿಸಿದ್ದಾಗಿ ಉಲ್ಲೇಖಿಸಿದ್ದಾರೆ. ಜತೆಗೆ ವಿದ್ಯುತ್ ಬಿಲ್ 14 ಸಾವಿರ ರೂ., ನೀರಿನ ಕರ 23 ಸಾವಿರ ರೂ.ಗಳನ್ನು ನ.14ಕ್ಕೆ ಭರಿಸಿದ್ದಾಗಿ ಹೇಳಿದ್ದಾರೆ. ವಸತಿ ಬಾಡಿಗೆ ಮಾಹಿತಿ ಇರುವ ಅವರ ಅಫಿಡವಿಟ್ ಅಸಲಿಗೆ ಈ ಸರಕಾರಿ ವಸತಿ ಸಂಕಿರಣ ಸಚಿವರಿಗೆ ಉಚಿತ. ಶಾಸಕರಾಗಿದ್ದಾಗಲೂ ವಸತಿ ಸಂಕಿರಣ ಬಳಸಿದರೆ ಬಾಡಿಗೆ ಕಟ್ಟಬೇಕಾಗುತ್ತದೆ. 1999ರಿಂದ ಶಾಸಕರಾಗಿರುವ ರಮೇಶ ಜಾರಕಿಹೊಳಿ 2013ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರದ ಕೊನೆಯ ಎರಡೂವರೆ ವರ್ಷ ಮತ್ತು ಮೈತ್ರಿ ಸರಕಾರದಲ್ಲಿ ಸುಮಾರು ಒಂದು ವರ್ಷ ಸಚಿವರಾಗಿದ್ದರು. ನಂತರ ಅನರ್ಹರಾಗಿದ್ದಾರೆ. ನಿಯಮ ಪ್ರಕಾರ ಚುನಾವಣೆ ಸ್ಪರ್ಧಿಸುವ ಅಭ್ಯರ್ಥಿ ಸರಕಾರದ ಯಾವುದೇ ಬಾಕಿ ಉಳಿಸಿಕೊಂಡಿರಬಾರದು. ಅದರಂತೆ 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಸರಕಾರಕ್ಕೆ ಯಾವುದೇ ಕಟ್ಟಡದ ಬಾಡಿಗೆ ಬಾಕಿ ಇಲ್ಲ ಎಂದು ಅವರು ದೃಢೀಕರಣ ನೀಡಿದ್ದಾರೆ. ನಂತರ ಸಚಿವರಾಗಿದ್ದರಿಂದ ಸರಕಾರಿ ವಸತಿ ಸಂಕಿರಣದ ಬಾಡಿಗೆ ಕಟ್ಟುವ ಪ್ರಸಂಗವೇ ಬರುವುದಿಲ್ಲ. ಬಂದರೂ ಬಾಡಿಗೆ ಮೊತ್ತ ಅರ್ಧ ಕೋಟಿ ರೂ. ದಾಟಲು ಸಾಧ್ಯವಿಲ್ಲ. ''ಹಳೆಯ ಬಾಕಿ ಇದ್ದಾಗಲೇ ಇಷ್ಟೊಂದು ದೊಡ್ಡ ಮೊತ್ತದ ಬಾಡಿಗೆ ಆಗಲು ಸಾಧ್ಯ. 2013, 2018ರ ಚುನಾವಣೆಯಲ್ಲಿ ಈ ಮಾಹಿತಿ ಮುಚ್ಚಿಡಲಾಗಿದೆ. ಇಂಥ ಅನೇಕ ಶಾಸಕರು ರಾಜ್ಯದಲ್ಲಿದ್ದಾರೆ. ಅದೆಲ್ಲಪರಿಶೀಲನೆ ಆಗಬೇಕು'' ಎನ್ನುತ್ತಾರೆ ಮಾಜಿ ಸಭಾಪತಿ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ. 8.55 ಕೋಟಿ ತೆರಿಗೆ ಬಾಕಿ ರಮೇಶ ಜಾರಕಿಹೊಳಿ ಮತ್ತು ಅವರ ಪತ್ನಿ ಜಯಶ್ರೀ ಜಾರಕಿಹೊಳಿ ಕಳೆದ ಒಂದು ವರ್ಷದಿಂದ ಬರೋಬ್ಬರಿ 8.55 ಕೋಟಿ ರೂ. ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. 2018ರಲ್ಲಿ ದಂಪತಿಯ ಒಟ್ಟೂ ತೆರಿಗೆ ಬಾಕಿ 6.36 ಕೋಟಿ ರೂ. ಇತ್ತು. ಈ ವರ್ಷ ಅದು 8.55 ಕೋಟಿ ರೂ.ಗೆ ಏರಿದೆ. ಅದರಲ್ಲಿ ರಮೇಶ ಜಾರಕಿಹೊಳಿ ಹೆಸರಿನಲ್ಲಿ 5.99 ಕೋಟಿ ರೂ. ಪತ್ನಿ ಹೆಸರಿನಲ್ಲಿ 2.56 ಕೋಟಿ ರೂ. ತೆರಿಗೆ ಬಾಕಿ ಇದೆ. 2018ರ ಸಾರ್ವತ್ರಿಕ ಚುನಾವಣೆಗೂ ಮುನ್ನ ರಮೇಶ ಜಾರಕಿಹೊಳಿ ಅವರ ಆಸ್ತಿ ಮೇಲೆ ಗೋವಾದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದರು. ಆಗ ತೆರಿಗೆ ಬಾಕಿ ಪತ್ತೆಯಾಗಿತ್ತು. ತೆರಿಗೆ ಬಗ್ಗೆ ಗೋವಾದ ಪಣಜಿಯ ಆದಾಯ ತೆರಿಗೆ ಆಯುಕ್ತ ಕಚೇರಿಯಲ್ಲಿ ಈ ಪ್ರಕರಣ ಬಾಕಿ ಇದೆ ಎಂದು ರಮೇಶ ಜಾರಕಿಹೊಳಿ ನಾಮಪತ್ರದ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.
from India & World News in Kannada | VK Polls https://ift.tt/37kaQc1