ಬೆಂಗಳೂರು: ರಾಜ್ಯದ ಅಧೀನ ನ್ಯಾಯಾಲಯ ಕಲಾಪಗಳನ್ನು ನೇರ ಪ್ರಸಾರ ಮಾಡಲು ಶೀಘ್ರವೇ ತಾಂತ್ರಿಕ ನೆರವು ಸೇರಿದಂತೆ ಅಗತ್ಯ ಮೂಲ ಸೌಕರ್ಯ ಒದಗಿಸಬೇಕು ಎಂದು ಹೈಕೋರ್ಟ್ ಸೋಮವಾರ ಸರಕಾರಕ್ಕೆ ನಿರ್ದೇಶನ ನೀಡಿದೆ. ಸುಪ್ರೀಂಕೋರ್ಟ್‌ನ ನಿರ್ದೇಶನದಂತೆ ನ್ಯಾಯಾಲಯಗಳಲ್ಲಿ ಇ-ಫೈಲಿಂಗ್ ಕಡ್ಡಾಯ ಜಾರಿ ಮತ್ತು ಕಲಾಪದ ಲೈವ್ ಸ್ಟ್ರೀಮಿಂಗ್ ಗೆ ಅಗತ್ಯ ನಿಯಮ ರೂಪಿಸಬೇಕೆಂದು ಕೋರಿ ವಕೀಲ ದಿಲ್ರಾಜ್ ರೋಹಿತ್ ಸಿಕ್ವೇರಾ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮತ್ತು ಲೀಗಲ್ ಟ್ರಾನ್ಸ್ ಕ್ರಿಪ್ಷನ್ ಒದಗಿಸಲು ಕೋರಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಗಳ ಕುರಿತು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ವಾದ ಪ್ರತಿವಾದದ ನಂತರ ಅರ್ಜಿಗಳನ್ನು ವಿಲೇವಾರಿ ಮಾಡಿದ ನ್ಯಾಯಪೀಠ ‘ಹೈಕೋರ್ಟ್ ನೇರ ಪ್ರಸಾರಕ್ಕೆ ಸಂಬಂಧಿಸಿದ ಅರ್ಜಿದಾರರ ಮನವಿ ಈಗಾಗಲೇ ಜಾರಿಗೆ ಬಂದಿದೆ. ಹಾಗೆಯೇ, ಅಧೀನ ಕೋರ್ಟ್‌ಗಳ ಕಲಾಪದ ನೇರ ಪ್ರಸಾರವನ್ನು ಹಂತ ಹಂತವಾಗಿ ನೇರ ಪ್ರಸಾರ ಮಾಡಲಾಗುವುದು. ಅದಕ್ಕಾಗಿ ರಾಜ್ಯ ಸರಕಾರವು ಅಗತ್ಯ ಮೂಲ ಸೌಕರ್ಯ ಕಲ್ಪಿಸಿಕೊಡಬೇಕು’ ಎಂದು ಹೇಳಿತು. ‘ರಾಜ್ಯದ ಅಧೀನ ನ್ಯಾಯಾಲಯಗಳ ಕಲಾಪ ಲೈವ್ ಸ್ಟ್ರೀಮಿಂಗ್ ಸಂಬಂಧ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಪ್ರಸ್ತಾವನೆಯನ್ನು ಆದ್ಯತೆ ಮೇಲೆ ಪರಿಗಣಿಸಬೇಕು. ಕಾನೂನು ಪ್ರಕಾರ ಅದಕ್ಕೆ ಶೀಘ್ರ ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕು’ ಎಂದು ನ್ಯಾಯಪೀಠ ನಿರ್ದೇಶನ ನೀಡಿತು. ಹೈಕೋರ್ಟ್ ಕಲಾಪ ನೇರ ಪ್ರಸಾರಕ್ಕೆ ಸಂಬಂಧಿಸಿದ 'ಕರ್ನಾಟಕ ರೂಲ್ಸ್ ಆನ್ ಲೈವ್ ಸ್ಟ್ರೀಮಿಂಗ್ ಆ್ಯಂಡ್ ರೆಕಾರ್ಡಿಂಗ್ ಆಫ್ ಕೋರ್ಟ್ ಪ್ರೊಸಿಡಿಂಗ್ಸ್’ ನಿಯಮಗಳನ್ನು ಈಗಾಗಲೇ ಅನುಷ್ಠಾನಗೊಳಿಸಲಾಗಿದೆ. 2021ರ ಸೆ.17ರಂದು ನಿಯಮಗಳ ಅಧಿಸೂಚನೆ ಹೊರಡಿಸಲಾಗಿದ್ದು, 2021ರ ಡಿ.30ರಂದು ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ. ಇ-ಫೈಲಿಂಗ್‌ಗೆ ಸಂಬಂಧ ಕರ್ನಾಟಕ ಎಲೆಕ್ಟ್ರಾನಿಕ್ ಫೈಲಿಂಗ್ (ಇ-ಫೈಲಿಂಗ್) ಅಧಿನಿಯಮಗಳನ್ನು ಸಹ 2021ರ 2021ರ ಮೇ 1ರಂದು ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿದೆ. ಅದೇ ರೀತಿ ಲೀಗಲ್ ಟ್ರಾನ್ಸ್ ಕ್ರಿಪ್ಷನ್ ಲೈವ್ ಸ್ಟ್ರೀಮಿಂಗ್ ವ್ಯವಸ್ಥೆ ಒದಗಿಸಲಾಗಿದೆ’ ಎಂದು ಆದೇಶಿಸಿತು. ಕಾರವಾರ ವಾಣಿಜ್ಯ ಬಂದರು ಪ್ರದೇಶದಲ್ಲಿ ಕಾನೂನು ಬಾಹಿರವಾಗಿ ಅಭಿವೃದ್ಧಿ ಚಟುವಟಿಕೆ ನಡೆಸಲಾಗುತ್ತಿದೆ ಎಂದು ಆಕ್ಷೇಪಿಸಿ ಬೈತಕೊಲ್ ಬಂದರು ನಿರಾಶ್ರಿತರ ಯಾಂತ್ರೀಕೃತ ದೋಣಿ ಮೀನುಗಾರರ ಸಹಕಾರ ಸಂಘ ನಿಯಮಿತ ಹಾಗೂ ಉತ್ತರ ಕನ್ನಡ ಜಿಲ್ಲಾ ಮೀನುಗಾರರ ಸಂಘ ಸಲ್ಲಿಸಿದ್ದ ಎರಡು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್ ಮೊದಲ ಬಾರಿಗೆ 2021ರ ಮೇ 5ರಂದು ಯೂಟ್ಯೂಬ್‌ನಲ್ಲಿ ನೇರ ಪ್ರಸಾರ ಮಾಡಿತ್ತು. ಆ ಮೂಲಕ ಕರ್ನಾಟಕ ಇಡೀ ದೇಶಕ್ಕೆ ಮಾದರಿಯಾಗಿತ್ತು.
from India & World News in Kannada | VK Polls https://ift.tt/31KUmfd