ತಂಬಾಕು ಉತ್ಪನ್ನಗಳ ಮೇಲೆ ಏಕಕಾಲದಲ್ಲಿ 3 ತೆರಿಗೆ; ಕೇಂದ್ರದ ನಿಲುವನ್ನು ಎತ್ತಿಹಿಡಿದ ಹೈಕೋರ್ಟ್‌

ಬೆಂಗಳೂರು: ತಂಬಾಕು ಉತ್ಪನ್ನಗಳ ಮೇಲೆ ಏಕಕಾಲದಲ್ಲಿ ಜಿಎಸ್ಟಿ, ಅಬಕಾರಿ ಸುಂಕ ಮತ್ತು ರಾಷ್ಟ್ರೀಯ ವಿಪತ್ತು ಸಂಕಷ್ಟ ಸುಂಕ ವಿಧಿಸುವ ಕೇಂದ್ರ ಸರಕಾರದ ಕಾನೂನನ್ನು ಹೈಕೋರ್ಟ್‌ ಎತ್ತಿಹಿಡಿದಿದೆ. ವಿ.ಎಸ್‌.ಪ್ರಾಡಕ್ಟ್ಸ್‌ ಸೇರಿ ಹಲವು ತಂಬಾಕು ಉತ್ಪನ್ನಗಳ ಉತ್ಪಾದಕರು 2019ರಲ್ಲಿ ಸಲ್ಲಿಸಿದ್ದ ಅರ್ಜಿಗಳ ಮನವಿ ಆಲಿಸಿದ ನ್ಯಾ.ಎಸ್‌ ಸುನಿಲ್‌ ದತ್‌ ಯಾದವ್‌ ಅವರಿದ್ದ ಏಕಸದಸ್ಯ ಪೀಠ, ಈ ತೀರ್ಪು ನೀಡಿದೆ. ‘ ಭಾರತೀಯ ಸಂವಿಧಾನ ಕಲಂ 254 'ಎ'ಗೆ ತಿದ್ದುಪಡಿ ಮಾಡಿ ಸರಕು ಮತ್ತು ಸೇವಾ ತೆರಿಗೆ ಆಡಳಿತ ಕಾನೂನುಗಳನ್ನು ಮಾಡುವ ಅಧಿಕಾರ ಹೊಂದಿದ್ದರೂ 246ನೇ ವಿಧಿಯಡಿ ತಂಬಾಕು ಮತ್ತು ತಂಬಾಕು ಉತ್ಪನ್ನಗಳೂ ಸೇರಿದಂತೆ ಹಲವು ಉತ್ಪನ್ನಗಳ ಮೇಲೆ ಅಬಕಾರಿ ಸುಂಕಗಳನ್ನು ವಿಧಿಸುವ ಅಧಿಕಾರ ಹೊಂದಿದೆ’ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಕೇಂದ್ರದ ಕಾನೂನುಗಳನ್ನು ಎತ್ತಿ ಹಿಡಿಯುವ ಮೂಲಕ ಅರ್ಜಿಗಳನ್ನು ವಜಾಗೊಳಿಸಿದೆ. ಇದರಿಂದಾಗಿ ತಂಬಾಕು ಕಂಪನಿಗಳಿಗೆ ಕಾನೂನು ಹೋರಾಟದಲ್ಲಿ ತೀವ್ರ ಹಿನ್ನಡೆಯಾಗಿದೆ. ‘ಕಲಂ 246 'ಎ' ಪರಿಚಯಸಲ್ಪಟ್ಟಿದ್ದರೂ, 246 ಕೇಂದ್ರ ಸರಕಾರಕ್ಕೆ ಅಧಿಕಾರದ ಮೂಲವಾಗಿದೆ. ಹಾಗಾಗಿ, ಕಾನೂನುಗಳು ಸಿಂಧುವಾಗುತ್ತವೆ. ಶಾಸಕಾಂಗ ಆದಾಯ ಸಂಗ್ರಹಕ್ಕೆ ಯಾವ ವಿಧಾನಗಳನ್ನು ಅನುಸರಿಸಬೇಕೆಂಬ ನಿರ್ಧಾರವನ್ನು ಕೈಗೊಳ್ಳುತ್ತದೆ. ವಿತ್ತೀಯ ನೀತಿಗಳನ್ನು ಆಧರಿಸಿದ ಶಾಸನಗಳ ಪ್ರಶ್ನೆ ಎದುರಾದಾಗ ಕೋರ್ಟ್‌ಗಳು ಸೂಕ್ಷ್ಮವಾಗಿ ಎಚ್ಚರ ವಹಿಸಬೇಕು. ಆತುರದಲ್ಲಿ ತೀರ್ಪು ನೀಡಬಾರದು’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಕಂಪನಿಗಳು ಜಿಎಸ್‌ಟಿ ಜತೆಗೆ ತಂಬಾಕು ಮತ್ತು ಇತರ ಉತ್ಪನ್ನಗಳ ಮೇಲೆ ಅಬಕಾರಿ ಸುಂಕ ಮುಂದುವರಿಸಲು ಅವಕಾಶ ನೀಡಿದ್ದ 2017ರ ಜಿಎಸ್‌ಟಿ ಕಾಯಿದೆ ಸೆಕ್ಷನ್‌ 174ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿದ್ದವು. ಅಲ್ಲದೆ, 2001ರ ಹಣಕಾಸು ಕಾಯಿದೆ ಸೆಕ್ಷನ್‌ 136ರನ್ವಯ ತಂಬಾಕು ಉತ್ಪನ್ನಗಳ ಮೇಲೆ ಎನ್‌ಸಿಸಿಡಿ ಶುಲ್ಕ ಹೇರುವುದನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದವು.


from India & World News in Kannada | VK Polls https://ift.tt/3qg6ONa

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...