ಧಾರವಾಡ: ಬರುವ ಐದು ರಾಜ್ಯಗಳ ಚುನಾವಣೆಯಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆಗಬಹುದು. ಆದರೆ, 2023ಕ್ಕೆ ರಾಜ್ಯದಲ್ಲಿ ಬಿಜೆಪಿ ಹೊಸ ಶಕ್ತಿಯೊಂದಿಗೆ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ಸೋಮವಾರ ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನೇನು ರಾಜಕೀಯ ಜ್ಯೋತಿಷಿ ಅಲ್ಲ. ಕಾಕತಾಳೀಯ ಎಂಬಂತೆ ನಾನು ಹೇಳಿದ್ದು ಕೆಲ ಸಂದರ್ಭಗಳಲ್ಲಿ ನಿಜವಾಗುತ್ತದೆ’ ಎಂದರು. ಬಸನ ಗೌಡ ಪಾಟೀಲ್ ಯತ್ನಾಳ್ ಅವರಿಗೆ ಸಿಎಂ ಸ್ಥಾನ ನೀಡಬೇಕೆಂಬ ಸ್ವಾಮೀಜಿಗಳ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ವಾಜಪೇಯಿ ಆಡಳಿತದಲ್ಲಿ ನಾನು ಮಂತ್ರಿ ಆಗಿದ್ದೆ. ನನ್ನಷ್ಟು ಯೋಗ್ಯತೆ, ಅರ್ಹತೆ ಬಿಜೆಪಿಯಲ್ಲಿ ಯಾರಿಗಿದೆ?’ ಎಂದು ಪ್ರಶ್ನಿಸಿದರು. ‘ಸಚಿವ ಸಂಪುಟದಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡಿದ್ದಕ್ಕಾಗಿ ವಾಜಪೇಯಿ ನನಗೆ ಪತ್ರ ಕೊಟ್ಟಿದ್ದಾರೆ. ಆದರೆ, ದುರ್ದೈವ ಅಂದರೆ, ರಾಜಕಾರಣದಲ್ಲಿ ನೇರವಾಗಿ ಮಾತನಾಡಬಾರದು. ಇಲ್ಲಿ ಚಮಚಾಗಿರಿ ಮಾಡಬೇಕು. ಆದರೆ, ನಾನದನ್ನು ಮಾಡೋದಿಲ್ಲ. ಹೀಗಾಗಿ ಹಿಂದೆ ಉಳಿದಿದ್ದೇನೆ’ ಎಂದರು. ಸಿಎಂ ಮೀಸಲು ಪರ:‘ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೊಡಬೇಕು ಎಂಬುದು ಸಿಎಂ ಬೊಮ್ಮಾಯಿ ಅವರ ಮನಸ್ಸಿನಲ್ಲೂ ಇದೆ ಎಂದ ಯತ್ನಾಳ್, ನಮ್ಮ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಕೊಡಿ ಎಂದು ನಾವು ಕೇಳಿದ್ದೇವೆ. ಯಾರಿಗೂ ಬೆದರಿಕೆ ಹಾಕಿಲ್ಲ. ಮೀಸಲಾತಿ ಕೊಡುವ ನಿಟ್ಟಿನಲ್ಲಿ ಬೊಮ್ಮಾಯಿ ಕೆಲಸ ಮಾಡುತ್ತಿದ್ದಾರೆ. ಬಜೆಟ್ ಪೂರ್ವದಲ್ಲಿ ಅವರು ನಮ್ಮ ಬೇಡಿಕೆ ಈಡೇರಿಸುವ ಭರವಸೆ ಇದೆ’ ಎಂದರು. ಇನ್ನು ‘ಶಾಸಕ ಅರವಿಂದ ಬೆಲ್ಲದ್ ಸಚಿವರಾಗಲು ಅರ್ಹತೆ ಹೊಂದಿದ್ದಾರೆ. ನಾನು ಕೇಳುತ್ತಿರುವುದು ಎಲ್ಲ ಸಮುದಾಯಗಳಿಗೆ ನ್ಯಾಯ ಮಾತ್ರ. ಅದು ಸಿಕ್ಕರೆ ಮಾತ್ರ ನಾನು ಸಚಿವ ಸಂಪುಟ ಸೇರುತ್ತೇನೆ’ ಎಂದು ಯತ್ನಾಳ್ ಸ್ಪಷ್ಟಪಡಿಸಿದರು.
from India & World News in Kannada | VK Polls https://ift.tt/3tfNuls