ಎಮ್ಮಿಗನೂರು: ಎಮ್ಮಿಗನೂರು, ನೆಲ್ಲುಡಿ, ಬಳ್ಳಾಪುರ, ಶ್ರೀರಾಮಚಂದ್ರಪುರ ಕ್ಯಾಂಪ್, ಕಿಡಿಕಿಡಿ ಕ್ಯಾಂಪ್ ಭಾಗದಲ್ಲಿ ಬಿತ್ತನೆ ಮಾಡಿದ್ದ ಹೈಬ್ರಿಡ್ ಜೋಳದ ಕಟಾವು ಮುಗಿದಿದ್ದು, ಕಳೆದ ವರ್ಷಕ್ಕಿಂತ ಈ ವರ್ಷ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ. ಆದರೆ, ಇಳುವರಿ ಕುಸಿತವಾದ ಕಾರಣ ರೈತರು ಕಂಗಾಲಾಗಿದ್ದಾರೆ. ಈ ಭಾಗದಲ್ಲಿ ಕಳೆದ 20 ವರ್ಷಗಳಿಂದ ಒಂದು ಎಕರೆಗೆ ಸರಾಸರಿ 25 ರಿಂದ 32 ಕ್ವಿಂಟಲ್ ಇಳುವರಿ ಬರುತ್ತಿತ್ತು. ಆದರೆ, ಪ್ರಸಕ್ತ ಸಾಲಿನಲ್ಲಿ ಎಕರೆಗೆ 13 ರಿಂದ 18 ಕ್ವಿಂಟಲ್ ಇಳುವರಿ ಬಂದಿದೆ. ಸದ್ಯ ಮಾರುಕಟ್ಟೆಯಲ್ಲಿ ಕ್ವಿಂಟಲ್ ಜೋಳಕ್ಕೆ 1800 ರಿಂದ 2000 ರೂ. ದರವಿದೆ. ಆದರೆ ಅತಿಯಾದ ಮಳೆ, ಮೋಡ ಮುಸುಕಿದ ವಾತಾವರಣದಿಂದಾಗಿ ಈ ಬಾರಿ ಕಾಳು ಕಟ್ಟುವ ಹಂತದಲ್ಲಿ ಸುಂಕ ಉದುರಿದ್ದರಿಂದ ಇಳುವರಿ ಕುಸಿತವಾಗಿದೆ ಎಂದು ರೈತರು ನೋವು ತೋಡಿಕೊಳ್ಳುತ್ತಾರೆ. ಮಳೆಯಾಶ್ರಿತ ಭೂಮಿ ಹಾಗೂ ಪಂಪ್‌ಸೆಟ್‌ನ ಆಧರಿತ ಕೃಷಿ ಭೂಮಿಯಲ್ಲಿ ರೈತರು ನಾನಾ ತಳಿಯ ಜೋಳವನ್ನು ಕಳೆದ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಬಿತ್ತನೆ ಮಾಡಿದ್ದರು. ಸುಮಾರು 3 ರಿಂದ 4 ಸಾವಿರ ಎಕರೆಯಲ್ಲಿ ಬಿತ್ತನೆ ಮಾಡಲಾಗಿತ್ತು. ಹವಾಮಾನ ವೈಪರೀತ್ಯದ ಮಧ್ಯೆಯೂ ಬೆಳೆ ಉತ್ತಮವಾಗಿ ಬೆಳೆದಿತ್ತು. ಆದರೆ ಇಳುವರಿ ಕುಸಿತದಿಂದಾಗಿ ರೈತರು ತೊಂದರೆ ಅನುಭವಿಸುವಂತಾಗಿದೆ. ರೈತರು ಕಳೆದ 15 ದಿನಗಳಿಂದ ಜೋಳ ಕೊಯ್ಲು ಕಣದಲ್ಲಿ ಕಾಳು ಮಾಡುವ ಸಿದ್ಧತೆಯಲ್ಲಿ ನಿರತರಾಗಿದ್ದಾರೆ. ಸರಕಾರ ಬೆಂಬಲ ಬೆಲೆಯಡಿ ಒಬ್ಬ ರೈತರಿಂದ 20 ಕ್ವಿಂಟಲ್ ಖರೀದಿಸುವ ಷರತ್ತು ವಿಧಿಸಿದ್ದು, ಇದು ರೈತರನ್ನು ಚಿಂತೆಗೀಡು ಮಾಡಿದೆ. ಕಳೆದ ವರ್ಷದಂತೆ ಈ ವರ್ಷವೂ ರೈತರು ಬೆಳೆದ ಎಲ್ಲಾ ಜೋಳವನ್ನು ಬೆಂಬಲ ಬೆಲೆಯಲ್ಲಿ ಖರೀದಿಸಬೇಕು ಎಂಬುದು ರೈತರ ಒತ್ತಾಯವಾಗಿದೆ. ನಾನಾ ರೋಗ, ರುಜಿನುಗಳಿಂದ ಬೆಳೆಯನ್ನು ಕಾಪಾಡಲು ಪ್ರತಿ ಎಕರೆಗೆ 20 ರಿಂದ 25 ಸಾವಿರ ರೂ. ಖರ್ಚು ಮಾಡಲಾಗಿದೆ. ಆದರೆ ಈಗ , ಬೆಂಬಲ ಬೆಲೆಯಡಿ 20 ಕ್ವಿಂಟಲ್ ಮಾತ್ರ ಖರೀದಿಗೆ ಅವಕಾಶ ಕೊಟ್ಟಿರುವುದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ‘ಎಮ್ಮಿಗನೂರು ಸುತ್ತಮುತ್ತಲಿನ ಪ್ರದೇಶದ ಭೂಮಿಯಲ್ಲಿ 20 ವರ್ಷಗಳಿಂದ ಹೈಬ್ರಿಡ್ ಜೋಳ ಉತ್ತಮ ಇಳುವರಿ ಕೊಡುತ್ತಿತ್ತು. ಆದರೆ ಈ ಬಾರಿ ಇಳುವರಿ ಕುಸಿತವಾಗಿದ್ದು, ಆರ್ಥಿಕವಾಗಿ ತೊಂದರೆ ಅನುಭವಿಸುವಂತಾಗಿದೆ’ ಎನ್ನುತ್ತಾರೆ ರೈತ ನಾಗರಾಜು.
from India & World News in Kannada | VK Polls https://ift.tt/3q9TBFJ