ಬೆಂಗಳೂರು: ಕೊರೊನಾ ನಿಯಂತ್ರಿಸಲು 2022ರ ಜ. 4 ರಂದು ಜಾರಿಗೊಳಿಸಿರುವ ಪ್ರಮಾಣೀಕೃತ ಕಾರ್ಯಸೂಚಿ ಜಾರಿಯಲ್ಲಿ ಇರುವ ತನಕ ಯಾವುದೇ ರ್‍ಯಾಲಿ, ಧರಣಿ, ಪ್ರತಿಭಟನೆ ಅಥವಾ ರಾಜಕೀಯ ಸಮಾವೇಶಕ್ಕೆ ಅನುಮತಿ ನೀಡಬಾರದು ಎಂದು ಸರಕಾರಕ್ಕೆ ಹೈಕೋರ್ಟ್ ಕಟ್ಟಾಜ್ಞೆ ವಿಧಿಸಿದೆ. ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್‌ನ ಪಾದಯಾತ್ರೆ ನಿರ್ಬಂಧ ಕೋರಿದ್ದ ಬೆಂಗಳೂರಿನ ತಿಂಡ್ಲುವಾಸಿ ಎ.ವಿ. ನಾಗೇಂದ್ರ ಪ್ರಸಾದ್ ಸಲ್ಲಿಸಿದ್ದ ಪಿಐಎಲ್ ಅನ್ನು ನ್ಯಾಯಪೀಠ ಶುಕ್ರವಾರ ವಿಲೇವಾರಿ ಮಾಡಿತು. ಅರ್ಜಿ ಕುರಿತು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾ.ಸೂರಜ್ ಗೋವಿಂದರಾಜ್ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಸರಕಾರ ಮತ್ತು ಕೆಪಿಸಿಸಿ ಹೇಳಿಕೆ ದಾಖಲಿಸಿಕೊಂಡ ಪೀಠ ‘ಜ. 12 ರಂದು ಕೋರ್ಟ್ ಹೊರಡಿಸಿದ ಆದೇಶ ಪರಿಗಣಿಸಿ ರಾಮನಗರ ಸೇರಿ ಪಾದಯಾತ್ರೆ ಸಾಗುವ ಮಾರ್ಗದಲ್ಲಿ ಅಂತರ ಜಿಲ್ಲಾ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಪಾದಯಾತ್ರೆ ನಿಷೇಧ ಆದೇಶ ಕಟ್ಟುನಿಟ್ಟಿನ ಜಾರಿಗೆ ಎಲ್ಲಾ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಆದೇಶಿಸಲಾಗಿತ್ತು. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಸಾರಿಗೆ ಆಯುಕ್ತರಿಗೂ ಸೂಚಿಸಲಾಗಿತ್ತೆಂದು ಸರಕಾರ ಮಾಹಿತಿ ನೀಡಿದೆ. ಕೆಪಿಸಿಸಿ ಕೂಡ ಸ್ವಯಂ ಪ್ರೇರಿತವಾಗಿ ಪಾದಯಾತ್ರೆ ಅಮಾನತುಪಡಿಸಿದೆ. ಹಾಗಾಗಿ, ಅರ್ಜಿ ವಿಚಾರಣೆ ಅಗತ್ಯವಿಲ್ಲ’ ಎಂದು ಆದೇಶಿಸಿ ಅರ್ಜಿ ಇತ್ಯರ್ಥಪಡಿಸಿದೆ. ಕೊರೊನಾ ವೇಳೆ ಧರಣಿ, ಪ್ರತಿಭಟನೆ, ಮೆರವಣಿಗೆ ನಡೆಸಬಾರದೆಂದು ನಿರ್ದೇಶಿಸಿ ಜ. 4 ರಂದು ಹೊರಡಿಸಿರುವ ಎಸ್‌ಒಪಿ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಎಸ್‌ಒಪಿ ಜಾರಿಯಲ್ಲಿ ಇರುವವರೆಗೂ ರಾಜ್ಯಾದ್ಯಂತ ರ್‍ಯಾಲಿ, ಧರಣಿ ಅಥವಾ ರಾಜಕೀಯ ಪಕ್ಷದ ಸಮಾವೇಶಕ್ಕೆ ಅನುಮತಿ ನೀಡಬಾರದು ಎಂದೂ ಸರಕಾರಕ್ಕೆ ನಿರ್ದೇಶಿಸಿತು.
from India & World News in Kannada | VK Polls https://ift.tt/3rk3JuZ