: ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಸಂಗೊಳ್ಳಿ ರಾಯಣ್ಣ ಅರ್ಬನ್ ಕೋ - ಆಪ್ ಸೊಸೈಟಿ ಅಧ್ಯಕ್ಷ ಆನಂದ್ ಅಪ್ಪುಗೋಳ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ)ದ ಅಧಿಕಾರಿಗಳು ಬಂಧಿಸಿದ್ದಾರೆ. ಗುರುವಾರ ಸಂಜೆ ಬೆಳಗಾವಿಗೆ ಆಗಮಿಸಿದ್ದ ಅಧಿಕಾರಿಗಳ ತಂಡ ಅಪ್ಪುಗೋಳ ಅವರನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಿ ನಂತರ ವಶಕ್ಕೆ ಪಡೆದಿದೆ. ಅಪ್ಪುಗೋಳ ಮಾಲೀಕತ್ವದ ಸೊಸೈಟಿ ಗಳಲ್ಲಿ ಗ್ರಾಹಕರಿಗೆ 250 ಕೋಟಿ ರೂ.ಗೂ ಅಧಿಕ ಮೊತ್ತದ ಠೇವಣಿ ವಂಚನೆ ಹಿನ್ನೆಲೆಯಲ್ಲಿ ಆನಂದ ಅಪ್ಪುಗೋಳ, ಪ್ರೇಮಾ ಅಪ್ಪುಗೋಳ ಹಾಗೂ ಮುಖ್ಯ ವ್ಯವಸ್ಥಾಪಕರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಈಚೆಗಷ್ಟೆ ಆರೋಪಿಗಳಿಗೆ ಜಾಮೀನು ದೊರೆತಿತ್ತು. ಸದ್ಯ ತನಿಖೆ ನಡೆಸುತ್ತಿರುವ ಇಡಿ ಅವರನ್ನು ಮತ್ತೆ ಬಂಧಿಸಿದೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಹಾಗೂ ನಿರ್ಮಾಪಕರಾಗಿರುವ ಆನಂದ ಅಪ್ಪುಗೋಳ್ ಮೇಲೆ ಸಹಕಾರಿ ಬ್ಯಾಂಕ್‌ನಲ್ಲಿ ಗ್ರಾಹಕರಿಗೆ ಸುಮಾರು 250 ಕೋಟಿ ರೂ. ವಂಚನೆ ಮಾಡಿರುವ ಆರೋಪವಿದ್ದು, ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆ ಅಡಿ ಜಾರಿ ನಿರ್ದೇಶನಾಲಯದಲ್ಲಿ ಪ್ರಕರಣ ದಾಖಲಾಗಿತ್ತು. ಗ್ರಾಹಕರಿಂದ ಠೇವಣಿಯಾಗಿ ಪಡೆದ ಕೋಟ್ಯಂತರ ರೂಪಾಯಿಯನ್ನು ವಂಚಿಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆಯನ್ನು ಜಾರಿ ನಿರ್ದೇಶನಾಲಯ ನಡೆಸುತ್ತಿದೆ. 2020ರಲ್ಲಿ ಆನಂದ ಅಪ್ಪುಗೋಳ್ ಒಡೆತನದಲ್ಲಿದ್ದ 31.35 ಕೋಟಿ ರೂ. ಮೌಲ್ಯದ ಆಸ್ತಿಯನ್ನು ತನ್ನ ಸುಪರ್ದಿಗೆ ಪಡೆದಿರುವುದಾಗಿ ಇಡಿ ತಿಳಿಸಿತ್ತು. ಅಪ್ಪುಗೋಳ್ ಅವರ ಹನುಮಾನ್ ನಗರದಲ್ಲಿನ ಬಂಗಲೆ, ಬಾಕ್ಸೈಟ್ ರಸ್ತೆಯಲ್ಲಿನ ಜಾಗ, ತಾಲ್ಲೂಕಿನ ಬಿ. ಕೆ. ಬಾಳೇಕುಂದ್ರಿಯಲ್ಲಿನ ಮನೆ ಮತ್ತು ನೆಹರೂ ನಗರದಲ್ಲಿನ ಕಚೇರಿ ಹಾಗೂ ಅವರ ಹೆಸರಿನಲ್ಲಿನ ಬ್ಯಾಂಕ್ ಖಾತೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಈ ಕುರಿತು ಬೆಳಗಾವಿಯ ಖಡೇ ಬಜಾರ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ಪ್ರಕರಣ ದಾಖಲಾಗಿತ್ತು. ಆನಂದ ಅಪ್ಪಗೋಳ ಸೇರಿದಂತೆ ಇನ್ನು 15 ಜನರ ಮೇಲೆ ಐಪಿಸಿ 420, 408 ಮತ್ತು 406 ಅಡಿಯಲ್ಲಿ ಕೇಸ್ ದಾಖಲಾಗಿತ್ತು. ಈಗ ಅದರ ವಿಚಾರವಾಗಿ ಬೆಂಗಳೂರಿನಲ್ಲಿ ಈ ಕುರಿತು ಕೋರ್ಟ್ ತೀರ್ಪು ನೀಡಿ ಅವರನ್ನ 7 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಲು ತೀರ್ಪು ನೀಡಿದೆ.
from India & World News in Kannada | VK Polls https://ift.tt/3q1hgIA