ಬೆಂಗಳೂರು: ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀ ಕೃಷ್ಣ ಭಟ್ ಅಲಿಯಾಸ್ ಶ್ರೀಕಿಯ ಬಿಟ್ ಕಾಯಿನ್ ವಂಚನೆ ಪ್ರಕರಣದ ತನಿಖೆ ನಡೆಯುತ್ತಿರುವ ಹೊತ್ತಿನಲ್ಲಿಯೇ ಮತ್ತೊಂದು ಬಿಟ್ ಕಾಯಿನ್ ಮೂಲಕ 13 ಲಕ್ಷ ರೂ. ವಂಚನೆ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಗೊಟ್ಟಿಗೆರೆ ನಿವಾಸಿ ಈರಪ್ಪ ನಾಯಕ್ (31) ಹಣ ಕಳೆದುಕೊಂಡ ವ್ಯಕ್ತಿಯಾಗಿದ್ದು, ಈ ಸಂಬಂಧ ಆಗ್ನೇಯ ವಿಭಾಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪರಿಚಿತನೊಬ್ಬ ಈರಪ್ಪ ನಾಯಕ್ ಅವರ ಮೊಬೈಲ್ ನಂಬರ್ ಅನ್ನು ಅ.11 ರಂದು ಬಿಟ್‌ಕಾಯಿನ್‌ಗೆ ಸಂಬಂಧಿಸಿದ ವಾಟ್ಸ್ಯಾಪ್ ಗ್ರೂಪ್‌ಗೆ ಸೇರಿಸಿದ್ದಾನೆ. ಆ ಗ್ರೂಪ್ ಮೂಲಕ ಅನಲಿಸ್ಟಾ ವೆನೆಸ್ಸಾ ಎಂಬವರ ಪರಿಚಯವಾಗಿ ಬಿಟ್ ಕಾಯಿನ್ ವರ್ಗಾವಣೆ ಪ್ರಕ್ರಿಯೆ ಬಗ್ಗೆ ಪರಿಚಯಿಸಿ, ಆನ್‌ಲೈನ್‌ನಲ್ಲಿ ರಿಜಿಸ್ಟರ್ ಮಾಡಿಸಿದ್ದಾರೆ. ಅಲ್ಲದೆ, ವೆನೆಸ್ಸಾ ಬಿಟ್‌ಕಾಯಿನ್‌ನಲ್ಲಿ ಹೂಡಿಕೆ ಮಾಡಿದರೆ ಅಧಿಕ ಲಾಭ ಬರುತ್ತದೆ ಎಂದು ಹೇಳಿ ನಂಬಿಸಿದ್ದಾರೆ. ಮೊದಲ ಹಂತದಲ್ಲಿ ಈರಪ್ಪನ ನಾಯಕ್ ಅವರಿಂದ 3,04,263 ರೂ. ಹೂಡಿಕೆ ಮಾಡಿಸಿದ್ದಾರೆ. ‘ನೀವು ಹೂಡಿಕೆ ಮಾಡಿರುವ ಹಣದಿಂದ ನಿಮಗೆ ಅಧಿಕ ಲಾಭ ಬಂದಿದೆ. ಆ ಹಣವನ್ನು ನೀವು ವಾಪಸ್ ಪಡೆಯಲು ಹಲವಾರು ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ’ ಎಂದು ಹೇಳಿ ನಾಯಕ್ ಅವರ ಬ್ಯಾಂಕ್ ಖಾತೆಯಿಂದ ಹಂತ -ಹಂತವಾಗಿ 13,62,817 ರೂ. ವರ್ಗಾವಣೆ ಮಾಡಿಕೊಂಡು ಲಾಭ ಹಾಗೂ ಅಸಲು ಹಣವನ್ನು ಕೊಡದೇ ವಂಚಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಒಂದೂವರೆ ವರ್ಷದ ಹಿಂದೆ ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಭಟ್ ಅಲಿಯಾಸ್ ಶ್ರೀಕಿ ಸರಕಾರಿ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿದ್ದಲ್ಲದೆ, ರಾಜಕೀಯ ನಾಯಕರು, ಸರಕಾರಿ ಅಧಿಕಾರಿಗಳಿಗೆ ಬಿಟ್‌ಕಾಯಿನ್ ಕೊಡಿಸಿದ್ದಾನೆ ಎಂಬ ಮಾಹಿತಿ ಬೆಳಕಿಗೆ ಬಂದಿತ್ತು. ಅಲ್ಲದೆ, ಈತನ ಬಳಿ ಸಾವಿರಾರು ಬಿಟ್‌ಕಾಯಿನ್‌ಗಳಿದ್ದು, ಅವುಗಳನ್ನು ಅಕ್ರಮವಾಗಿ ನೆರೆ ರಾಜ್ಯಗಳಲ್ಲಿರುವ ಸ್ನೇಹಿತರ ಖಾತೆಗೆ ಹಾಕಿದ್ದಾನೆ ಎಂದು ಹೇಳಲಾಗಿದೆ. ಆದರೆ, ಇದುವರೆಗೂ ಆತನ ಬಳಿ ಇರುವ ಬಿಟ್‌ಕಾಯಿನ್ ಎಷ್ಟು ಎಂಬುದರ ಬಗ್ಗೆ ತನಿಖಾ ಸಂಸ್ಥೆಗೆ ಮಾಹಿತಿ ಇಲ್ಲ. ಈ ಸಂಬಂಧ ನಗರ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
from India & World News in Kannada | VK Polls https://ift.tt/3ztCsdl