ಮತ್ತೆ ಗಗನಕ್ಕೇರಿದ ತರಕಾರಿ ಬೆಲೆ; ಸಂತೆಯಲ್ಲಿ ಖರೀದಿಗೆ ಗ್ರಾಹಕರ ಹಿಂದೇಟು

ಹೈದರ್‌ಸಾಬ್‌ ಕುಂದಾಣ ಗ್ರಾಮಾಂತರ: ಜಿಲ್ಲೆಯ ನಾಲ್ಕು ತಾಲೂಕುಗಳ ಸಂತೆಗಳಲ್ಲಿ ತರಕಾರಿ ಬೆಲೆ ಏರಿಕೆಯಾಗಿದೆ. ಗ್ರಾಹಕರು ತರಕಾರಿ ಖರೀದಿಸಲು ಹಿಂದೇಟು ಹಾಕುವಂತಾಗಿದ್ದು, ವ್ಯಾಪಾರಿಗಳು ಮತ್ತು ಗ್ರಾಹಕರ ಮಧ್ಯೆ ಚೌಕಾಸಿಯ ವ್ಯಾಪಾರ ನಡೆಯುತ್ತಿದೆ. ಕಳೆದ ತಿಂಗಳಿನಿಂದ ಸುರಿದ ಅಕಾಲಿಕ ಮಳೆಯಿಂದಾಗಿ ವಾತಾವರಣದಲ್ಲಿ ಏರುಪೇರಾಗಿದ್ದ ಕಾರಣ ರೈತರು ಬೆಳೆದ ತರಕಾರಿ, ಹಣ್ಣುಗಳು ಮಾರುಕಟ್ಟೆಗಳಲ್ಲಿ ಕೊಳೆಯುವಂತಾಗಿದ್ದು, ಇದೀಗ ಮಾರುಕಟ್ಟೆಯಲ್ಲಿ ಗುಣಮಟ್ಟದ ತರಕಾರಿ-ಹಣ್ಣುಗಳಿಗೆ ಬೆಲೆ ಏರಿಕೆ ಬಿಸಿ ಗ್ರಾಹಕರನ್ನು ಕಾಡತೊಡಗಿದೆ. ನುಗ್ಗೆ, ಕ್ಯಾರೆಟ್‌ ಬೆಲೆ ಗಗನಮುಖಿ: ತರಕಾರಿ ಬೆಲೆಗಳ ಏರಿಕೆಯ ಮಧ್ಯೆ 100ರೂ.ಗಡಿದಾಟಿದ ಕ್ಯಾರೆಟ್‌ ಮತ್ತು 150ರೂ.ಗಳಂತೆ ನುಗ್ಗೆಕಾಯಿ ಬೆಲೆ ಏರಿಕೆ ಗ್ರಾಹಕರನ್ನು ಕಂಗಾಲಾಗಿಸಿದೆ. ಶೇ.50ರಷ್ಟು ತರಕಾರಿ ಬೆಳೆಗಳು ಸಂತೆಯಲ್ಲಿ ಕೊಳೆಯುತ್ತಿದ್ದು, ಎಪಿಎಂಸಿ ಮಾರುಕಟ್ಟೆಗಳು, ನೆರೆ ರಾಜ್ಯಗಳ ಮಾರುಕಟ್ಟೆಗಳಿಂದ ಬರುವ ತರಕಾರಿಗಳು ಬಹುತೇಕ ನಾಶವಾಗುತ್ತಿರುವುದರಿಂದ ತರಕಾರಿ- ಹಣ್ಣುಗಳ ಬೆಲೆ ಏರಿಕೆಗೆ ಮುಖ್ಯ ಕಾರಣವಾಗುತ್ತಿದೆ. ಅಕಾಲಿಕ ಮಳೆ: ಅಕಾಲಿಕ ಮಳೆ ಮತ್ತು ಮೋಡ ಮುಸುಕಿದ ವಾತಾವರಣದಿಂದಾಗಿ ರೈತರು ಬೆಳೆದ ತರಕಾರಿ, ಹಣ್ಣು, ಸೊಪ್ಪು ಕೊಳೆಯಲು ಕಾರಣವಾಗುತ್ತಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆ ಮತ್ತು ಸಂತೆಗಳಲ್ಲಿ ಹಣ್ಣು-ತರಕಾರಿ ಕೊರತೆಯುಂಟಾಗಿದೆ. ವಾರದ ಸಂತೆಗಳಲ್ಲಿ ತರಕಾರಿ ಬೆಲೆ ಏರಿಕೆಯಾಗಿದ್ದು, ತಾಲೂಕಿನ ದೇವನಹಳ್ಳಿ ಸಂತೆ, ವಿಜಯಪುರ ಸಂತೆ, ಕುಂದಾಣದ ಚಪ್ಪರಕಲ್ಲು, ಚನ್ನರಾಯಪಟ್ಟಣ ಸಂತೆಗಳಲ್ಲಿ ತರಕಾರಿ ಬೆಲೆ ಏರಿಕೆಗೆ ಗ್ರಾಹಕರು ಮತ್ತು ವ್ಯಾಪಾರಸ್ಥರ ನಡುವೆ ವಾಗ್ಧಾಳಿಗಳು ನಡೆಯುತ್ತಿರುವುದು ಸಾಮಾನ್ಯವಾಗಿ ಕಂಡುಬರುತ್ತಿದೆ. ತರಕಾರಿ-ಹಣ್ಣಿನ ಬೆಲೆನುಗ್ಗೆಕಾಯಿ 150ರೂ, ಕ್ಯಾರೆಟ್‌ 80ರೂ, ಈರುಳ್ಳಿ, ಟೋಮೆಟೋ ಬೆಲೆ ಏರಿಕೆ ಕಂಡಿದ್ದು, ಕೆಜಿಗೆ 50-60ರೂ.ಇದ್ದು, ಈರುಳ್ಳಿ ಕೆಜಿ 30-40ರೂ, ಬದನೆಕಾಯಿ ಕೆಜಿಗೆ 40-60ರೂ, ಬೆಂಡೆಕಾಯಿ ಕೆಜಿ 60ರೂ., ಹೀರೆಕಾಯಿ ತಲಾ 30ರೂ., ನೌಕಲ್‌, ಮೂಲಂಗಿ, ಆಲೂಗಡ್ಡೆ 25ರೂ.ಗಳಂತೆ ಮಾರಾಟವಾಗುತ್ತಿದೆ. ಸೊಪ್ಪುಗಳಾದ ಕೊತ್ತಂಬರಿ, ಪುದೀನಾ, ಪಾಲಕ್‌, ಮೆಂತ್ಯೆ, ದಂಟು ಸೊಪ್ಪು ಪ್ರತಿ ಕಟ್ಟು 10ರೂ-20ರೂ.ಗಳಂತೆ ಮಾರಾಟವಾಗುತ್ತಿದೆ. ಸೊಪ್ಪು ಮಾರಾಟದಲ್ಲಿ ಸೊಪ್ಪಿನ ಗುಣಮಟ್ಟ ಕಡಿಮೆ ಇದ್ದರೂ ಸಹ ಬೆಲೆ ಮಾತ್ರ ಅಷ್ಟೇ ಇದೆ. ಹಣ್ಣುಗಳ ಬೆಲೆಯೂ ಸಹ ಏರಿಕೆಯಲ್ಲಿದ್ದು, ಸೇಬು, ದಾಳಿಂಬೆ, ಸಪೋಟ ಗುಣಮಟ್ಟದ ಆಧಾರದಲ್ಲಿ ವಿಂಗಡಿಸಿ ಕೆಜಿ 100 ರಿಂದ 180ರೂ. ವರೆಗೆ ಮಾರಾಟ ಮಾಡಲಾಗುತ್ತಿದೆ. ಚುಕ್ಕೆ ಬಾಳೆಹಣ್ಣು ಕೆಜಿ 30ರೂ., ಏಲಕ್ಕಿ ಬಾಳೆಹಣ್ಣು ಕೆಜಿಗೆ 30-40ರೂ.ಗಳವರೆಗೆ ಮಾರಾಟವಾಗುತ್ತಿದೆ. ವಾತಾವರಣ ವೈಪರೀತ್ಯ ಮತ್ತು ಮಾರುಕಟ್ಟೆಯಲ್ಲಿ ಗುಣಮಟ್ಟದ ತರಕಾರಿ ಲಭ್ಯವಿಲ್ಲದಿರುವುದರಿಂದ ಇರುವ ಲಭ್ಯತೆಯ ಆಧಾರದಲ್ಲಿ ವ್ಯಾಪಾರ ವಹಿವಾಟು ನಡೆಸಲಾಗುತ್ತಿದೆ. ಪ್ರಸ್ತುತ ನುಗ್ಗೆಕಾಯಿ ಮತ್ತು ಕ್ಯಾರೆಟ್‌ ಬೆಲೆ ಹೆಚ್ಚಾಗಿದೆ. ಗ್ರಾಹಕರು ಬೆಲೆ ಏರಿಕೆಗೆ ಕೊಂಡುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ವ್ಯಾಪಾರ ಕುಸಿತದಿಂದ ಹಾಕಿರುವ ಬಂಡವಾಳ ಕೈ ಸೇರುತ್ತಿಲ್ಲ ಎಂದು ಹೇಳುತ್ತಾರೆ ರಾಮನಾಥಪುರದ ತರಕಾರಿ ವ್ಯಾಪರಸ್ಥ ಮಂಜುನಾಥ್‌. ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಹೋಗಿ ತರಕಾರಿ ಬೆಲೆ ವಿಚಾರಿಸಿದರೆ ಸಾಕಷ್ಟು ಬೆಲೆ ಹೇಳುತ್ತಿದ್ದಾರೆ. ಮನೆ ಸಂಸಾರ ನಡೆಸುವುದೇ ಕಷ್ಟವಾಗಿದೆ. ಏನು ಮಾಡೋದು ಮನೆ ಸಂಸಾರ ನಡೆಸಲು ದುಬಾರಿ ಹಣಕೊಟ್ಟು ಅಲ್ಪ ಪ್ರಮಾಣದಲ್ಲಿ ತರಕಾರಿ ಖರೀದಿಸುವಂತಾಗಿದೆ ಎಂದು ಅಳಲು ತೋಡಿಕೊಳ್ಳುತ್ತಾರೆ ಗೃಹಿಣಿ ಶೈಲಾ ಕೆ.ಬಿ.


from India & World News in Kannada | VK Polls https://ift.tt/3thurqV

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...