ಪ್ರಕಾಶ್ ಜಿ. ಹಾಸನ: ಜನಸಾಮಾನ್ಯರ ಬದುಕನ್ನು ಸಂಕಷ್ಟಕ್ಕೆ ತಳ್ಳುವ ಈ ಅವಶ್ಯವಿತ್ತೇ? ಕೋವಿಡ್ ಜಾಗೃತಿ ಜತೆಗೆ ಎಚ್ಚರಿಕೆ ವಹಿಸಿದ್ದರೆ ಅಷ್ಟೇ ಸಾಕಿತ್ತಲ್ಲವೇ ಎಂಬ ಚರ್ಚೆಯೊಂದಿಗೆ ಸರಕಾರದ ನಿರ್ಧಾರದ ಬಗ್ಗೆ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಕೊರೊನಾ ರೂಪಾಂತರಿ ಓಮಿಕ್ರಾನ್ ರಾಜಧಾನಿ ಬೆಂಗಳೂರಿನಲ್ಲಿ ತಲ್ಲಣ ಸೃಷ್ಟಿಸಿದೆ, ದೇಶ, ವಿದೇಶದಿಂದ ಲಕ್ಷಾಂತರ ಜನ ನಿತ್ಯ ಬರುವ ಊರಿನಲ್ಲಿ ಮುನ್ನೆಚ್ಚರಿಕೆ ವಹಿಸುವುದು ಸಮಂಜಸ. ಆದರೆ, ರಾಜ್ಯಾದ್ಯಂತ ಜಾರಿಗೊಳಿಸಿ ಸಂಚಾರ, ವ್ಯಾಪಾರ-ವಹಿವಾಟು ಜನರ ದೈನಂದಿನ ಬದುಕಿಗೂ ಪೆಟ್ಟು ನೀಡುವ ಇಂತಹ ಕರ್ಫ್ಯೂ ಔಚಿತ್ಯಪೂರ್ಣವೇ? ಮೊದಲೇ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ತಳ್ಳಲ್ಪಟ್ಟಿದೆ, ವ್ಯಾಪಾರ, ವಹಿವಾಟು, ವಾಣಿಜ್ಯ, ಕೈಗಾರಿಕೆ ಹೀಗೆ ಪ್ರತಿಯೊಂದು ಕ್ಷೇತ್ರದ ಮೇಲೆ ಕೊರೊನಾ ಕರಿನೆರಳು ಸಾಕಷ್ಟು ಸಮಸ್ಯೆ ಸೃಷ್ಟಿಸಿದೆ. ಒಂದು ಮತ್ತು ಎರಡನೇ ಅಲೆಯಲ್ಲಿ ಆದ ಸಂಕಷ್ಟ, ಸಮಸ್ಯೆ, ನಷ್ಟದಿಂದ ಪಾರಾಗಲು ಹರಸಾಹಸ ಪಡುತ್ತಿರುವ ಸಂದರ್ಭದಲ್ಲಿ ವೀಕೆಂಡ್ ಕರ್ಫ್ಯೂ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂಬ ಆರೋಪ ಜನಸಾಮಾನ್ಯರು, ವರ್ತಕರು, ಉದ್ಯಮಿಗಳಿಂದ ಕೇಳಿಬರುತ್ತಿದೆ. ಜಿಲ್ಲೆಯಲ್ಲಿ ದಿನಸಿ ಅಂಗಡಿಗಳು ತೆರೆದು ವ್ಯಾಪಾರ ಮಾಡಲು ಅವಕಾಶ ಕಲ್ಪಿಸಿದ್ದರೂ, ಕೊಳ್ಳುವವರೇ ಇಲ್ಲದೆ ಬಾಗಿಲು ತೆರೆದು ಏನು ಪ್ರಯೋಜನ ಎಂಬ ಕಾರಣಕ್ಕೆ ಶೇ.90ರಷ್ಟು ಸಗಟು ಹಾಗೂ ರಿಟೇಲ್ ಅಂಗಡಿಗಳು ಬಾಗಿಲು ಮುಚ್ಚಿದ್ದವು. ನಿತ್ಯ ಕೋಟ್ಯಂತರ ರೂ. ವಹಿವಾಟು ನಡೆಸುತ್ತಿದ್ದ ಸ್ಯಾನಿಟರಿ, ಟೈಲ್ಸ್, ಮಾರ್ಬಲ್ ಇನ್ನಿತ್ಯಾದಿ ಅಂಗಡಿಗಳು ಬಾಗಿಲು ಮುಚ್ಚಿ ದೊಡ್ಡ ಪ್ರಮಾಣದಲ್ಲಿ ಹಾನಿಯಂಟು ಮಾಡಿದೆ ಎಂದು ವರ್ತಕರು ಅಳಲು ತೋಡಿಕೊಂಡರು. ಹೋಟೆಲ್ ಉದ್ಯಮ ಮೊದಲೇ ನೆಲಕಚ್ಚಿ ಚೇತರಿಕೆ ಕನಸು ಕಾಣುತ್ತಿದ್ದ ವೇಳೆ ಕರ್ಫ್ಯೂ ವಾರಾಂತ್ಯದ ವ್ಯಾಪಾರಕ್ಕೂ ದೊಡ್ಡ ಪೆಟ್ಟು ನೀಡಿತು. ಮನೆಮಂದಿ ಎಲ್ಲ ಹೊರಗೆ ಹೋಗಿ ಊಟ ಮಾಡಿಬರೋಣ ಎಂಬುದಕ್ಕೆ ವಾರಾಂತ್ಯವನ್ನೇ ಆಯ್ಕೆ ಮಾಡಿಕೊಂಡು ಬರುತ್ತಿದ್ದರು. ಇದೀಗ ಅವರೆಲ್ಲ ಮನೆಯಲ್ಲಿ ಉಳಿಯುವಂತಾಗಿ ವ್ಯಾಪಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಬಹುತೇಕ ಹೋಟೆಲ್ ಮಾಲೀಕರು ಸ್ವಯಂ ಪ್ರೇರಿತವಾಗಿ ಬಾಗಿಲು ಮುಚ್ಚಿದ್ದಾರೆ ಎನ್ನುತ್ತಾರೆ ಹೋಟೆಲ್ ಉದ್ಯಮಿ ಪ್ರವೀಣ್. ಜಿಲ್ಲೆಯಲ್ಲಿ ಎರಡು ಸಾವಿರದಷ್ಟು ಕೈಗಾರಿಕೆಗಳಿದ್ದು, ಬಸ್ ಸಮಸ್ಯೆಯಿಂದ ಹಾಗೂ ವೀಕೆಂಡ್ ಕರ್ಫ್ಯೂ ಇದೆಯಲ್ಲ ಎಂಬ ಸಬೂಬು ಕಾರಣ ಕಾರ್ಮಿಕರೇ ಬಂದಿಲ್ಲ. ಹೀಗಾಗಿ ಕೈಗಾರಿಕೆಗಳ ಬಾಗಿಲು ತೆರೆದಿದ್ದರೂ, ಉತ್ಪಾದನೆ ಮೇಲೆ ಪರಿಣಾಮ ಬೀರಿದೆ. ಉತ್ಪನ್ನವಿದ್ದರೂ ಮಾರುಕಟ್ಟೆಯೇ ಬಂದ್ ಆಗಿರುವ ಕಾರಣ ಕೇಳುವವರು ಇಲ್ಲ, ಗೂಡ್ಸ್ ಲಾರಿಗಳು ಬರುತ್ತಿಲ್ಲ. ಎಲ್ಲವೂ ಒಂದಕ್ಕೊಂದು ಸರಪಳಿಯಂತೆ ಸುತ್ತಿಕೊಂಡು ನಷ್ಟಕ್ಕೀಡು ಮಾಡಿದೆ ಎನ್ನುತ್ತಾರೆ ಉದ್ಯಮಿ ಭಾಸ್ಕರ್. ಸಂಕ್ರಾಂತಿಗೆ ಪೆಟ್ಟುಸಂಕ್ರಾಂತಿ ಹಬ್ಬಕ್ಕೆ ವಾರವಷ್ಟೇ ಬಾಕಿ ಇದೆ, ಬಟ್ಟೆ ವ್ಯಾಪಾರಿಗಳು, ದಿನಸಿ ಅಂಗಡಿಯವರು ಸಾಲ, ಸೂಲ ಮಾಡಿ ಬಂಡವಾಳ ಹಾಕಿಕೊಂಡು ಕುಳಿತಿದ್ದಾರೆ. ಕಬ್ಬು ಬೆಳೆಗಾರರು ಕೊಯ್ಲಿಗೆ ಸಿದ್ಧತೆ ಮಾಡಿಕೊಂಡಿದ್ದಾರೆ, ಕಬ್ಬಿನ ಗಾಣಗಳಲ್ಲಿ ಬೆಲ್ಲ ತಯಾರಿಸಿದ್ದಾಗಿದೆ. ಕೊಬ್ಬರಿಗೆ ಬೆಲೆ ಇದ್ದರೂ, ಮಾರುಕಟ್ಟೆ ಬಂದ್ ಆಗಿ ಕೊಳ್ಳುವವರು, ಖರೀದಿಸುವವರು ಇಲ್ಲವಾಗಿದೆ. ಒಟ್ಟಾರೆ ಎಲ್ಲವೂ ಕೋಟಿ ಲೆಕ್ಕದಲ್ಲೇ ನಷ್ಟದ ಅಂದಾಜು ಮಾಡಲಾಗುತ್ತಿದೆ. ವೀಕೆಂಡ್ ಕರ್ಫ್ಯೂ ನಷ್ಟವನ್ನುಂಟು ಮಾಡುತ್ತಿದೆ. ಜೀವ ಇದ್ದರೆ ಜೀವನ ಎಂಬುದನ್ನು ಒಪ್ಪಿಕೊಳ್ಳುತ್ತೇವೆ. ಅದೇ ರೀತಿ ದುಡಿಮೆ ಇಲ್ಲದೆ ಬದುಕಲು ಸಾಧ್ಯವಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕಲ್ಲವೇ ಎಂಬುದು ವರ್ತಕರು, ಜನಸಾಮಾನ್ಯರ ಪ್ರಶ್ನೆಯಾಗಿದೆ.
from India & World News in Kannada | VK Polls https://ift.tt/3zBBxaM