ಬೆಂಗಳೂರು: ಜಾರಿ ನಿರ್ದೇಶನಾಲಯವು ಹಣ ಅಕ್ರಮ ವರ್ಗಾವಣೆ ಕಾಯ್ದೆಯಡಿ (ಪಿಎಂಎಲ್‌ಎ) ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ದೇಶದಾದ್ಯಂತ ತನಿಖೆ ನಡೆಸಬಹುದು ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ಜಾರಿ ನಿರ್ದೇಶನಾಲಯದ ತನಿಖೆ ರದ್ದುಪಡಿಸುವಂತೆ ಕೋರಿ ಅನೀಶ್ ಮೊಹಮ್ಮದ್ ರಾಥರ್ ಮತ್ತು ಇತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್, ಈ ಆದೇಶ ಮಾಡಿದ್ದಾರೆ. ‘ಹಣ ಅಕ್ರಮ ವರ್ಗಾವಣೆ ಕಾಯಿದೆಯ ಸೆಕ್ಷನ್ 1(2) ಪ್ರಕಾರ ಜಾರಿ ನಿರ್ದೇಶನಾಲಯವು ದೇಶಾದ್ಯಂತ ತನಿಖೆ ನಡೆಸಬಹುದು ಎಂದು ಸ್ಪಷ್ಟವಾಗಿ ಹೇಳಲಾಗಿದೆ’ ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ. ಅರ್ಜಿದಾರರ ಪರ ಹಿರಿಯ ವಕೀಲ ಕಿರಣ್ ಎಸ್. ಜವಳಿ, ‘ಪಿಎಂಎಲ್ ಕಾಯಿದೆಯ ಶೆಡ್ಯೂಲ್ ಅಪರಾಧ ಪ್ರಕರಣಗಳ ವ್ಯಾಪ್ತಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಜಾರಿಯಿರುವ ರಣಬೀರ್ ದಂಡ ಸಂಹಿತೆ ಮತ್ತು ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿಯ ಅಪರಾಧ ಪ್ರಕರಣಗಳು ಬರುವುದಿಲ್ಲ. ಅಲ್ಲಿ ದಾಖಲಾದ ಪ್ರಕರಣಕ್ಕೆ ಕೇಂದ್ರ ಸರಕಾರ ಜಾರಿಗೆ ತಂದ ಕಾನೂನುಗಳು ಅನ್ವಯಿಸುವುದಿಲ್ಲ. ಹೀಗಾಗಿ, ತನಿಖೆ, ಕಂಪನಿಯ ಆಸ್ತಿ ಜಪ್ತಿಗೆ ಹೊರಡಿಸಿರುವ ಆದೇಶ ರದ್ದುಪಡಿಸಬೇಕು’ ಎಂದು ಕೋರಿದರು. ‘ಸದ್ಯ ಕಾಶ್ಮೀರ ವಿಶೇಷ ಸ್ಥಾನಮಾನ ನಿಯಮಕ್ಕೆ ಕೇಂದ್ರ ತಿದ್ದುಪಡಿ ಮಾಡಿದೆ. ಹಿರಿಯ ವಕೀಲ ಜವಳಿ ಅವರ ವಾದ ಒಪ್ಪಿಕೊಂಡರೆ, ರಾಜ್ಯವೊಂದರಲ್ಲಿ ಅಪರಾಧ ಕೃತ್ಯ ನಡೆಸಿದವರು ಶಿಕ್ಷೆಯಿಂದ ಪಾರಾಗುವ ಸಾಧ್ಯತೆಯಿದೆ. ಜತೆಗೆ ಇಡೀ ದೇಶದ ಮೇಲೆ ಆಗುವ ಪ್ರಭಾವ ಗಮನಿಸಬೇಕಾಗುತ್ತದೆ’ ಎಂದು ಹೈಕೋರ್ಟ್ ಹೇಳಿದೆ. ಪ್ರಕರಣದ ಹಿನ್ನೆಲೆ: ಮೆರ್ಸಸ್ ಎಸ್.ಎ. ರಾಥರ್ ಸ್ಪೈಸಿಸ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿ 2002ರಿಂದ 2017ರ ನಡುವೆ ಜಮ್ಮು ಮತ್ತು ಕಾಶ್ಮೀರ ಬ್ಯಾಂಕಿನ ಬೆಂಗಳೂರು ಶಾಖೆಯಿಂದ 308.13 ಕೋಟಿ ರೂ. ಸಾಲ ಪಡೆದಿತ್ತು. ಆದರೆ, 2017ರಲ್ಲಿ ನಷ್ಟ ತೋರಿಸಿ ಸಾಲದ ಮೊತ್ತ ಹಿಂದಿರುಗಿಸಿರಲಿಲ್ಲ. ಇದೇ ಬ್ಯಾಂಕಿಗೆ ಭದ್ರತೆಯಾಗಿ ನೀಡಿದ್ದ ಕಂಪನಿಯ ಆಸ್ತಿಯನ್ನು ಇತರೆ ಖಾಸಗಿ ಬ್ಯಾಂಕಿಗಳಿಗೂ ನೀಡಿ ದೊಡ್ಡ ಮೊತ್ತದ ಸಾಲ ಪಡೆದಿತ್ತು ಹಾಗೂ ಬೇರೆ ಬೇರೆ ಕಂಪನಿಗಳಿಗೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದೆ ಎಂಬ ಆರೋಪ ಕಂಪನಿ ಮೇಲಿದೆ.
from India & World News in Kannada | VK Polls https://ift.tt/3HM6k7G