ಕೇಪ್ ಟೌನ್: ಸರಣಿ ನಿರ್ಣಾಯಕ ಟೆಸ್ಟ್ ಪಂದ್ಯದಲ್ಲಿ ಎದುರು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ ಎಂದು ಬ್ಯಾಟಿಂಗ್ ಕೋಚ್ ಒಪ್ಪಿಕೊಂಡಿದ್ದಾರೆ. ಇಲ್ಲಿನ ನ್ಯೂಲೆಂಡ್ಸ್ ಕ್ರೀಡಾಂಗಣದಲ್ಲಿ ಮಂಗಳವಾರ ಶುರುವಾದ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ಮುಂದಾದ ಬಳಗ ಮೊದಲ ಇನಿಂಗ್ಸ್‌ನಲ್ಲಿ 223 ರನ್‌ಗಳ ಸಾಧಾರಣ ಮೊತ್ತಕ್ಕೆ ಆಲ್‌ಔಟ್ ಆಯಿತು. ಕ್ಯಾಪ್ಟನ್ ಕೊಹ್ಲಿ ಏಕಾಂಗಿ ಹೋರಾಟ ನಡೆಸಿ 201 ಎಸೆತಗಳಲ್ಲಿ 79 ರನ್‌ಗಳ ಕೊಡುಗೆ ಸಲ್ಲಿಸಿ ತಂಡದ ಮೊತ್ತ 200ರ ಗಡಿ ದಾಟುವಂತೆ ಮಾಡಿದೆ. ಮೊದಲ ದಿನದಾಟದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಠೋರ್, ಟೀಮ್ ಇಂಡಿಯಾ ಬ್ಯಾಟಿಂಗ್ ವೈಫಲ್ಯ ಕಂಡರೂ ವಿರಾಟ್ ಕೊಹ್ಲಿ ಅವರ ಹೋರಾಟವನ್ನು 'ಶಿಸ್ತಿನ ಆಟ' ಎಂದು ಹೊಗಳಿದ್ದಾರೆ. "ಅವರ ಬ್ಯಾಟಿಂಗ್‌ನಲ್ಲಿ ಸಮಸ್ಯೆ ಏನೂ ಇರಲಿಲ್ಲ. ಅವರು ಸದಾ ಉತ್ತಮವಾಗಿಯೇ ಬ್ಯಾಟ್ ಮಾಡುತ್ತಾರೆ. ಅವರು ಚೆನ್ನಾಗಿ ಬ್ಯಾಟ್ ಮಾಡುತ್ತಿಲ್ಲ ಎಂದು ಬ್ಯಾಟಿಂಗ್ ಕೋಚ್ ಆಗಿ ನಾನು ಎಂದಿಗೂ ಕೂಡ ತಲೆ ಕೆಡಿಸಿಕೊಂಡಿದ್ದಿಲ್ಲ. ಏಕೆಂದರೆ ನೆಟ್ಸ್‌ನಲ್ಲಿ ಅಷ್ಟು ಅದ್ಭುತವಾಗಿ ಆಡುತ್ತಾರೆ. ಪಂದ್ಯಗಳಲ್ಲೂ ಕೂಡ ಉತ್ತಮವಾಗಿಯೇ ಆಡಿರುತ್ತಾರೆ. ಉತ್ತಮ ಆರಂಭ ಪಡೆದು ಅದನ್ನು ದೊಡ್ಡ ಇನಿಂಗ್ಸ್ ಆಗಿ ಪರಿವರ್ತಿಸಲು ವಿಫಲರಾಗುತ್ತಿದ್ದರು. ಇಂದು ಅವರ ಆಟದಲ್ಲಿ ಕಾಣಿಸಿದ ಬಹುದೊಡ್ಡ ಬದಲಾವಣೆ ಎಂದರೆ ಅದು ಶಿಸ್ತು. ಇಂದು ಅತ್ಯಂತ ಶಿಸ್ತಿನಿಂದ ಬ್ಯಾಟ್ ಮಾಡಿದರು. ಕೊಂಚ ಅದೃಷ್ಟ ಕೈ ಹಿಡಿದಿದ್ದರೆ ಇಂದು ಶತಕ ಬಾರಿಸಿರುತ್ತಿದ್ದರು. ಇಂದು ಅವರು ಆಡಿದ ರೀತಿ ನನಗೆ ತೃಪ್ತಿ ಕೊಟ್ಟಿದೆ," ಎಂದು ರಾಠೋರ್ ಹೇಳಿದ್ದಾರೆ. "ಎದುರಾಳಿ ತಂಡ ಉತ್ತಮವಾಗಿ ಬೌಲಿಂಗ್ ಮಾಡಿದೆ. ಹೀಗಾಗಿ ಅವರೆದುರು ಎಚ್ಚರಿಕೆಯಿಂದ ಬ್ಯಾಟ್ ಮಾಡುವುದು ಅಗತ್ಯವಿತ್ತು. ಕೊಹ್ಲಿ ಅದನ್ನೇ ಮಾಡಿದ್ದಾರೆ. ಶಾಟ್ ಸೆಲೆಕ್ಷನ್ ಅದ್ಭುತವಾಗಿತ್ತು. ಇದೇ ಅವರ ಇನಿಂಗ್ಸ್‌ನ ಪ್ರಮುಖ ಹೈಲೈಟ್," ಎಂದಿದ್ದಾರೆ. ದಿನದ ಅಂತ್ಯಕ್ಕೆ ಮೊದಲ ಇನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡ 8 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 17 ರನ್ ಗಳಿಸಿದೆ. ಅಪಾಯಕಾರಿ ಬ್ಯಾಟ್ಸ್‌ಮನ್ ಹಾಗೂ ಎದುರಾಳಿ ತಂಡದ ನಾಯಕ ಡೀನ್ ಎಲ್ಗರ್ (3) ಅವರನ್ನು ಪೆವಿಲಿಯನ್‌ಗೆ ಸೇರಿಸುವಲ್ಲಿ ಭಾರತ ತಂಡದ ಸ್ಟಾರ್ ವೇಗಿ ಜಸ್‌ಪ್ರೀತ್ ಬುಮ್ರಾ ಯಶಸ್ವಿಯಾದರು. ಓಪನರ್ ಏಡೆನ್ ಮಾರ್ಕ್ರಮ್ (8) ಮತ್ತು ನೈಟ್‌ವಾಚ್‌ಮನ್ ಕೇಶವ್ ಮಹಾರಾಜ್ (6) ಮೊದಲ ದಿನದ ಅಂತ್ಯಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಕೇಪ್ ಟೌನ್ ಟೆಸ್ಟ್ ಪಂದ್ಯದ ಸಂಕ್ಷಿಪ್ತ (ಮೊದಲ ದಿನದ ಅಂತ್ಯಕ್ಕೆ) ಭಾರತ: ಮೊದಲ ಇನಿಂಗ್ಸ್ 77.3 ಓವರ್‌ಗಳಲ್ಲಿ 223 ರನ್‌ಗಳಿಗೆ ಆಲ್‌ಔಟ್ (ಕೆಎಲ್ ರಾಹುಲ್ 12, ಮಯಾಂಕ್ ಅಗರ್ವಾಲ್ 15, ಚೇತೇಶ್ವರ್ ಪೂಜಾರ 43, ವಿರಾಟ್ ಕೊಹ್ಲಿ 79, ರಿಷಭ್ ಪಂತ್ 27; ಕಗಿಸೊ ರಬಾಡ 73ಕ್ಕೆ 4, ಮಾರ್ಕೊ ಯೆನ್ಸನ್ 55ಕ್ಕೆ 3, ಡುವಾನ್ ಓಲಿವಿಯರ್ 42ಕ್ಕೆ 1, ಕೇಶವ್ ಮಹಾರಾಜ್ 14ಕ್ಕೆ 1, ಲುಂಗಿ ಎನ್ಗಿಡಿ 33ಕ್ಕೆ 1). ದಕ್ಷಿಣ ಆಫ್ರಿಕಾ: ಮೊದಲ ಇನಿಂಗ್ಸ್ 8 ಓವರ್‌ಗಳಲ್ಲಿ 1 ವಿಕೆಟ್‌ಗೆ 17 ರನ್ (ಡೀನ್ ಎಲ್ಗರ್ 3, ಏಡೆನ್ ಮಾರ್ಕ್ರಮ್ 8*, ಕೇಶವ್ ಮಹಾರಾಜ್ 6*; ಜಸ್‌ಪ್ರೀತ್ ಬುಮ್ರಾ 0ಕ್ಕೆ 1).
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3tiL0m4