ಹೊಸ ದಿಲ್ಲಿ: ಕಾಂಗ್ರೆಸ್ ಅಧಿನಾಯಕಿ, ಎಐಸಿಸಿ ಹಂಗಾಮಿ ಅಧ್ಯಕ್ಷೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಸ ದಿಲ್ಲಿಯ ಸರ್ ಗಂಗಾರಾಮ್ ಆಸ್ಪತ್ರೆಗೆ ಸೋನಿಯಾ ಗಾಂಧಿ ಅವರನ್ನು ದಾಖಲಿಸಲಾಗಿದೆ. ಮೂಲಗಳ ಪ್ರಕಾರ ಸೋನಿಯಾ ಗಾಂಧಿ ಅವರನ್ನು ತಪಾಸಣೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಕಾರಣ ಸೋನಿಯಾ ಗಾಂಧಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದ್ರೆ, ಆಸ್ಪತ್ರೆಯಿಂದಾಗಲಿ, ಕಾಂಗ್ರೆಸ್ ಪಕ್ಷದ ಕಡೆಯಿಂದಾಗಲಿ ಈ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಸುದ್ದಿ ಸಂಸ್ಥೆಗಳ ಪ್ರಕಾರ, ರೊಟೀನ್ ಚೆಕ್-ಅಪ್‌ಗಾಗಿ ಸೋನಿಯಾ ಗಾಂಧಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಸೋನಿಯಾ ಅವರಿಗೆ ಕೆಲವು ತಪಾಸಣೆಗಳನ್ನು ಮಾಡಬೇಕಿದ್ದು, ಈ ಕಾರಣಕ್ಕಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಶನಿವಾರವಷ್ಟೇ ಮಂಡನೆಯಾದ ಕೇಂದ್ರ ಬಜೆಟ್ ವೇಳೆಯಲ್ಲೂ ಸೋನಿಯಾ ಗಾಂಧಿ ಸಂಸತ್ ಅಧಿವೇಶನಕ್ಕೆ ಗೈರು ಹಾಜರಾಗಿದ್ದರು. ಕೆಲವೇ ವರ್ಷಗಳ ಹಿಂದೆ ಗಂಭೀರ ಆರೋಗ್ಯ ಸಮಸ್ಯೆಗಳಿಂದಾಗಿ ಸೋನಿಯಾ ಗಾಂಧಿ ಅವರು ಅಮೆರಿಕದಲ್ಲಿ ಚಿಕಿತ್ಸೆ ಪಡೆದು ವಾಪಸ್ಸಾಗಿದ್ದರು. ಆ ಸಂದರ್ಭದಲ್ಲಿ ಪಕ್ಷವನ್ನು ಮುನ್ನಡೆಸುವ ಚುಕ್ಕಾಣಿಯನ್ನು ರಾಹುಲ್ ಗಾಂಧಿ ವಹಿಸಿಕೊಂಡಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹಿನ್ನಡೆ ಸಾಧಿಸಿದ ಕಾರಣ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ನೀಡಿದ್ದರು. ಎಐಸಿಸಿ ಮಾಜಿ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ, ರಾಹುಲ್ ರಾಜೀನಾಮೆ ಬಳಿಕ ಹಂಗಾಮಿ ಅಧ್ಯಕ್ಷೆಯಾಗಿ ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಮತ್ತೆ ಹೊತ್ತುಕೊಂಡಿದ್ದರು.
from India & World News in Kannada | VK Polls https://ift.tt/36N2nMZ