ಹೊಸದಿಲ್ಲಿ: ದೆಹಲಿ ಗಲಭೆಗೆ ಸಂಬಂಧಿಸಿದಂತೆ ನಿನ್ನೆ ದೆಹಲಿ ಪೊಲೀಸ್, ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಬೆಂಡೆತ್ತಿದ್ದ ಜಡ್ಜ್ನ್ನು ರಾತ್ರೋ ರಾತ್ರಿ ಮಾಡಲಾಗಿದೆ. ಕೇಂದ್ರದ ಈ ಆದೇಶದಿಂದ ವಿವಾದ ಸೃಷ್ಟಿಯಾಗಿದ್ದು, ನ್ಯಾಯಾಂಗದಲ್ಲಿ ಕೇಂದ್ರ ಮೂಗು ತೂರಿಸುತ್ತಿದೆ ಎಂದು ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ಎಸ್.ಮುರಳಿಧರ್ ಅವರನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ಗೆ ವರ್ಗಾವಣೆ ಮಾಡಿ ಕೇಂದ್ರ ಸರಕಾರ ಬುಧವಾರ ರಾತ್ರಿ ಆದೇಶ ಹೊರಡಿಸಿದೆ. ದೆಹಲಿ ಹೈಕೋರ್ಟ್ನ ಮೂರನೇ ಉನ್ನತ ಜಡ್ಜ್ ಆಗಿದ್ದ ನ್ಯಾ.ಎಸ್.ಮುರಳಿಧರ್ ಅವರನ್ನು ವರ್ಗಾವಣೆ ಮಾಡುವಂತೆ ಸುಪ್ರೀಂ ಕೋರ್ಟ್ನ ಕೋಲಿಜಿಯಂ ಫೆ.12 ರಂದು ಶಿಫಾರಸು ಮಾಡಿತ್ತು. ಅದಾಗಿ ಎರಡು ವಾರಗಳ ನಂತರ ಕೇಂದ್ರ ಅವರನ್ನು ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್ಗೆ ಟ್ರಾನ್ಸಪರ್ ಮಾಡಿದೆ. ಸುಪ್ರೀಂ ಕೋರ್ಟ್ ಕೊಲಿಜಿಯಂ ಮಾಡಿದ್ದ ವರ್ಗಾವಣೆ ಶಿಫಾರಸ್ಸನ್ನು ದೆಹಲಿ ಹೈಕೋರ್ಟ್ ಬಾರ್ ಕೌನ್ಸಿಲ್ ಕಳೆದ ವಾರ ಖಂಡಿಸಿ, ಶಿಫಾರಸನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿತ್ತು. ಕೇಂದ್ರದ ವರ್ಗಾವಣೆ ಆದೇಶವನ್ನು ವಿಪಕ್ಷಗಳು ಟೀಕಿಸುತ್ತಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ ಸೇರಿ ಹಲವರು ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರದ ಮೇಲೆ ಟ್ವೀಟ್ ಪ್ರಹಾರ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಂದೇ ವಾಕ್ಯದ ಟ್ವೀಟ್ ಮೂಲಕ ಕೇಂದ್ರದ ನಡೆಯನ್ನು ಟೀಕಿಸಿದ್ದಾರೆ. ಅವರು ತಮ್ಮ ಟ್ವೀಟ್ನಲ್ಲಿ ವರ್ಗಾವಣೆಯಾಗದ ಧೈರ್ಯಶಾಲಿ ನ್ಯಾಯಾಧೀಶ ಲೋಯಾ ಅವರನ್ನು ಸ್ಮರಿಸಿಕೊಳ್ಳೋಣ ಎಂದು ಬರೆದುಕೊಂಡಿದ್ದಾರೆ. ಇನ್ನು, ಪ್ರಿಯಾಂಕಾ ವಾದ್ರಾ ಕೂಡ ಕೇಂದ್ರದ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ನ್ಯಾಯಮೂರ್ತಿ ಮುರುಳೀಧರ್ ಅವರ ಮಧ್ಯರಾತ್ರಿಯ ವರ್ಗಾವಣೆ ಸದ್ಯದ ಪರಿಸ್ಥಿತಿಯಲ್ಲಿ ಅಚ್ಚರಿ ಪಡುವಂತದ್ದಲ್ಲ. ಆದರೆ, ಇದು ನಿಜಕ್ಕೂ ದುಃಖಕರ ಮತ್ತು ನಾಚಿಕೆಗೇಡಿನ ಸಂಗತಿ. ಲಕ್ಷಾಂತರ ಭಾರತೀಯರು ನ್ಯಾಯಾಂಗದಲ್ಲಿ ನಂಬಿಕೆ ಹೊಂದಿದ್ದಾರೆ. ಅಂತಹ ನ್ಯಾಯಾಂಗದಲ್ಲಿ ಮೂಗು ತೂರಿಸಲು ಮತ್ತು ಜನರ ನಂಬಿಕೆಯನ್ನು ಮುರಿಯಲು ಸರ್ಕಾರ ಪ್ರಯತ್ನ ನಡೆಸುತ್ತಿರುವುದು ಶೋಚನಿಯ ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೂ ಮುನ್ನ, ಬುಧವಾರ ನ್ಯಾಯಮೂರ್ತಿ ಮುರಳೀಧರ್, ಈ ದೇಶದಲ್ಲಿ ಮತ್ತೊಂದು 1984ರ ತರಹದ ಘಟನೆ ನಡೆಯುವುದಕ್ಕೆ ಬಿಡಬಾರದು ಎಂದು ಹೇಳಿ, ಕೇಂದ್ರ ಹಾಗೂ ದೆಹಲಿ ಸರಕಾರಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಹಿಂಸಾಚಾರ ನಿಯಂತ್ರಣಕ್ಕೆ ಪರಸ್ಪರ ಜೊತೆಯಾಗಿ ಕಾರ್ಯನಿರ್ವಹಿಸಲು ಸಲಹೆ ನೀಡಿದ್ದರು. ಪ್ರಚೋದನಕಾರಿ ಭಾಷಣ ಮಾಡಿದ ಬಿಜೆಪಿ ನಾಯಕರ ಮೇಲೆ ಎಫ್ಐಆರ್ ಏಕೆ ದಾಖಲಿಸಿಲ್ಲ ಎಂದು ದೆಹಲಿ ಪೊಲೀಸರನ್ನು ನ್ಯಾ.ಮುರಳೀಧರ್ ಪ್ರಶ್ನಿಸಿದ್ದರು. ಪ್ರಚೋದನಕಾರಿ ಭಾಷಣ ಮಾಡಿದವರ ಮೇಲೆ ಎಫ್ಐಆರ್ ದಾಖಲಿಸುವಂತೆ ಸೂಚನೆ ನೀಡಿದ್ದರು.
from India & World News in Kannada | VK Polls https://ift.tt/2VpZa3W